ರಾಹುಲ್ ಗಾಂಧಿ, ಚುನಾವಣಾ ಆಯೋಗ
ಪಿಟಿಐ ಚಿತ್ರ
ಬೆಂಗಳೂರು: ಮತ ಕಳ್ಳತನ ಆರೋಪವನ್ನು ಪುನರುಚ್ಚರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಘೋಷಣೆಗೆ ಸಹಿ ಹಾಕುವಂತೆ ಕೇಳಿರುವ ಚುನಾವಣಾ ಆಯೋಗದ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿರುವ ರಾಹುಲ್, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತ ಕಳ್ಳತನ ಮಾಡಲು ಚುನಾವಣಾ ಆಯೋಗ ಹಾಗೂ ಬಿಜೆಪಿ ಒಪ್ಪಂದ ಮಾಡಿಕೊಂಡಿದ್ದವು ಎಂದು ಪುನಃ ಆರೋಪಿಸಿದ್ದಾರೆ.
'ಮತ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಪ್ರಮಾಣಪತ್ರ ಸಲ್ಲಿಸಿ, ಪ್ರಮಾಣವಚನದ ಅಡಿಯಲ್ಲಿ ಮಾಹಿತಿ ಹಂಚಿಕೊಳ್ಳಿ ಎಂದು ಚುನಾವಣಾ ಆಯೋಗ ನನಗೆ ಹೇಳಿದೆ. ನಾನು ಲೋಕಸಭೆಯಲ್ಲಿ ಸಂವಿಧಾನದ ಪ್ರತಿ ಹಿಡಿದು ಪ್ರಮಾಣವಚನ ಸ್ವೀಕರಿಸಿದ್ದೇನೆ' ಎಂದು ಹೇಳಿದ್ದಾರೆ.
'ನಾವು ಬಿಡುಗಡೆ ಮಾಡಿರುವ ದಾಖಲೆಗಳ ಆಧಾರದಲ್ಲಿ ಜನರು ಪ್ರಶ್ನಿಸಲಾರಂಭಿಸುತ್ತಿದ್ದಂತೆ ಚುನಾವಣಾ ಆಯೋಗವು ತನ್ನ ವೆಬ್‌ಸೈಟ್ ಅನ್ನು ಬಂದ್ ಮಾಡಿದೆ' ಎಂದೂ ಆರೋಪಿಸಿದ್ದಾರೆ.
'ಮಹಾರಾಷ್ಟ್ರ, ಬಿಹಾರ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ವೆಬ್‌ಸೈಟ್ ಬಂದ್ ಆಗಿದೆ' ಎಂದಿರುವ ಅವರು, 'ಜನರು ಪ್ರಶ್ನೆಗಳನ್ನು ಕೇಳಲಾರಂಭಿಸಿದರೆ ತಮ್ಮ ನಾಟಕ ಬಯಲಾಗುತ್ತದೆ ಎಂಬ ಭಯ ಆಯೋಗವನ್ನು ಆವರಿಸಿದೆ' ಎಂದೂ ತೀಕ್ಷ್ಣವಾಗಿ ಹೇಳಿದ್ದಾರೆ.
ಮುಂದುವರಿದು, '2024ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಮ್ಮ ಮೈತ್ರಿಕೂಟವು (ಮಹಾ ವಿಕಾಸ ಆಘಾಡಿ) ಮಹಾರಾಷ್ಟ್ರದಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದಿತ್ತು. ಆದರೆ, ನಾಲ್ಕು ತಿಂಗಳ ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಚುನಾವಣಾ ಫಲಿತಾಂಶ ನೋಡಿ ನನಗೆ ಅಚ್ಚರಿಯಾಗಿತ್ತು. ಇದರ ಹಿಂದಿನ ಸತ್ಯ ಹುಡುಕಲು ಹೊರಟಾಗ ಒಂದು ಕೋಟಿ ಹೊಸ ಮತದಾರರು ಹಕ್ಕು ಚಲಾಯಿಸಿರುವುದು ಗೊತ್ತಾಯಿತು. ಲೋಕಸಭಾ ಚುನಾವಣೆಯಲ್ಲಿ ಮತ ಹಾಕದ ಒಂದು ಕೋಟಿ ಮತದಾರರು ವಿಧಾನಸಭಾ ಚುನಾವಣೆಯಲ್ಲಿ ಹಕ್ಕು ಚಲಾಯಿಸಿದ್ದರು' ಎಂದು ಅಚ್ಚರಿಯಿಂದಲೇ ಹೇಳಿದ್ದಾರೆ.
ಹಾಗೆಯೇ, ಆ ಎಲ್ಲ ಹೊಸ ಮತಗಳೂ ಬಿಜೆಪಿಗೇ ಹೋಗಿವೆ ಎಂದು ಪ್ರತಿಪಾದಿಸಿರುವ ಕಾಂಗ್ರೆಸ್ ನಾಯಕ, ಇದು 'ಅಕ್ರಮ ನಡೆದಿರುವುದನ್ನು ಸೂಚಿಸುತ್ತದೆ' ಎಂದು ಒತ್ತಿ ಹೇಳಿದ್ದಾರೆ.
'ಈ ರೀತಿಯ ಹೊಸ ಮತದಾರರು ಎಲ್ಲೆಲ್ಲಿ ಮತ ಚಲಾಯಿಸಿದ್ದಾರೋ, ಅಲ್ಲೆಲ್ಲಾ ಬಿಜೆಪಿ ಗೆದ್ದಿದೆ. ನಮ್ಮ ಮೈತ್ರಿಕೂಟದ ಮತ ಪ್ರಮಾಣ ಕಡಿಮೆಯಾಗಿಲ್ಲ. ಲೋಕಸಭಾ ಚುನಾವಣೆಯಲ್ಲಿ ಪಡೆದಿದ್ದಷ್ಟೇ ಮತಗಳನ್ನು ವಿಧಾನಸಭಾ ಚುನಾವಣೆಯಲ್ಲೂ ಗಳಿಸಿದ್ದೇವೆ. ಆದರೆ, ಹೊಸ ಮತದಾರರೆಲ್ಲಾ ಬಿಜೆಪಿಯತ್ತಲೇ ಹೋದರು' ಎಂದು ಗಮನ ಸೆಳೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.