ನವದೆಹಲಿ: ಬುಧವಾರ ಪುದುಚೇರಿಗೆ ಭೇಟಿ ನೀಡಿದ್ದ ವೇಳೆ ಮೀನುಗಾರರೊಡನೆ ಸಂವಾದ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಬೇಕೆಂದು ಕೇಳಿ ಪೇಚಿಗೆ ಸಿಲುಕಿದ್ದಾರೆ. ಮೀನುಗಾರರನ್ನು ಕಡಲ ರೈತರು ಎಂದು ಕರೆದ ರಾಹುಲ್ ಗಾಂಧಿ, ಕೃಷಿ ಮತ್ತು ರೈತ ಕಾಯ್ದೆ ಬಗ್ಗೆ ಪ್ರಸ್ತಾಪಿಸಿದ ಸಂದರ್ಭದಲ್ಲಿ ಮೀನುಗಾರಿಕೆಗೆ ಕೂಡ ಪ್ರತ್ಯೇಕ ಸಚಿವಾಲಯ ಬೇಕೆಂದು ಹೇಳಿದ್ದಾರೆ.
ದೆಹಲಿಯಲ್ಲಿ ರೈತರಿಗಾಗಿ ಪ್ರತ್ಯೇಕ ಸಚಿವಾಲಯ ಇದೆ, ಆದರೆ ಕಡಲಿನ ರೈತರಿಗೆ ಏನಾದರೂ ಸಮಸ್ಯೆಯಾದರೆ ಅದಕ್ಕಾಗಿ ಪ್ರತ್ಯೇಕ ಇಲಾಖೆ ಇಲ್ಲ. ರೈತರು ಸಮಸ್ಯೆಯಾದರೆ ಕೃಷಿ ಸಚಿವಾಲಯಕ್ಕೆ ಹೋಗುತ್ತಾರೆ. ಆದರೆ ಮೀನುಗಾರರಿಗೆ ಹಾಗಿಲ್ಲ, ಅದಕ್ಕಾಗಿ ಮೀನುಗಾರಿಕೆಗೆ ಸಂಬಂಧಿಸಿ ಪ್ರತ್ಯೇಕ ಸಚಿವಾಲಯದ ಅಗತ್ಯವಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಹೇಳಿಕೆಗೆ ಇಟಾಲಿಯನ್ ಭಾಷೆಯಲ್ಲಿ ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಮತ್ತು ಸಚಿವ ಗಿರಿರಾಜ್ ಸಿಂಗ್, ಇಟಲಿಯಲ್ಲಿ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಇಲ್ಲ. ಅದು ಕೃಷಿ ಮತ್ತು ಅರಣ್ಯ ಇಲಾಖೆ ಅಡಿಯಲ್ಲಿ ಬರುತ್ತದೆ ಎಂದಿದ್ದಾರೆ.
ರಾಹುಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮತ್ತೋರ್ವ ಕೇಂದ್ರ ಸಚಿವ ಕಿರಣ್ ರಿಜಿಜು, 2019ರಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಮೀನುಗಾರಿಕೆ ಸಚಿವಾಲಯ ಸ್ಥಾಪಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.