ರಾಹುಲ್ ಗಾಂಧಿ
(ಪಿಟಿಐ ಚಿತ್ರ)
ನವದೆಹಲಿ: ಮತ ಕಳ್ಳತನ ಆರೋಪಕ್ಕೆ ಸಂಬಂಧ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ರಾಹುಲ್, 'ಮತ ಕಳ್ಳರಿಗೆ ಚುನಾವಣೆಯ ಕಾವಲುಗಾರ ರಕ್ಷಣೆ ನೀಡುತಿದ್ದಾರೆ' ಎಂದು ಆರೋಪಿಸಿದ್ದಾರೆ.
'ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದೇಳುವುದು. 36 ಸೆಕೆಂಡುಗಳಲ್ಲಿ ಇಬ್ಬರು ಮತದಾರರನ್ನು ಅಳಿಸಿ ಹಾಕುವುದು. ಮತ್ತೆ ನಿದ್ರೆಗೆ ಜಾರುವುದು. ಹೀಗೂ ಮತ ಕಳ್ಳತನ ನಡೆದಿದೆ' ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.
'ಚುನಾವಣೆಯ ಕಾವಲುಗಾರ ಎಚ್ಚರದಲ್ಲಿಯೇ ಇದ್ದರು. ಕಳ್ಳತನ ಮಾಡುವುದನ್ನು ಗಮನಿಸುತ್ತಲೇ ಇದ್ದರು ಮತ್ತು ಕಳ್ಳರನ್ನು ರಕ್ಷಿಸುತ್ತಲೇ ಇದ್ದರು' ಎಂದು ರಾಹುಲ್ ದೂರಿದ್ದಾರೆ.
ಮತ ಕಳ್ಳತನ ಆರೋಪ ಸಂಬಂಧ ಗುರುವಾರ ಎರಡನೇ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು.
'ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಪಡಿಸುತ್ತಿರುವ ಶಕ್ತಿಗಳ ಜತೆಗೆ ಜ್ಞಾನೇಶ್ ಕುಮಾರ್ ಕೈಜೋಡಿಸಿದ್ದಾರೆ. ಅವರು ನೆಪಗಳನ್ನು ಹೇಳುವುದನ್ನು ನಿಲ್ಲಿಸಬೇಕು. ಮತಕಳ್ಳತನ ಮಾಡುವವರ ರಕ್ಷಣೆ ಮಾಡುವ ಕೆಲಸವನ್ನು ಕೂಡಲೇ ಕೈಬಿಡಬೇಕು' ಎಂದು ಆಗ್ರಹಿಸಿದ್ದರು.
ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದ ಮತಕಳವು ಯತ್ನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ ಕೇಂದ್ರ ಚುನಾವಣಾ ಆಯೋಗವು ಅಗತ್ಯ ಸಾಕ್ಷ್ಯಗಳನ್ನು ವಾರದೊಳಗೆ ಒದಗಿಸಬೇಕು. ಇಲ್ಲದಿದ್ದರೆ, ಮತಕಳವು ಮಾಡುತ್ತಿರು ವವರನ್ನು ಕುಮಾರ್ ರಕ್ಷಿಸುತ್ತಿದ್ದಾರೆ ಎಂಬುದಕ್ಕೆ ಜನರಿಗೆ ಖಚಿತ ಪುರಾವೆ ಸಿಕ್ಕಂತಾಗುತ್ತದೆ ಎಂದು ಹೇಳಿದ್ದರು.
ಆದರೆ ರಾಹುಲ್ ಗಾಂಧಿ ಮಾಡಿರುವ ಆರೋಪಗಳನ್ನು ಆಧಾರರಹಿತ, ಸತ್ಯಕ್ಕೆ ದೂರವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.