ರಾಹುಲ್ ಗಾಂಧಿ
ನವದೆಹಲಿ: ಭಾವ ರಾಬರ್ಟ್ ವಾದ್ರ ವಿರುದ್ಧ ಕೇಂದ್ರ ಸರ್ಕಾರ ದ್ವೇಷ ಸಾಧನೆ ಮಾಡುತ್ತಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಹರಿಯಾಣದ ಶಿಖೊಪುರದಲ್ಲಿ ಜಮೀನು ವಹಿವಾಟಿನಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ರಾಬರ್ಟ್ ವಾದ್ರಾ ವಿರುದ್ಧ ಇ.ಡಿ ಆರೋಪ ಪಟ್ಟಿ ಸಲ್ಲಿಸಿದ ಬಳಿಕ ರಾಹುಲ್ ಗಾಂಧಿ ಅವರಿಂದ ಈ ಪ್ರತಿಕ್ರಿಯೆ ಬಂದಿದೆ.
‘ಸತ್ಯ ಯಾವತ್ತೂ ಹೊರಬರಲೇಬೇಕು. ಸಹೋದರಿ ಪ್ರಿಯಾಂಕಾ ಗಾಂಧಿ ಹಾಗೂ ಅವರ ಕುಟುಂಬ ಯಾವುದೇ ತರಹದ ಪ್ರಾಸಿಕ್ಯೂಷನ್ ಎದುರಿಸಲು ಸಿದ್ಧವಾಗಿದೆ ಎಂದು ರಾಹುಲ್ ಹೇಳಿದ್ದಾರೆ.
‘ನನ್ನ ಭಾವನನ್ನು ಈ ಸರ್ಕಾರ ಕಳೆದ 10 ವರ್ಷಗಳಿಂದ ಇನ್ನಿಲ್ಲದೆ ಪೀಡಿಸಿದೆ. ಹೊಸ ಆರೋಪ ಪಟ್ಟಿ ದ್ವೇಷಸಾಧನೆಯ ಮುಂದುವರಿದ ಭಾಗ’ ಎಂದು ಅವರು ಸಾಮಾಜಿಕ ಜಾಲತಾಣ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
‘ಇನ್ನೊಂದು ದುರುದ್ದೇಶಪೂರಿತ, ರಾಜಕೀಯ ಪ್ರೇರಿತ ಅಪಪ್ರಚಾರ ಮತ್ತು ಕಿರುಕುಳದ ದಾಳಿ ಎದುರಿಸಲು ಸಜ್ಜಾಗಿರುವ ರಾಬರ್ಟ್, ಪ್ರಿಯಾಂಕಾ ಹಾಗೂ ಅವರ ಮಕ್ಕಳ ಜೊತೆ ನಿಲ್ಲುತ್ತೇನೆ’ ಎಂದು ಹೇಳಿದ್ದಾರೆ.
‘ಯಾವುದೇ ತರಹದ ವಿಚಾರಣೆಯನ್ನು ಎದುರಿಸುವಷ್ಟು ಅವರು ಧೈರ್ಯವಂತರು ಎಂದು ನನಗೆ ತಿಳಿದಿದೆ. ಅವರು ಘನತೆಯಿಂದ ಅದನ್ನು ಮುಂದುವರಿಸಲಿದ್ದಾರೆ‘ ಎಂದು ರಾಹುಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಕೂಡ ವಾದ್ರಾ ಬೆನ್ನಿಗೆ ನಿಂತಿದ್ದು, ‘ದಶಕ ಕಳೆಯಿತು, ನೂರಾರು ಗಂಟೆಗಳ ವಿಚಾರಣೆ, ಇ.ಡಿ ಮುಂದೆ ಹಲವಾರು ಬಾರಿ ಹಾಜರಾಗಿಯೂ ಆಯಿತು. ಕುಟುಂಬದ ಘನೆತೆಯನ್ನು ಹಾಳುಗೆಡವಲು ಹಲವು ವಿಫಲ ಯತ್ನಗಳನ್ನು ಮಾಡಲಾಯಿತು, ಆದರೂ ಯಾವುದೇ ಸಂಚು ದೃಢಪಟ್ಟಿಲ್ಲ, ಯಾವುದೇ ಸಾಕ್ಷ್ಯ ಸಿಕ್ಕಿಲ್ಲ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.