ಕಿರಣ್ ರಿಜಿಜು- ರಾಹುಲ್ ಗಾಂಧಿ
ನವದೆಹಲಿ: ಚುನಾವಣೆಗಳಲ್ಲಿ ಕಾಂಗ್ರೆಸ್ ಪದೇ ಪದೇ ಸೋಲು ಅನುಭವಿಸಿರುವುದಕ್ಕೆತಮ್ಮ ನಾಯಕತ್ವದ ವೈಫಲ್ಯವೇ ಕಾರಣ ಎಂಬುವುದನ್ನು ಒಪ್ಪಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಕಿಡಿಕಾರಿದ್ದಾರೆ.
ಮತ ಕಳ್ಳತನದ ಹಿಂದಿರುವವರನ್ನು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಕ್ಷಿಸುತ್ತಿದ್ದಾರೆ. ಕರ್ನಾಟಕದಲ್ಲಿ ಮತದಾರರ ಪಟ್ಟಿಯಿಂದ ಕಾಂಗ್ರೆಸ್ ಮತದಾರರ ಹೆಸರುಗಳನ್ನು ವ್ಯವಸ್ಥಿತವಾಗಿ ಅಳಿಸಿ ಹಾಕಲಾಗುತ್ತಿದೆ ಎಂದೂ ರಾಹುಲ್ ಆರೋಪಿಸಿದ ಬೆನ್ನಲ್ಲೇ ಕಿರಣ್ ರಿಜಿಜು ಪ್ರತಿಕ್ರಿಯಿಸಿದ್ದಾರೆ.
ತಮ್ಮ ನಾಯಕತ್ವದ ವೈಫಲ್ಯದಿಂದಲೇ ಸೋಲಾಗಿದೆ ಎಂಬುವುದನ್ನು ರಾಹುಲ್ ಅರಿಯಬೇಕು. ಆದರೆ ರಾಹುಲ್ ತಮ್ಮ ತಪ್ಪುನ್ನು ಒಪ್ಪಿಕೊಳ್ಳದೆ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿರುವುದು ಸರಿಯಲ್ಲ ಎಂದು ರಿಜಿಜು ಹೇಳಿದ್ದಾರೆ.
ಚುನಾವಣೆಗಳಲ್ಲಿ ಪದೇ ಪದೇ ಸೋಲುತ್ತಿರುವುದಕ್ಕಾಗಿ ಹತಾಶೆಗೆ ಒಳಗಾಗಿದ್ದಾರೆ. ಹೀಗಾಗಿ ತಮ್ಮ ತಪ್ಪುಗಳನ್ನು ಮುಚ್ಚಿಡಲು ಚುನಾವಣಾ ಆಯೋಗದ ಮೇಲೆ ಆರೋಪ ಮಾಡುತ್ತಿದ್ದಾರೆ. ತಮ್ಮ ವೈಫಲ್ಯವನ್ನು ಮರೆಮಾಚಲು, ಜನರ ಗಮನವನ್ನು ಬೇರೆಡೆ ಸೆಳೆಯಲು ರಾಹುಲ್ ಸರ್ಕಾರಿ ಸಂಸ್ಥೆಗಳನ್ನು ದೂಷಿಸುತ್ತಿದ್ದಾರೆ ಎಂದು ರಿಜಿಜು ತಿಳಿಸಿದ್ದಾರೆ.
ರಾಹುಲ್ ಹೇಳಿಕೆಗಳು ಹೆಚ್ಚಾಗಿ ಭಾರತ ವಿರೋಧಿಯಾಗಿರುತ್ತದೆ ಎಂದು ರಿಜಿಜು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.