ಬಿಹಾರ: ‘ಮತ ಕಳವು ಆರೋಪದ ಬಗ್ಗೆ ಲಿಖಿತ ಪ್ರಮಾಣ ಸಲ್ಲಿಸುವಂತೆ ಚುನಾವಣಾ ಆಯೋಗವು ನನ್ನನ್ನು ಕೇಳಿದೆ. ನನ್ನ ರೀತಿಯೇ ಆರೋಪ ಮಾಡಿದ ಬಿಜೆಪಿ ನಾಯಕ ಅನುರಾಗ್ ಠಾಕೂರ್ ಬಳಿ ಪ್ರಮಾಣಪತ್ರ ಸಲ್ಲಿಸುವಂತೆ ಅದು ಹೇಳಿಲ್ಲ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮತದಾರರ ಪಟ್ಟಿಯ ಅಕ್ರಮಗಳ ಕುರಿತ ಆರೋಪಕ್ಕೆ ಸಂಬಂಧಿಸಿದಂತೆ ಏಳು ದಿನಗಳ ಒಳಗಾಗಿ ಪ್ರಮಾಣ ಪತ್ರ ಸಲ್ಲಿಸುವಂತೆ ರಾಹುಲ್ ಗಾಂಧಿ ಅವರಿಗೆ ಭಾನುವಾರ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ. ಈ ಬಗ್ಗೆ ಅದೇ ದಿನ ಬಿಹಾರದ ಸಾಸಾರಾಮ್‌ನಲ್ಲಿ ನಡೆದ ‘ಮತದಾರನ ಅಧಿಕಾರ ಯಾತ್ರೆ’ ವೇಳೆ ರಾಹುಲ್ ಹೀಗೆ ಪ್ರತಿಕ್ರಿಯಿಸಿದ್ದಾರೆ.
‘ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಎಂದರೆ ಬಿಹಾರದ ಜನರ ಮತಗಳನ್ನು ಕದಿಯುವುದಾಗಿದೆ. ಮೊದಲು ಇದನ್ನು ರಹಸ್ಯವಾಗಿ ಮಾಡುತ್ತಿದ್ದರು. ಈಗ ಬಹಿರಂಗವಾಗಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ನೀವು(ಚುನಾವಣಾ ಆಯೋಗ) ಸಿಸಿಟಿವಿಗೆ ಸಂಬಂಧಿಸಿದಂತೆ ಒಂದು ಕಾನೂನನ್ನು ತಂದಿದ್ದೀರಿ. ಆ ಕಾನೂನನ್ನು ಏಕೆ ಬದಲಾಯಿಸಿದ್ದೀರಿ? ಸರ್ಕಾರ ಅದನ್ನು ಏಕೆ ಬದಲಾಯಿಸಿತು?’ ಎಂದು ಕೇಳಿದ್ದಾರೆ.
ಮುಂದುವರಿದು, ‘ಚುನಾವಣಾ ಆಯುಕ್ತರ ವಿರುದ್ಧ ಯಾವುದೇ ಪ್ರಕರಣವನ್ನು ದಾಖಲಿಸಲಾಗುವುದಿಲ್ಲ ಎಂದು ನಿಮಗೆ(ಇ.ಸಿ) ತಿಳಿದಿದೆಯೇ? ಈ ಕಾನೂನನ್ನು ಯಾವಾಗ ಮಾಡಲಾಗಿದೆ ಗೊತ್ತೆ? ಈ ಕಾನೂನನ್ನು 2023ರಲ್ಲಿ ಮಾಡಲಾಗಿದೆ. 2023ರಲ್ಲಿಯೇ ಏಕೆ ಮಾಡಲಾಗಿದೆ? ಏಕೆಂದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಚುನಾವಣಾ ಆಯೋಗದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಬಯಸುತ್ತಾರೆ. ಮತ ಕದಿಯುವಲ್ಲಿ ನೀವು(ಇ.ಸಿ) ಅವರಿಗೆ(ಬಿಜೆಪಿಗೆ) ಸಹಾಯ ಮಾಡುತ್ತಿದ್ದೀರಿ’ ಎಂದು ಆರೋಪಿಸಿದ್ದಾರೆ.
‘2023ರಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಸಿಸಿಟಿವಿ ಸಂಬಂಧಿತ ಕಾನೂನುಗಳನ್ನು ಉದ್ದೇಶಪೂರ್ವಕವಾಗಿ ಬದಲಾಯಿಸಿದೆ’ ಎಂದೂ ಅವರು ಆರೋಪಿಸಿದ್ದಾರೆ.
ವಯನಾಡ್, ಅಮೇಠಿ ಮತ್ತು ರಾಯಬರೇಲಿ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಅನುರಾಗ್ ಠಾಕೂರ್ ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.