ADVERTISEMENT

ಗುಜರಾತ್‌ನಲ್ಲೂ ಪ್ರಮಾಣಪತ್ರ ಕೇಳುವಿರಾ?: ಚುನಾವಣಾ ಆಯೋಗಕ್ಕೆ ರಾಹುಲ್‌ ಪ್ರಶ್ನೆ

ಪಿಟಿಐ
Published 27 ಆಗಸ್ಟ್ 2025, 8:38 IST
Last Updated 27 ಆಗಸ್ಟ್ 2025, 8:38 IST
<div class="paragraphs"><p>ಲೋಕಸಭೆ ವಿರೋಧ ಪಕ್ಷದ ನಾಯಕ&nbsp;ರಾಹುಲ್‌ ಗಾಂಧಿ</p></div>

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ

   

ಕೃಪೆ: ಪಿಟಿಐ

ನವದೆಹಲಿ: ಗುಜರಾತ್‌ನಲ್ಲಿ 2019-20ರಿಂದ 2023-24ರ ಅವಧಿಯಲ್ಲಿ ಕೆಲವು ಅನಾಮದೇಯ ಪಕ್ಷಗಳು ಬರೋಬ್ಬರಿ ₹ 4,300 ಕೋಟಿ ದೇಣಿಗೆ ಪಡೆದಿವೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಚುನಾವಣಾ ಆಯೋಗ ಈ ಕುರಿತಾಗಿಯೂ ತನಿಖೆ ನಡೆಸುವುದೇ ಅಥವಾ ಪ್ರಮಾಣಪತ್ರ ಕೇಳುತ್ತದೆಯೇ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬುಧವಾರ ಪ್ರಶ್ನಿಸಿದ್ದಾರೆ.

ADVERTISEMENT

ಮಾಧ್ಯಮಗಳಲ್ಲಿ ಬಂದಿರುವ ವರದಿಗೆ ಸಂಬಂಧಿಸಿದಂತೆ ಆಯೋಗ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿರುವ ರಾಹುಲ್‌, ಗುಜರಾತ್‌ನಲ್ಲಿ 2019ರಿಂದ 2024ರ ವರೆಗೆ ಅನಾಮದೇಯವಾಗಿ ನೋಂದಣಿಯಾದ 10 ರಾಜಕೀಯ ಪಕ್ಷಗಳು ₹ 4,300 ಕೋಟಿ ದೇಣಿಗೆ ಸ್ವೀಕರಿಸಿವೆ ಎನ್ನಲಾದ ವರದಿಯನ್ನು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌/ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ಅವಧಿಯಲ್ಲಿ ಮೂರು ಚುನಾವಣೆಗಳು (2019, 2024ರ ಸಾರ್ವತ್ರಿಕ ಚುನಾವಣೆ ಮತ್ತು 2022 ವಿಧಾನಸಭಾ ಚುನಾವಣೆ) ನಡೆದಿವೆ. ಆದರೆ, ಮೇಲೆ ಹೇಳಲಾದ ಪಕ್ಷಗಳು ಕೇವಲ 43 ಅಭ್ಯರ್ಥಿಗಳನ್ನಷ್ಟೇ ಕಣಕ್ಕಿಳಿಸಿದ್ದವು. ಆ ಅಭ್ಯರ್ಥಿಗಳು ಪಡೆದಿರುವುದು 54,069 ಮತಗಳನ್ನು ಮಾತ್ರ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಹಿಂದಿಯಲ್ಲಿ ಪೋಸ್ಟ್‌ ಮಾಡಿರುವ ರಾಹುಲ್‌, 'ಗುಜರಾತ್‌ನಲ್ಲಿ ಯಾರೂ ಕೇಳಿರದಂತಹ ಕೆಲವು ಅನಾಮದೇಯ ಪಕ್ಷಗಳಿವೆ. ಯಾರಿಗೂ ಗೊತ್ತಿಲ್ಲದಿದ್ದರೂ ಅವುಗಳಿಗೆ ₹ 4,300 ಕೋಟಿ ದೇಣಿಗೆ ನೀಡಲಾಗಿದೆ! ಈ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಿವೆ. ಆದರೆ, ಕೆಲವೇ ಕ್ಷೇತ್ರಗಳಿಗೆ ಹಣ ಖರ್ಚು ಮಾಡಿವೆ' ಎಂದು ಹೇಳಿದ್ದಾರೆ.

'ಸಾವಿರಾರು ಕೋಟಿ ಹಣ ಎಲ್ಲಿಂದ ಬಂತು? ಅದನ್ನೆಲ್ಲ ಯಾರು ನಿರ್ವಹಿಸುತ್ತಿದ್ದಾರೆ? ಆ ಹಣ ಎಲ್ಲಿಗೆ ಹೋಯಿತು? ಚುನಾವಣಾ ಆಯೋಗ ಈ ಕುರಿತು ತನಿಖೆ ನಡೆಸುತ್ತದೆಯೇ ಅಥವಾ ಇಲ್ಲಿಯೂ ಪ್ರಮಾಣಪತ್ರ ಕೇಳುತ್ತದೆಯೇ? ಇಲ್ಲವೇ, ಈ ಅಂಕಿ-ಅಂಶಗಳನ್ನೇ ಮರೆಮಾಚುವಂತೆ ಕಾನೂನಿನಲ್ಲಿ ಬದಲಾವಣೆ ತರುತ್ತದೆಯೇ?' ಎಂದು ಕೇಳುವ ಮೂಲಕ ತಿವಿದಿದ್ದಾರೆ.

ದೇಶದಲ್ಲಿ ನಡೆದ ಹಲವು ಚುನಾವಣೆಗಳಲ್ಲಿ ಅಕ್ರಮಗಳಾಗಿವೆ. ಬಿಜೆಪಿಯು ಚುನಾವಣೆಗಳನ್ನು ಗೆಲ್ಲಲು ಚುನಾವಣಾ ಆಯೋಗ ನೆರವಾಗಿದೆ ಎಂದು ರಾಹುಲ್‌ ಗಾಂಧಿ ಇತ್ತೀಚೆಗೆ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಚುನಾವಣಾ ಆಯೋಗ, ಪ್ರಮಾಣಪತ್ರ ಸಲ್ಲಿಸುವಂತೆ ರಾಹುಲ್‌ಗೆ ತಾಕೀತು ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.