ADVERTISEMENT

ಪರಬಣಿ ಹಿಂಸಾಚಾರ | ಮೃತ ವಿದ್ಯಾರ್ಥಿಯ ಕುಟುಂಬವನ್ನು ಭೇಟಿ ಮಾಡಿದ ರಾಹುಲ್ ಗಾಂಧಿ

ಪಿಟಿಐ
Published 23 ಡಿಸೆಂಬರ್ 2024, 10:28 IST
Last Updated 23 ಡಿಸೆಂಬರ್ 2024, 10:28 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ಪರಬಣಿ: ‘ಸೋಮನಾಥ ಸೂರ್ಯವಂಶಿ ದಲಿತ. ಇವರು ಸಂವಿಧಾನವನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದರು. ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟವರು ಇವರನ್ನು ಹತ್ಯೆ ಮಾಡಿದ್ದಾರೆ. ಇದೊಂದು ಸರ್ಕಾರಿ ಪ್ರಾಯೋಜಿತ ಹತ್ಯೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಸೋಮವಾರ ಆರೋಪಿಸಿದರು.

ಮಹಾರಾಷ್ಟ್ರದ ಪರಬಣಿ ಎಂಬ ಊರಿನ ರೈಲು ನಿಲ್ದಾಣದ ಮುಂದೆ ಡಾ. ಬಿ.ಆರ್. ಅಂಬೇಡ್ಕರ್‌ ಅವರ ಪುತ್ಥಳಿಯನ್ನು ಇರಿಸಲಾಗಿದೆ. ಪುತ್ಥಳಿ ಇರುವ ಜಾಗದಿಂದ ಕೆಲವು ಅಡಿ ದೂರದಲ್ಲಿ ಗಾಜಿನಿಂದ ರೂಪಿಸಿದ ಸಂವಿಧಾನ ಪ್ರತಿಯ ಪ್ರತಿಕೃತಿಯನ್ನು ಇರಿಸಲಾಗಿದೆ. ಈ ಪ್ರತಿಕೃತಿಯನ್ನು ಡಿ.10ರಂದು ಕಿಡಿಗೇಡಿಗಳು ಧ್ವಂಸ ಮಾಡಿದ್ದರು. ಈ ಬಳಿಕ ಈ ಊರಿನಲ್ಲಿ ಹಿಂಸಾಚಾರ ನಡೆದಿತ್ತು.

ಹಿಂಸಾಚಾರ ಪ್ರಕರಣ ಸಂಬಂಧ ಪೊಲೀಸರು ಸುಮಾರು 50 ಮಂದಿಯನ್ನು ಬಂಧಿಸಿದ್ದರು. ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈ ಪೈಕಿ ಪರಬಣಿಯ ಶಂಕರ ನಗರದ ನಿವಾಸಿ ಸೋಮನಾಥ ಸೂರ್ಯವಂಶಿ (35) ಅವರೂ ಒಬ್ಬರು. ಎದೆಯ ಭಾಗದಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಸೂರ್ಯವಂಶಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಡಿ.15ರಂದು ಇವರು ಮೃತಪಟ್ಟರು.

ADVERTISEMENT

ಮೃತ ಸೂರ್ಯವಂಶಿ ಅವರ ಮನೆಗೆ ರಾಹುಲ್‌ ಗಾಂಧಿ ಅವರು ಸೋಮವಾರ ಭೇಟಿ ನೀಡಿ ಅವರ ಕುಟುಂಬದವರೊಂದಿಗೆ ಮಾತುಕತೆ ನಡೆಸಿದರು. ಹಿಂಸಾಚಾರದಲ್ಲಿ ಮೃತಪಟ್ಟ ವಿಯಜ್‌ ವಾಕೋಡೆ ಅವರ ಕುಟುಂಬದವರನ್ನೂ ರಾಹುಲ್‌ ಭೇಟಿ ಮಾಡಿದರು.

‘ಸೂರ್ಯವಂಶಿ ಅವರ ಮನೆಯವರು ನನಗೆ ಕೆಲವು ಫೋಟೊ ಹಾಗೂ ವಿಡಿಯೊಗಳನ್ನು ತೋರಿಸಿದ್ದಾರೆ. ಅವರ ಮರಣೋತ್ತರ ವರದಿಯನ್ನೂ ತೋರಿಸಿದ್ದಾರೆ. ಇವರು ಪೊಲೀಸರ ವಶದಲ್ಲಿ ಇರುವಾಗಲೇ ಮೃತಪಟ್ಟಿರುವುದು ನೂರಕ್ಕೆ ನೂರಷ್ಟು ಸತ್ಯ’ ಎಂದು ರಾಹುಲ್‌ ಹೇಳಿದರು. 

‘ನನಗೆ ಪೊಲೀಸರು ಹಿಂಸೆ ನೀಡಿಲ್ಲ ಎಂದು ಸೂರ್ಯವಂಶಿ ಅವರೇ ನ್ಯಾಯಧೀಶರ ಎದುರು ಹೇಳಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳೂ ಇವೆ ಎಂದು ಮುಖ್ಯಮಂತ್ರಿ ಫಡಣವೀಸ್‌ ಅವರು ಅಧಿವೇಶನದಲ್ಲಿ ಹೇಳಿದ್ದಾರೆ. ಆದರೆ, ಅವರು ಸುಳ್ಳು ಹೇಳಿದ್ದಾರೆ’ ಎಂದರು.

ರಾಹುಲ್‌ ಅವರು ರಾಜಕೀಯ ಕಾರಣಗಳಿಗಾಗಿ ಇಲ್ಲಿಗೆ ಬಂದಿದ್ದಾರೆ. ಜನರ ಮಧ್ಯೆ ದ್ವೇಷ ಹುಟ್ಟುವಂತೆ ಮಾಡುವುದು ಅವರ ಕೆಲಸ
ದೇವೇಂದ್ರ ಫಡಣವೀಸ್‌ ಮಹಾರಾಷ್ಟ್ರ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.