ನವದೆಹಲಿ: ಅನೇಕ ಸರ್ವಾಧಿಕಾರಿಗಳ ಹೆಸರುಗಳು 'ಎಂ' ಅಕ್ಷರದಿಂದ ಪ್ರಾರಂಭವಾಗಲು ಕಾರಣವೇನು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಅನೇಕ ಸರ್ವಾಧಿಕಾರಿಗಳು 'ಎಂ' ನಿಂದ ಪ್ರಾರಂಭವಾಗುವ ಹೆಸರುಗಳನ್ನು ಏಕೆ ಹೊಂದಿದ್ದಾರೆ? ಮಾರ್ಕಸ್, ಮುಸ್ಸೋಲಿನಿ, ಮಿಲೊಸೆವಿಕ್, ಮುಬಾರಕ್, ಮೊಬುಟು, ಮುಷರಫ್, ಮೈಕಾಂಬೆರೊ ಎಂದು ಉಲ್ಲೇಖಿಸಿದರು.
ರಾಹುಲ್ ಗಾಂಧಿ ಟ್ವೀಟ್ ಮಾಡಿರುವ ಹಿಂದಿನ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಭಾರತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಸರ್ವಾಧಿಕಾರಿ ಎಂದು ಆರೋಪಿಸುವ ಯತ್ನ ಎಂದು ವಿಶ್ಲೇಷಿಸಲಾಗುತ್ತಿದೆ.
ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆಯನ್ನು ನಡೆಸುತ್ತಿರುವ ರೈತರು ಹಾಗೂ ರೈತರಿಗೆ ಬೆಂಬಲ ಸೂಚಿಸುವ ಟ್ವಿಟರ್ ಖಾತೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿದ ಕೇಂದ್ರ ಸರ್ಕಾರದ ಧೋರಣೆಯನ್ನು ರಾಹುಲ್ ಗಾಂಧಿ ಟೀಕಿಸಿದ್ದರು.
ದೆಹಲಿ ಗಡಿ ಪ್ರದೇಶಗಳಲ್ಲಿ ರೈತರ ಪ್ರತಿಭಟನೆಯನ್ನು ತಡೆಯಲು ಕಾಂಕ್ರೀಟ್, ಕಬ್ಬಿಣದ ಸರಳು ಹಾಗೂ ಮೊಳೆಗಳನ್ನು ಸ್ಥಾಪಿಸಲಾಗಿತ್ತು. ಇದನ್ನು ತರಾಟೆಗೆ ತೆಗೆದುಕೊಂಡಿರುವ ರಾಹುಲ್, ಸೇತುವೆಗಳನ್ನು ನಿರ್ಮಿಸಿ, ಗೋಡೆಗಳನ್ನಲ್ಲ ಎಂದು ಹೇಳಿಕೆ ನೀಡಿದ್ದರು.
ಈ ಮೊದಲು ಕೇಂದ್ರ ಬಜೆಟ್ 2021 ಬಗ್ಗೆಯೂ ಟೀಕೆ ಮಾಡಿದ್ದ ರಾಹುಲ್ ಗಾಂಧಿ, ನರೇಂದ್ರ ಮೋದಿ ಸರ್ಕಾರವು, ದೇಶದ ಸಂಪತ್ತನ್ನು ಬಂಡವಾಳಶಾಹಿ ಉದ್ಯಮ ಗೆಳೆಯರಿಗೆ ಹಸ್ತಾಂತರಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.