ADVERTISEMENT

ಕಾಂಗ್ರೆಸ್‌ ಪ್ರತಿಭಟನೆ ನೀಲ ನಕ್ಷೆ ಪ್ರಕಟ

ಒಂದು ತಿಂಗಳು ‘ಜೈ ಭಾರತ ಸತ್ಯಾಗ್ರಹ’, ಬ್ಲಾಕ್‌ ಮಟ್ಟದಿಂದ ರಾಷ್ಟ್ರ ಮಟ್ಟದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 19:21 IST
Last Updated 28 ಮಾರ್ಚ್ 2023, 19:21 IST
ರಾಹುಲ್‌ ಗಾಂಧಿ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ತಿರುವನಂತಪುರದಲ್ಲಿ ಇಂಡಿಯನ್‌ ನ್ಯಾಷನಲ್‌ ಟ್ರೇಡ್‌ ಯೂನಿಯನ್‌ನ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದರು  – ಪಿಟಿಐ ಚಿತ್ರ
ರಾಹುಲ್‌ ಗಾಂಧಿ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ತಿರುವನಂತಪುರದಲ್ಲಿ ಇಂಡಿಯನ್‌ ನ್ಯಾಷನಲ್‌ ಟ್ರೇಡ್‌ ಯೂನಿಯನ್‌ನ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದರು  – ಪಿಟಿಐ ಚಿತ್ರ   

ನವದೆಹಲಿ: ಅದಾನಿ ಸಮೂಹದ ಪ್ರಕರಣ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿದ ಪ್ರಕರಣದ ವಿರುದ್ಧ ಮುಂದಿನ ಒಂದು ತಿಂಗಳ ಹೋರಾಟದ ನೀಲನಕ್ಷೆಯನ್ನು ಕಾಂಗ್ರೆಸ್ ಮಂಗಳವಾರ ಪ್ರಕಟಿಸಿದೆ. ದೇಶದಾದ್ಯಂತ ಇರುವ ಗಾಂಧೀಜಿ ಮತ್ತು ಅಂಬೇಡ್ಕರ್ ಪ್ರತಿಮೆಗಳ ಮುಂದೆ ಇಡೀ ತಿಂಗಳು ‘ಜೈ ಭಾರತ ಸತ್ಯಾಗ್ರಹ’ ನಡೆಸಲಾಗುವುದು ಎಂದು ಪಕ್ಷವು ಹೇಳಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್‌ ಮತ್ತು ಜೈರಾಮ್‌ ರಮೇಶ್‌ ಅವರು ಪ್ರತಿಭಟನಾ ಯೋಜನೆಯನ್ನು ಪ್ರಕಟಿಸಿದರು. ಪ್ರಜಾಪ್ರಭುತ್ವದ ರಕ್ಷಣೆಯ ಕರ್ತವ್ಯದಿಂದ ವಿಮುಖವಾಗುವುದು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಿಲ್ಲ, ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಎದುರಾಗಿದೆ ಎಂದರು.

ಸಂಸತ್‌ನ ಒಳಗೆ ಮತ್ತು ಹೊರಗೆ ಹೋರಾಟ ಮುಂದುವರಿಯಲಿದೆ. ಸದಸ್ಯತ್ವದಿಂದ ರಾಹುಲ್ ಅವರನ್ನು ಅನರ್ಹಗೊಳಿಸಿದ ಕಳೆದ ಶುಕ್ರವಾರವೇ ಹೋರಾಟ ಆರಂಭವಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಬುಧವಾರ ಮಾಧ್ಯಮಗೋಷ್ಠಿ ನಡೆಸುವಂತೆ ಪಕ್ಷದ ಮುಖಂಡರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಜೈ ಭಾರತ ಸತ್ಯಾಗ್ರಹದ ಜೊತೆಗೆ, ರಾಷ್ಟ್ರ ಮಟ್ಟದ ಮಹಾರ್‍ಯಾಲಿಯೊಂದನ್ನು ದೆಹಲಿಯಲ್ಲಿ ಏಪ್ರಿಲ್‌ ಎರಡನೇ ವಾರದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಬುಧವಾರದಿಂದ ಏಪ್ರಿಲ್‌ 8ರವರೆಗೆ ಪ್ರತಿಭಟನೆಯ ಮೊದಲ ಹಂತ ನಡೆಯಲಿದೆ. ಕಾಂಗ್ರೆಸ್ ಪಕ್ಷದ ಬ್ಲಾಕ್‌ ಮತ್ತು ಮಂಡಲ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದು ವೇಣುಗೋಪಾಲ್‌ ಮತ್ತು ಜೈರಾಮ್‌ ರಮೇಶ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಿ ರಾಹುಲ್ ಅವರ ಸಂದೇಶ ಮತ್ತು ಮನವಿಯನ್ನು ಜನರಿಗೆ ತಲುಪಿಸಲಾಗುವುದು. ಭ್ರಷ್ಟಾಚಾರ ವಿರೋಧಿ ಮತ್ತು ಲೋಪದಿಂದ ಕೂಡಿದ ತೀರ್ಪು ವಿರುದ್ಧದ ಅಭಿಯಾನಕ್ಕೆ ಬೆಂಬಲ ನೀಡುವಂತೆ ಜನರನ್ನು ಕೋರಲಾಗುವುದು. ಇದೇ 31ರಂದು ಎಲ್ಲ ಜಿಲ್ಲೆಗಳಲ್ಲಿ ಮಾಧ್ಯಮಗೋಷ್ಠಿ ನಡೆಸಲಾಗುವುದು.

ಎಲ್ಲ ರಾಜ್ಯಗಳ ರಾಜಧಾನಿಗಳಲ್ಲಿ ಇರುವ ಗಾಂಧೀಜಿ ಮತ್ತು ಅಂಬೇಡ್ಕರ್ ಪ್ರತಿಮೆಗಳ ಮುಂದೆ ಕಾಂಗ್ರೆಸ್‌ನ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ವಿಭಾಗಗಳು ಏ.1ರಂದು ಪ್ರತಿಭಟನೆ ನಡೆಸಲಿವೆ. ಇಂತಹುದೇ ಪ್ರತಿಭಟನೆ ಜಿಲ್ಲಾ ಕೇಂದ್ರಗಳಲ್ಲಿ ಬುಧವಾರ ನಡೆಯಲಿದೆ ಎಂದು ಪಕ್ಷವು ತಿಳಿಸಿದೆ.

ಯುವ ಕಾಂಗ್ರೆಸ್‌, ಎನ್‌ಎಸ್‌ಯುಐ ಮತ್ತು ಕಾಂಗ್ರೆಸ್‌ನ ಇತರ ಘಟಕಗಳು ಏಪ್ರಿಲ್‌ 3ರಂದು ಮೋದಿ ಅವರನ್ನು ಪ್ರಶ್ನಿಸಿ ಅಂಚೆ ಕಾರ್ಡ್‌ ಕಳುಹಿಸಲಿವೆ. ಮಹಿಳಾ ಕಾಂಗ್ರೆಸ್‌ ವತಿಯಿಂದ ಏಪ್ರಿಲ್ 3ರಂದು ದೆಹಲಿಯಲ್ಲಿ ರ್‍ಯಾಲಿನಡೆಯಲಿದೆ. ಎರಡನೇ ಹಂತದ ಸತ್ಯಾಗ್ರಹವು ಏಪ್ರಿಲ್‌ 15ರಿಂದ 20ರ ವರೆಗೆ ನಡೆಯಲಿದೆ. ಜಿಲ್ಲಾಡಳಿತ ಕೇಂದ್ರ
ಗಳಿಗೆ ಮುತ್ತಿಗೆ ಹಾಕಲಾಗುವುದು, ರಾಜ್ಯ ಮಟ್ಟದ ಮುಖಂಡರು ಭಾಗಿಯಾಗಲಿದ್ದಾರೆ. ಇದಕ್ಕೆ ಕೈಜೋಡಿಸುವಂತೆ ಮಿತ್ರ‍ಪಕ್ಷಗಳು ಮತ್ತು ಸಂಘಟನೆಗಳನ್ನು ಕೋರಲಾಗುವುದು. ರಾಜ್ಯ ಮಟ್ಟದ ಕಾರ್ಯಕ್ರಮಗಳು ಏಪ್ರಿಲ್‌ 20 ಮತ್ತು 30ರ ನಡುವೆ ನಡೆಯಲಿವೆ. ಮುಖಂಡರು ಒಂದು ದಿನದ ಉಪವಾಸ ಸತ್ಯಾಗ್ರಹವನ್ನೂ ನಡೆಸಲಿದ್ದಾರೆ ಎಂದು ಕಾಂಗ್ರೆಸ್‌ ಹೇಳಿದೆ.

ಕಲಾಪಕ್ಕೆ ಕುತ್ತು

l ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಮಂಗಳವಾರವೂ ಯಾವುದೇ ಕಲಾಪ ನಡೆಯಲಿಲ್ಲ. ಎರಡೂ ಸದನಗಳನ್ನು ಬುಧವಾರಕ್ಕೆ ಮುಂದೂಡಲಾಗಿದೆ

l ಮಹಾರಾಷ್ಟ್ರದ ಮಹಾ ವಿಕಾಸ ಆಘಾಡಿ ಮೈತ್ರಿಕೂಟದಲ್ಲಿ ಸಾವರ್ಕರ್‌ ವಿರುದ್ಧದ ಟೀಕೆಯ ಕಾರಣದಿಂದ ಅತೃಪ್ತಿ ಕಾಣಿಸಿಕೊಂಡಿದೆ. ಹಾಗಾಗಿ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದಿದೆ. ಹೀಗಾಗಿ, ಟೀಕೆಯ ತೀವ್ರತೆ ಕಡಿಮೆಗೊಳಿಸಲು ಕಾಂಗ್ರೆಸ್ ನಿರ್ಧರಿಸಿದೆ ಎನ್ನಲಾಗಿದೆ

l ಸದಸ್ಯತ್ವದಿಂದ ರಾಹುಲ್ ಅನರ್ಹತೆಯಿಂದಾಗಿ ವಿರೋಧ ಪಕ್ಷಗಳ ಒಗ್ಗಟ್ಟಿಗೆ ವೇದಿಕೆ ಸಿದ್ಧವಾಗಿದೆ. ಇದು ಸುಸ್ಥಿರವಾದ ಸಹಕಾರಯುಗದ ಆರಂಭ. ರಾಹುಲ್ ಅವರು ನ್ಯಾಯಾಂಗ ಪ್ರಕ್ರಿಯೆ ಮೂಲಕ ಸಂಸತ್ತಿಗೆ ಶೀಘ್ರವೇ ಬರಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸಲ್ಮಾನ್‌ ಖುರ್ಷಿದ್ ಹೇಳಿದ್ದಾರೆ

ಪ್ರಕರಣ ದಾಖಲಿಸಲು ಮುಂದಾದ ಸಾವರ್ಕರ್‌ ಮೊಮ್ಮಗ

ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಇನ್ನೊಂದು ಸಂಕಷ್ಟ ಎದುರಾಗಿದೆ. ‘ನಾನು ಸಾವರ್ಕರ್ ಅಲ್ಲ, ನನ್ನ ಹೆಸರು ಗಾಂಧಿ, ಗಾಂಧಿ ಯಾವತ್ತೂ ಕ್ಷಮೆ ಕೇಳುವುದಿಲ್ಲ’ ಎಂಬ ಹೇಳಿಕೆಗಾಗಿ ಕ್ಷಮೆ ಯಾಚಿಸಬೇಕು ಎಂದು ಸಾವರ್ಕರ್‌ ಅವರ ಮೊಮ್ಮಗ, ಸ್ವಾತಂತ್ರ್ಯವೀರ ಸಾವರ್ಕರ್‌ ರಾಷ್ಟ್ರೀಯ ಸ್ಮಾರಕದ ಅಧ್ಯಕ್ಷ ರಂಜಿತ್ ಸಾವರ್ಕರ್ ಹೇಳಿದ್ದಾರೆ.

ಅಂಡಮಾನ್‌ನ ಜೈಲಿನಿಂದ ಹೊರಬರುವುದಕ್ಕಾಗಿ ಸಾವರ್ಕರ್ ಕ್ಷಮೆ ಕೇಳಿದ್ದರು ಎಂಬುದನ್ನು ಸಾಬೀತು ಪಡಿಸುವಂತೆ ರಾಹುಲ್‌ ಗಾಂಧಿಗೆ ರಂಜಿತ್ ಸಾವರ್ಕರ್ ಅವರು ಸವಾಲೆಸೆದಿದ್ದಾರೆ.

ರಾಹುಲ್‌ ಕ್ಷಮೆ ಕೇಳುವಂತೆ ಒತ್ತಡ ಹೇರಬೇಕು ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರನ್ನು ರಂಜಿತ್ ಕೋರಿದ್ದಾರೆ.

ಸ್ಮೃತಿ ಕುರಿತು ಹೇಳಿಕೆ: ಬಿಜೆಪಿ–ಕಾಂಗ್ರೆಸ್‌ ಜಟಾಪಟಿ

ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌ ಬಿ.ವಿ. ಅವರು ಆಡಿದ ಮಾತೊಂದರ ಕುರಿತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಹುಲ್‌ ಅವರ ಮಾತು ಶ್ರೀನಿವಾಸ್‌ ಬಾಯಿಯಲ್ಲಿ ಬಂದಿದೆ. ಇದು ಸೋನಿಯಾ ಗಾಂಧಿ ಅವರ ಸಂಸ್ಕಾರ ಎಂದು ಸ್ಮೃತಿ ಆರೋಪಿಸಿದ್ದಾರೆ.

ಸೋನಿಯಾ ಮತ್ತು ರಾಹುಲ್ ಗಾಂಧಿ ಅವರು ಪಕ್ಷದಲ್ಲಿ ಇರುವವರೆಗೆ, ಬಡ್ತಿ ಬೇಕಿರುವವರು ತಮ್ಮ ವಿರುದ್ಧ ಇಂತಹ ಹೇಳಿಕೆಗಳನ್ನು ನೀಡುತ್ತಿರುತ್ತಾರೆ ಎಂದು ಸ್ಮೃತಿ ಹೇಳಿದ್ದಾರೆ.

ಶ್ರೀನಿವಾಸ್‌ ಅವರ ಹೇಳಿಕೆಯನ್ನು ಬಿಜೆಪಿ ಸೋಮವಾರವೇ ಖಂಡಿಸಿತ್ತು. ಕಾಂಗ್ರೆಸ್‌ ಪಕ್ಷವು ಸ್ತ್ರೀದ್ವೇಷದ ಬಚ್ಚಲುಗುಂಡಿಯಾಗಿದೆ ಎಂದು ಬಿಜೆಪಿ ಹೇಳಿತ್ತು.

‘ಬಿಜೆಪಿ ಎಂದರೆ, ಹಣದುಬ್ಬರ. ಹಣದುಬ್ಬರದ ಮಾಟಗಾತಿಯನ್ನು ಇರಿಸಿಕೊಳ್ಳಲಾಗಿದೆ ಎಂದು 2014ರಲ್ಲಿ ಇದೇ ಜನಗಳು ಹೇಳುತ್ತಿದ್ದರು.... ಸ್ಮೃತಿ ಅವರು ಸ್ವಲ್ಪ ಮೂಕಿ ಮತ್ತು ಸ್ವಲ್ಪ ಕಿವುಡಿ. ಆ ಮಾಟಗಾತಿ... ಹಣದುಬ್ಬರದ ಮಾಟಗಾತಿಯನ್ನು ಪ್ರಿಯೆಯನ್ನಾಗಿ ಮಾಡಿ ಮಲಗುವ ಕೋಣೆಯಲ್ಲಿಯೇ ಕೂರಿಸಲಾಗಿದೆ’ ಎಂದು ಶ್ರೀನಿವಾಸ್‌ ಹೇಳಿದ್ದಾರೆ ಎಂಬುದನ್ನು ಬಿಂಬಿಸುವ ವಿಡಿಯೊಗಳು ಇವೆ. ಕಾಂಗ್ರೆಸ್‌ನ ‘ಸಂಕಲ್ಪ ಸತ್ಯಾಗ್ರಹ’ದಲ್ಲಿ ಶ್ರೀನಿವಾಸ್‌ ಮಾತನಾಡಿದ್ದರು ಎನ್ನಲಾಗಿದೆ.

ಸ್ಮೃತಿ ಹೇಳಿಕೆಗೆ ಕಾಂಗ್ರೆಸ್‌ ಮಂಗಳವಾರ ತಿರುಗೇಟು ನೀಡಿದೆ. ಅವರು ಉಲ್ಲೇಖಿಸಿದ ಮಾತುಗಳನ್ನು ಆಡಿದವರು ಪ್ರಧಾನಿ ನರೇಂದ್ರ ಮೋದಿ ಎಂದು ಹೇಳಿದೆ. ಇದು ಆರ್‌ಎಸ್‌ಎಸ್‌ ಸಂಸ್ಕಾರ ಎಂದಿದೆ.

ಶ್ರೀನಿವಾಸ್‌ ಅವರ ತಿರುಚಿದ ವಿಡಿಯೊವನ್ನು ಬಿಜೆಪಿ ಹರಿಬಿಟ್ಟಿದೆ. ಕಾಂಗ್ರೆಸ್ ಪಕ್ಷ ಮತ್ತು ಶ್ರೀನಿವಾಸ್‌ ಅವರ ವರ್ಚಸ್ಸಿಗೆ ಮಸಿ ಬಳಿಯುವುದು ಅವರ ಉದ್ದೇಶ. ಇದು ಸುಳ್ಳು ಸುದ್ದಿ ಹರಡುವಿಕೆ ಎಂದು ಯುವ ಕಾಂಗ್ರೆಸ್ ಘಟಕವು ಸೋಮವಾರವೇ ಹೇಳಿತ್ತು.

ಯುಪಿಎ ಅಧಿಕಾರದಲ್ಲಿ ಇದ್ದಾಗ ಹಣದುಬ್ಬರ ಮತ್ತು ದರ ಏರಿಕೆ ಕುರಿತು ಬಿಜೆಪಿ ಮುಖಂಡರು ಹೇಗೆ ಮಾತನಾಡಿದ್ದರು ಎಂಬುದನ್ನು ಶ್ರೀನಿವಾಸ್‌ ಅವರು ತಮ್ಮ ಭಾಷಣದಲ್ಲಿ ಹೇಳಿದ್ದರು ಎಂದು ಯುವ ಕಾಂಗ್ರೆಸ್‌ ಪ್ರತಿಪಾದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.