ADVERTISEMENT

ಕಾಂಗ್ರೆಸ್ ಗೆದ್ದರೆ ಎಲ್ಲ ರೈತರ ಸಾಲಮನ್ನಾ: ರಾಹುಲ್ ಗಾಂಧಿ ಭರವಸೆ

ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕೃಷಿಕರಿಗೆ ಬಂಪರ್‌ ಕೊಡುಗೆ

ಪಿಟಿಐ
Published 9 ಜನವರಿ 2019, 19:45 IST
Last Updated 9 ಜನವರಿ 2019, 19:45 IST
ಜೈಪುರದಲ್ಲಿ ಬುಧವಾರ ನಡೆದ ರೈತರ ರ‍್ಯಾಲಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಗೌರವಿಸಿದರು. ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ಇದ್ದರು –ಪಿಟಿಐ ಚಿತ್ರ
ಜೈಪುರದಲ್ಲಿ ಬುಧವಾರ ನಡೆದ ರೈತರ ರ‍್ಯಾಲಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಗೌರವಿಸಿದರು. ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ಇದ್ದರು –ಪಿಟಿಐ ಚಿತ್ರ   

ಜೈಪುರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಂದು ವೇಳೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ರತಿ ರಾಜ್ಯದಲ್ಲಿಯೂ ರೈತರ ಸಾಲಮನ್ನಾ ಮಾಡುವುದಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.

ರಾಜಸ್ಥಾನ, ಮಧ್ಯ ಪ್ರದೇಶ, ಛತ್ತಿಸಗಡ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ರೈತರ ಸಾಲಮನ್ನಾ ಮಾಡುವ ಮೂಲಕ ನುಡಿದಂತೆ ನಡೆದಿದೆ ಎಂದರು.

ನಗರದಲ್ಲಿ ಬುಧವಾರ ಆಯೋಜಿಸಲಾಗಿದ್ದ ರೈತರ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಹೊಡೆದರೆ ಸಿಕ್ಸರ್‌ ಹೊಡೆಯಿರಿ, ರಕ್ಷಣಾತ್ಮಕ ಆಟಕ್ಕೆ ಸೀಮಿತರಾಗಬೇಡಿ’ ಎಂದು ರೈತರಿಗೆ ಸಲಹೆ ಮಾಡಿದರು.

ADVERTISEMENT

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ರೈತರು ತಮ್ಮ ಶಕ್ತಿ ಏನು ಎಂಬುವುದನ್ನು ತೋರಿಸಿದ್ದಾರೆ ಎಂದು ಅವರು ಇದೇ ವೇಳೆ ಶ್ಲಾಘಿಸಿದರು.ಕೃಷಿ ಬಿಕ್ಕಟ್ಟು ಪರಿಹಾರಕ್ಕೆ ಸಾಲಮನ್ನಾ ಶಾಶ್ವತ ಪರಿಹಾರವಲ್ಲ. ರೈತರ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ತುರ್ತು ಕ್ರಮ ಎಂದು ರಾಹುಲ್‌ ಗಾಂಧಿ ಹೇಳಿದರು.ಕೃಷಿ ಕ್ಷೇತ್ರದ ಬಿಕ್ಕಟ್ಟುಗಳ ಶಾಶ್ವತ ಪರಿಹಾರಕ್ಕೆ ದೇಶದಲ್ಲಿ ಮತ್ತೊಂದು ಹಸಿರು ಕ್ರಾಂತಿಯ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

**

ಚೌಕಿದಾರನ ರಕ್ಷಣೆಗೆ ಮಹಿಳೆ

‘ರಫೇಲ್‌ ಒಪ್ಪಂದದಲ್ಲಿ ಪ್ರಧಾನಿ ಮೋದಿ ತಮ್ಮ ರಕ್ಷಣೆಗೆ ಒಬ್ಬ ಮಹಿಳೆಯನ್ನು ಬಳಸಿಕೊಂಡಿದ್ದಾರೆ. ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವಷ್ಟು ಸಾಮರ್ಥ್ಯ 56 ಇಂಚಿನ ಎದೆಯ ಚೌಕಿದಾರನಿಗೆ ಇಲ್ಲ’ ಎಂದು ರಾಹುಲ್‌ ಕುಟುಕಿದರು.

ರಫೇಲ್‌ ಒಪ್ಪಂದ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಪ್ರಧಾನಿ ಮೋದಿ ಒಂದು ನಿಮಿಷ ಕೂಡ ಸದನಕ್ಕೆ ಬರಲಿಲ್ಲ. ಚೌಕಿದಾರ ತಮ್ಮನ್ನು ರಕ್ಷಿಸುವ ಹೊಣೆಯನ್ನು ಮಹಿಳಾ ರಕ್ಷಣಾ ಸಚಿವರಿಗೆ ವಹಿಸಿದ್ದರು ಎಂದು ಲೇವಡಿ ಮಾಡಿದರು.

ಆ ಮಹಿಳೆ ಎರಡೂವರೆ ತಾಸು ಮಾತನಾಡಿದ ನಂತರವೂ ಪ್ರಧಾನಿಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದರು.

**

ಬೇಜವಾಬ್ದಾರಿ ವಿರೋಧ ಪಕ್ಷಗಳು ಮಹಿಳಾ ರಕ್ಷಣಾ ಮಂತ್ರಿಯನ್ನು ಅಪಹಾಸ್ಯ ಮಾಡುವ ಮೂಲಕ ಇಡೀ ಮಹಿಳಾ ಸಮುದಾಯವನ್ನು ಅವಮಾನಿಸಿವೆ.

-ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.