ADVERTISEMENT

ಕೋವಿಡ್: ಸರ್ಕಾರದ ನಿರ್ಲಕ್ಷ್ಯದಿಂದ 40 ಲಕ್ಷ ಭಾರತೀಯರ ಸಾವು ಎಂದ ರಾಹುಲ್ ಗಾಂಧಿ

ಪಿಟಿಐ
Published 17 ಏಪ್ರಿಲ್ 2022, 9:37 IST
Last Updated 17 ಏಪ್ರಿಲ್ 2022, 9:37 IST
ರಾಹುಲ್ ಗಾಂಧಿ (ಪಿಟಿಐ ಚಿತ್ರ)
ರಾಹುಲ್ ಗಾಂಧಿ (ಪಿಟಿಐ ಚಿತ್ರ)   

ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ 40 ಲಕ್ಷ ಭಾರತೀಯರು ಮೃತಪಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಮೃತರ ಕುಟುಂಬದವರಿಗೆ ತಲಾ ₹4 ಲಕ್ಷ ಪರಿಹಾರ ನೀಡಬೇಕು ಎಂದೂ ಆಗ್ರಹಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಕೋವಿಡ್‌ನಿಂದ ಸಂಭವಿಸಿದ ಸಾವಿನ ಸಂಖ್ಯೆಯನ್ನು ಬಹಿರಂಗಪಡಿಸುವ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಪ್ರಯತ್ನಕ್ಕೆ ಭಾರತ ತಡೆಯೊಡ್ಡುತ್ತಿದೆ ಎಂಬ ‘ನ್ಯೂಯಾರ್ಕ್ ಟೈಮ್ಸ್’ ವರದಿಯನ್ನು ಅವರು ಟ್ವೀಟ್ ಮಾಡಿದ್ದಾರೆ.

‘ಮೋದಿ ಜೀ ಸತ್ಯ ಹೇಳುವುದಿಲ್ಲ. ಇತರರಿಗೆ ಸತ್ಯವನ್ನು ಹೇಳಲೂ ಬಿಡುವುದಿಲ್ಲ. ಆಮ್ಲಜನಕ ಕೊರತೆಯಿಂದ ಯಾರೂ ಮೃತಪಟ್ಟಿಲ್ಲ ಎಂದು ಇನ್ನೂ ಅವರು ಸುಳ್ಳು ಹೇಳುತ್ತಿದ್ದಾರೆ’ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

‘ಕೋವಿಡ್‌ ಸಂದರ್ಭದಲ್ಲಿ ಸರ್ಕಾರದ ನಿರ್ಲಕ್ಷ್ಯದಿಂದ 5 ಲಕ್ಷ ಅಲ್ಲ, 40 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ನಾನು ಈ ಹಿಂದೆಯೂ ಹೇಳಿದ್ದೆ’ ಎಂದು ಅವರು ಉಲ್ಲೇಖಿಸಿದ್ದಾರೆ.

‘ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸಿ ಮೋದಿ ಜೀ. ಕೋವಿಡ್ ಸಂತ್ರಸ್ತರ ಪ್ರತಿ ಕುಟುಂಬಗಳಿಗೂ ₹4 ಲಕ್ಷ ಪರಿಹಾರ ನೀಡಿ’ ಎಂದು ಅವರು ಒತ್ತಾಯಿಸಿದ್ದಾರೆ.

ದೇಶದಲ್ಲಿ ಕೋವಿಡ್ ಸಾವಿನ ಸಂಖ್ಯೆಯನ್ನು ಲೆಕ್ಕ ಹಾಕಲು ಡಬ್ಲ್ಯುಎಚ್‌ಒ ಬಳಸಿರುವ ವಿಧಾನವನ್ನು ಭಾರತ ಶನಿವಾರ ಪ್ರಶ್ನಿಸಿತ್ತು. ಭೌಗೋಳಿಕವಾಗಿ ಅತಿ ದೊಡ್ಡದಾಗಿರುವ, ಹೆಚ್ಚಿನ ಜನಸಂಖ್ಯೆ ಹೊಂದಿರುವ ದೇಶಕ್ಕೆ ಈ ವಿಧಾನ ಸೂಕ್ತವಾಗದು ಎಂದು ಭಾರತ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.