ADVERTISEMENT

ಯುವಕನ ಪತ್ತೆಗೆ ಪಿಎಲ್‌ಎ ನೆರವು ಕೋರಿದ ಸೇನೆ

ಪಿಟಿಐ
Published 20 ಜನವರಿ 2022, 18:06 IST
Last Updated 20 ಜನವರಿ 2022, 18:06 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ/ಬೀಜಿಂಗ್‌: ಕಾಣೆಯಾಗಿರುವ, ಅರುಣಾಚಲ ಪ್ರದೇಶದ ಯುವಕ ಮಿರಾಮ್‌ ತರೊನ್‌ನನ್ನು ಚೀನಾಕ್ಕೆ ಸೇರಿದ ಪ್ರದೇಶದಲ್ಲಿ ಪತ್ತೆ ಮಾಡಲು ಭಾರತೀಯ ಸೇನೆಯು ಪಿಎಲ್‌ಎ ನೆರವು ಕೇಳಿದೆ.

‘ಉಭಯ ದೇಶಗಳು ಅನುಸರಿಸುತ್ತಿರುವ ಸ್ಥಾಪಿತ ಶಿಷ್ಟಾಚಾರದ ಪ್ರಕಾರ ಯುವಕನನ್ನು ವಾಪಸು ತರಲು ಪ್ರಯತ್ನಿಸಲಾಗುತ್ತಿದೆ’ ಎಂದು ರಕ್ಷಣಾ ಇಲಾಖೆ ಮೂಲಗಳು ಗುರುವಾರ ಹೇಳಿವೆ.

ಮಿರಾಮ್‌ ಅಪಹರಣಕ್ಕೆ ಒಳಗಾಗಿದ್ದಾನೆ ಎನ್ನಲಾದ ಮಾಹಿತಿ ಲಭಿಸುತ್ತಿದ್ದಂತೆಯೇ, ಭಾರತೀಯ ಸೇನೆಯು ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯನ್ನು(ಪಿಎಲ್‌ಎ) ಸಂಪರ್ಕಿಸಿತು. ಗಿಡಮೂಲಿಕೆ ಸಂಗ್ರಹಿಸಲು ಹಾಗೂ ಬೇಟೆಯಾಡಲು ತೆರಳಿದ್ದ ವ್ಯಕ್ತಿಯೊಬ್ಬ ದಾರಿ ತಪ್ಪಿಸಿಕೊಂಡಿದ್ದು, ನಾಪತ್ತೆಯಾಗಿದ್ದಾನೆ ಎಂಬುದಾಗಿ ಪಿಎಲ್‌ಎಗೆ ಮಾಹಿತಿ ನೀಡಲಾಯಿತು’ ಎಂದು ಇಲಾಖೆ ಮೂಲಗಳು ಹೇಳಿವೆ.

ADVERTISEMENT

ಆದರೆ ಯುವಕನನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಸಿಬ್ಬಂದಿ ಅಪಹರಿಸಿದ ಬಗ್ಗೆ ತನಗೆ ಯಾವುದೇ ಮಾಹಿತಿಯೂ ಇಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯ ತಿಳಿಸಿದೆ.

‘ಗಡಿ ಭಾಗದಲ್ಲಿ ಪಿಎಲ್‌ಎ ನಿಯಂತ್ರಣ ಸಾಧಿಸಿದ್ದು, ಅಕ್ರಮವಾಗಿ ಚೀನಾ ನೆಲದೊಳಗೆ ಪ್ರವೇಶಿಸುವುದು ಮತ್ತು ಹೊರ ಹೋಗುವ ಚಟುವಟಿಕೆಗಳನ್ನು ಹತ್ತಿಕ್ಕುತ್ತಿದೆ’ ಎಂದು ಅದು ಹೇಳಿದೆ.

ಟ್ವಿಟರ್‌ನಲ್ಲಿ ಮನವಿ: ‘ಸಿಯಾಂಗ್‌ ಜಿಲ್ಲೆಯ ಝಿಡೋ ಗ್ರಾಮದ ನಿವಾಸಿ ಮಿರಾಮ್ ತರೊನ್‌ ತನ್ನ ಸ್ನೇಹಿತನೊಂದಿಗೆ ಮಂಗಳವಾರ ಸಂಜೆ ಸುಮಾರು 6.30ಕ್ಕೆ ಬಿಶಿಂಗ್‌ ಗ್ರಾಮದ ಬಳಿ ಬೇಟೆಯಾಡಲು ಹೋಗಿದ್ದ ವೇಳೆ ಆತನನ್ನು ಪಿಎಲ್‌ಎ ಅಪಹರಿಸಿದೆ. ಬಾಲಕನನ್ನು ರಕ್ಷಿಸಿ, ವಾಪಸು ಕರೆತರಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕ್ರಮಕೈಗೊಳ್ಳಬೇಕು’ ಎಂದು ಬಿಜೆಪಿ ಸಂಸದ ತಾಪಿರ್ ಗಾವೊ ಅವರು ಟ್ವಿಟರ್‌ನಲ್ಲಿ ಬುಧವಾರ ಮನವಿ ಮಾಡಿದ್ದರು.

ಕಾಂಗ್ರೆಸ್‌ ಶಾಸಕ ನಿನಾಂಗ್‌ ಎರಿಂಗ್‌ ಸಹ ಟ್ವೀಟ್‌ ಮಾಡಿ, ‘ಮಿರಾಮ್‌ನನ್ನು ಸುರಕ್ಷಿತವಾಗಿ ವಾಪಸು ಕರೆತರಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಹಾಯ ಮಾಡಬೇಕು. ಜತೆಗೆ, ಚೀನಾದ ನುಸುಳುಕೋರರ ಬಗ್ಗೆ ಪರಿಶೀಲನೆ ನಡೆಸಬೇಕು’ ಎಂದು ಕೋರಿದ್ದರು.

‘ಮಿರಾಮ್‌ನೊಂದಿಗಿದ್ದ ಜಾನಿ ಯಾಯಿಂಗ್‌ ತಪ್ಪಿಸಿಕೊಂಡು ಬಂದು, ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾನೆ’ ಎಂದು ಮೂಲಗಳು ಹೇಳಿವೆ.

ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

ಅರುಣಾಚಲಪ್ರದೇಶದಲ್ಲಿ ಯುವಕನನ್ನು ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿ(ಪಿಎಲ್‌ಎ) ಅ‍ಪಹರಿಸಿದೆ ಎನ್ನಲಾದ ವಿಷಯವಾಗಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ್ದಾರೆ.

‘ಈ ಪ್ರಕರಣ ಕುರಿತು ಪ್ರಧಾನಿ ಮೌನವಾಗಿದ್ದಾರೆ. ತನಗೆ ಯಾರ ಬಗ್ಗೆಯೂ ಕಾಳಜಿ ಇಲ್ಲ ಎಂಬುದನ್ನು ಅವರ ಈ ಮೌನವೇ ಹೇಳುತ್ತದೆ’ ಎಂದು ಟೀಕಿಸಿದ್ದಾರೆ.

‘ಅಪಹರಣಕ್ಕೆ ಒಳಗಾಗಿರುವ ಯುವಕ ಮಿರಾಮ್ ತರೊನ್‌ ಕುಟುಂಬದೊಂದಿಗೆ ನಾನು ನಿಲ್ಲುತ್ತೇನೆ. ಆತ ಸುರಕ್ಷಿತವಾಗಿ ವಾಪಸು ಬರುವ ಬಗ್ಗೆ ಭರವಸೆ ಇದೆ’ ಎಂದು ಹೇಳಿದ್ದಾರೆ.

‘ಗಣರಾಜ್ಯೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ, ಭಾರತದ ಯುವಕನನ್ನು ಚೀನಾ ಅಪಹರಿಸಿದೆ. ಈ ವಿಷಯಕ್ಕೆ ಸಂಬಂಧಿಸಿ ಪ್ರಧಾನಿ ಮೌನವಾಗಿದ್ದಾರೆ. ಪುಕ್ಕಲುತನದ ಮೌನವೇ ಈ ವಿದ್ಯಮಾನ ಕುರಿತ ಅವರ ಹೇಳಿಕೆಯಾಗಿದೆ’ ಎಂದು ಅವರು ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

‘ಒಂದೆಡೆ ಚೀನಾದ ಆಕ್ರಮಣಕಾರಿ ಪ್ರವೃತ್ತಿ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ನೇತೃತ್ವದ ಸರ್ಕಾರ ನಿರ್ಲಜ್ಜತನ ಹೆಚ್ಚುತ್ತಿದೆ’ ಎಂದು ಕಾಂಗ್ರೆಸ್‌ ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿದೆ.

‘ಭಾರತದ ಗಡಿ ದಾಟಿ ಬಂದು, ನಾಗರಿಕನೊಬ್ಬನನ್ನು ಅಪಹರಿಸಲು ಚೀನಾಕ್ಕೆ ಧೈರ್ಯ ಹೇಗೆ ಬಂತು’ ಎಂದು ಕಾಂಗ್ರೆಸ್‌ನ ಮುಖ್ಯವಕ್ತಾರ ರಣದೀಪ್‌ ಸುರ್ಜೇವಾಲಾ ಅವರು ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ.

‘ಭಾರತ ಸರ್ಕಾರ ಮೌನವಾಗಿದೆ ಏಕೆ? ತಮ್ಮದೇ ಪಕ್ಷದ ಸಂಸದರೊಬ್ಬರ ಮನವಿಯನ್ನು ಸರ್ಕಾರ ಕೇಳಿಸಿಕೊಳ್ಳುತ್ತಿಲ್ಲವೇಕೆ’ ಎಂದು ಅವರು ಟ್ವೀಟ್‌ ಮೂಲಕ ಪ್ರಶ್ನಿಸಿದ್ದಾರೆ.

‘ಸಿಯಾಂಗ್‌ ಜಿಲ್ಲೆಯ ಝಿಡೋ ಗ್ರಾಮದ ನಿವಾಸಿ ಮಿರಾಮ್ ತರೊನ್‌ ತನ್ನ ಸ್ನೇಹಿತನೊಂದಿಗೆ ಮಂಗಳವಾರ ಸಂಜೆ ಸುಮಾರು 6.30ಕ್ಕೆ ಬಿಶಿಂಗ್‌ ಗ್ರಾಮದ ಬಳಿ ಬೇಟೆಯಾಡಲು ಹೋಗಿದ್ದ ವೇಳೆ ಆತನನ್ನು ಪಿಎಲ್‌ಎ ಅಪಹರಿಸಿದೆ. ಬಾಲಕನನ್ನು ರಕ್ಷಿಸಿ, ವಾಪಸು ಕರೆತರಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕ್ರಮಕೈಗೊಳ್ಳಬೇಕು’ ಎಂದು ಬಿಜೆಪಿ ಸಂಸದ ತಾಪಿರ್ ಗಾವೊ ಅವರು ಟ್ವಿಟರ್‌ನಲ್ಲಿ ಬುಧವಾರ ಮನವಿ ಮಾಡಿದ್ದರು.

ಕಾಂಗ್ರೆಸ್‌ ಶಾಸಕ ನಿನಾಂಗ್‌ ಎರಿಂಗ್‌ ಸಹ ಟ್ವೀಟ್‌ ಮಾಡಿ, ‘ಮಿರಾಮ್‌ನನ್ನು ಸುರಕ್ಷಿತವಾಗಿ ವಾಪಸು ಕರೆತರಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಹಾಯ ಮಾಡಬೇಕು. ಜತೆಗೆ, ಚೀನಾದ ನುಸುಳುಕೋರರ ಬಗ್ಗೆ ಪರಿಶೀಲನೆ ನಡೆಸಬೇಕು’ ಎಂದು ಕೋರಿದ್ದರು.

‘ಮಿರಾಮ್‌ನೊಂದಿಗಿದ್ದ ಜಾನಿ ಯಾಯಿಂಗ್‌ ತಪ್ಪಿಸಿಕೊಂಡು ಬಂದು, ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾನೆ’ ಎಂದು ಮೂಲಗಳು ಹೇಳಿವೆ.

ಮಿರಾಮ್ ಪತ್ತೆಗೆ ಪಿಎಲ್‌ಎ ನೆರವು ಕೋರಿದ ಸೇನೆ
‘ಕಾಣೆಯಾಗಿರುವ ಮಿರಾಮ್‌ ತರೊನ್‌ನನ್ನು ಚೀನಾಕ್ಕೆ ಸೇರಿದ ಪ್ರದೇಶದಲ್ಲಿ ಪತ್ತೆ ಮಾಡಲು ಭಾರತೀಯ ಸೇನೆಯು ಪಿಎಲ್‌ಎದ ನೆರವು ಕೇಳಿದೆ. ಉಭಯ ದೇಶಗಳ ನಡುವೆ ಅನುಸರಿಸಲಾಗುತ್ತಿರುವ ಶಿಷ್ಟಾಚಾರದ ಪ್ರಕಾರ ಯುವಕನನ್ನು ವಾಪಸು ತರಲು ಪ್ರಯತ್ನಿಸಲಾಗುತ್ತಿದೆ’ ಎಂದು ರಕ್ಷಣಾ ಇಲಾಖೆ ಗುರುವಾರ ಹೇಳಿದೆ.

ಮಿರಾನ್‌ ತರೊನ್ ಅಪಹರಣಕ್ಕೆ ಒಳಗಾಗಿದ್ದಾನೆ ಎನ್ನಲಾದ ಮಾಹಿತಿ ಲಭಿಸುತ್ತಿದ್ದಂತೆಯೇ, ಭಾರತೀಯ ಸೇನೆಯು ಪಿಎಲ್‌ಎಅನ್ನು ಸಂಪರ್ಕಿಸಿತು. ಗಿಡಮೂಲಿಕೆ ಸಂಗ್ರಹ ಹಾಗೂ ಬೇಟೆಯಾಡಲು ತೆರಳಿದ್ದ ವ್ಯಕ್ತಿ ದಾರಿ ತಪ್ಪಿಸಿಕೊಂಡಿದ್ದು, ನಾಪತ್ತೆಯಾಗಿದ್ದಾನೆ ಎಂಬುದಾಗಿ ಪಿಎಲ್‌ಎಗೆ ಮಾಹಿತಿ ನೀಡಲಾಯಿತು’ ಎಂದು ಇಲಾಖೆ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.