ಅಹಮದಾಬಾದ್: ಸಂವಿಧಾನದಲ್ಲಿ ಹಸ್ತಕ್ಷೇಪ ಮಾಡಲು ತಮ್ಮ ತಂದೆ, ಅಜ್ಜಿ ಮತ್ತು ಮುತ್ತಜ್ಜ ಎಷ್ಟೆಲ್ಲಾ ಪ್ರಯತ್ನಗಳನ್ನು ಮಾಡಿದ್ದಾರೆ ಎಂಬುದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಗೊತ್ತಿಲ್ಲ. ಮೊದಲು ಅವುಗಳನ್ನು ತಿಳಿದುಕೊಳ್ಳಲಿ ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಭಾನುವಾರ ಹೇಳಿದ್ದಾರೆ.
ಬಿಜೆಪಿ ನಡೆಸುತ್ತಿರುವ 'ಸಂವಿಧಾನ ಗೌರವ ಅಭಿಯಾನ'ದಲ್ಲಿ ಪಾಲ್ಗೊಂಡು ಮಾತನಾಡಿದ ನಡ್ಡಾ, ಕಾಂಗ್ರೆಸ್ ಪಕ್ಷವು 65 ವರ್ಷ ದೇಶದಲ್ಲಿ ಆಡಳಿತ ನಡೆಸಿದೆ. ಆ ಪಕ್ಷದ ನಾಯಕರು ಸಂವಿಧಾನಕ್ಕೆ ಹಲವು ತಿದ್ದುಪಡಿಗಳನ್ನು ತಂದಿದ್ದಾರೆ ಮತ್ತು ಅದರ ಮೂಲ ತತ್ವಗಳನ್ನು ನಾಶ ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಅವರು ಇತ್ತೀಚೆಗೆ, 'ಬಿಜೆಪಿ ಹಾಗೂ ಆರ್‌ಎಸ್‌ಎಸ್ ದೇಶದಲ್ಲಿರುವ ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆಗಳನ್ನೂ ಆಕ್ರಮಿಸಿಕೊಂಡಿವೆ. ನಾವೀಗ ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಹಾಗೂ ಭಾರತ ರಾಜ್ಯದ ವಿರುದ್ಧವೂ ಹೋರಾಟ ನಡೆಸುತ್ತಿದ್ದೇವೆ' ಎಂದು ಹೇಳಿದ್ದರು. ಇದನ್ನು ಖಂಡಿಸಿರುವ ನಡ್ಡಾ, 'ಕಾಂಗ್ರೆಸ್ ನಾಯಕ (ರಾಹುಲ್ ಗಾಂಧಿ) 'ಭಾರತದ ರಾಜ್ಯದ ವಿರುದ್ಧ ಹೋರಾಟ' ಎನ್ನುತ್ತಿದ್ದಾರೆ. ಅವರಿಗೆ ಇತಿಹಾಸದ ಅರಿವಿಲ್ಲ. ಅವರು, ತಮಗೆ ಕೊಟ್ಟ ಭಾಷಣವನ್ನು ಯಥಾವತ್ ಓದುತ್ತಾರೆಯೇ ಹೊರತು, ಅದರಲ್ಲಿನ ಸಾಲುಗಳನ್ನು ಮತ್ತು ಯಾವ ಕಾರಣಕ್ಕಾಗಿ ಅವನ್ನು ಬಳಸಲಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುವುದಿಲ್ಲ' ಎಂದಿದ್ದಾರೆ.
'76ನೇ ಗಣರಾಜ್ಯೋತ್ಸವಕ್ಕೆ ಭಾರತ ಸಜ್ಜಾಗುತ್ತಿರುವ ಹೊತ್ತಿನಲ್ಲಿ, ಸಂವಿಧಾನವನ್ನು ತಿದ್ದಿದವರು ಯಾರು, ಅದರ ಮೂಲ ತತ್ವಗಳನ್ನು ನಾಶಮಾಡಲು ಪ್ರಯತ್ನಿಸಿದವರು ಯಾರು ಎಂಬುದನ್ನು ಮತ್ತು ಬಾಬಾ ಸಾಹೇಬರ್ ಅಂಬೇಡ್ಕರ್ ಅವರ ಆಶಯಗಳನ್ನು ರಕ್ಷಿಸಿ, ಎತ್ತಿಹಿಡಿದವರು ಯಾರು ಎಂಬುದನ್ನು ನಾವೆಲ್ಲರೂ ನೆನಪು ಮಾಡಿಕೊಳ್ಳಬೇಕು' ಎಂದು ಕರೆ ನೀಡಿದ್ದಾರೆ.
ರಾಹುಲ್ ಗಾಂಧಿ ಅವರು ಚುನಾವಣಾ ಸಮಾವೇಶಗಳ ಸಂದರ್ಭದಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದು ಭಾವಹಿಸುವುದನ್ನು ಉಲ್ಲೇಖಿಸಿ, ಸಂವಿಧಾನವನ್ನು ಓದದೆ, ಅದರ ಬಗ್ಗೆ ಯಾವ ಜ್ಞಾನವೂ ಇಲ್ಲದೆ ಕೇವಲ ಪ್ರತಿಗಳನ್ನು ಹಿಡಿದು ಓಡಾಡುವ ಕಪಟಿಗಳ ಬಗ್ಗೆ ಜನರಿಗೆ ಅರಿವಿರಬೇಕು ಮತ್ತು ಸದಾ ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ.
'ರಾಹುಲ್‌ಗೆ ಅವರ ಅಪ್ಪ (ರಾಜೀವ್ ಗಾಂಧಿ), ಮುತ್ತಜ್ಜ (ಜವಾಹರಲಾಲ್ ನೆಹರೂ) ಹಾಗೂ ಅಜ್ಜಿ (ಇಂದಿರಾ ಗಾಂಧಿ) ಏನೆಲ್ಲ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಅವುಗಳನ್ನು ತಿಳಿದುಕೊಳ್ಳಬೇಕು' ಎಂದು ತಿರುಗೇಟು ನೀಡಿದ್ದಾರೆ.
ಸಂವಿಧಾನವು ಕೆಟ್ಟದಾಗಿದ್ದರೂ, ಅದನ್ನು ಜಾರಿಗೊಳಿಸುವವರ ಉದ್ದೇಶ ಸರಿಯಾಗಿ ಇದ್ದರೆ ಉತ್ತಮವಾದದ್ದನ್ನು ಕಾರ್ಯಗತಗೊಳಿಸಲು ಸಾಧ್ಯ ಎಂಬುದಾಗಿ ಅಂಬೇಡ್ಕರ್ ಹೇಳಿದ್ದರು ಎಂದಿರುವ ನಡ್ಡಾ, ಕಾಂಗ್ರೆಸ್ ನಾಯಕರು ಕೆಟ್ಟವರು. ಬಿಜೆಪಿಯವರು ಉತ್ತಮರು ಎಂದು ಪ್ರತಿಪಾದಿಸಿದ್ದಾರೆ. ಅದಕ್ಕೆ ಪೂರಕವಾಗಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು, ಒಂದು ರಾಷ್ಟ್ರ; ಒಂದು ತೆರಿಗೆ ಜಾರಿಗೊಳಿಸಿದ್ದು, ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಕಲ್ಪಿಸಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದದ್ದು ಹಾಗೂ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಮುಂದಾಗಿರುವುದನ್ನು ಉದಾಹರಿಸಿದ್ದಾರೆ.
'ಸಂವಿಧಾನ ಉತ್ತಮವಾಗಿದ್ದರೂ, ಅದರ ಆಶಯಗಳನ್ನು ಕಾರ್ಯಗತಗೊಳಿಸುವವರು ಕಟ್ಟವರಾಗಿದ್ದರೆ, ಸಂವಿಧಾನವು ವಿಫಲವಾಗುತ್ತದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು 1949ರಲ್ಲಿ ಸಂವಿಧಾನವನ್ನು ಅಳವಡಿಸಿಕೊಳ್ಳುವ ಸಂದರ್ಭದಲ್ಲಿ ಹೇಳಿದ್ದರು' ಎಂದು ನಡ್ಡಾ ನೆರೆದಿದ್ದವರನ್ನು ಉದ್ದೇಶಿಸಿ ಹೇಳಿದ್ದಾರೆ.
ದೇಶದ ಮೊದಲ ಪ್ರಧಾನಿ ನೆಹರೂ ಅವರು ಅಂಬೇಡ್ಕರ್ ಅವರ ವಿರೋಧದ ನಡುವೆಯೂ 370ನೇ ವಿಧಿ ಮತ್ತು 35 (A) ಅಡಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದರು. ಇವು ಸಂವಿಧಾನದಲ್ಲಿ ಪ್ರತಿಪಾದಿಸಲಾಗಿರುವ ಮೂಲಭೂತ ಹಕ್ಕುಗಳಿಂದ ಅಲ್ಲಿನ ಜನರು ವಂಚಿತರಾಗುವಂತೆ ಮಾಡಿದ್ದವು ಎಂದು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.