
ತಿರುವನಂತಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪ್ರಾಮಾಣಿಕ ವ್ಯಕ್ತಿ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಶುಕ್ರವಾರ ಶ್ಲಾಘಿಸಿದ್ದಾರೆ. ಅಲ್ಲದೇ ಅವರು ದೇಶದಲ್ಲಿ ಕೋಮುವಾದದಂತಹ ವಿವಿಧ ವಿಷಯಗಳ ವಿರುದ್ಧ 'ಪ್ರಬಲ ಧ್ವನಿ'ಯಾಗಿದ್ದಾರೆ ಎಂದಿದ್ದಾರೆ.
ತಿರುವನಂತಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕೋಮುವಾದ, ದ್ವೇಷ ಮತ್ತು ವಿಭಜಕ ರಾಜಕೀಯದ ವಿರುದ್ಧ ನಿರಂತರವಾಗಿ ಮಾತನಾಡುವ ರಾಹುಲ್ ಅವರನ್ನು ಎಲ್ಲರೂ ಇಷ್ಟಪಡುತ್ತಾರೆ. ಆ ಬಗ್ಗೆ ನನಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದ್ದಾರೆ.
ರಾಹುಲ್ ವಿರುದ್ಧದ ಯಾವುದೇ ತಪ್ಪು ಹೇಳಿಕೆಗಳನ್ನು ನಾನು ಎಂದಿಗೂ ಒಪ್ಪುವುದಿಲ್ಲ. ಅವರು ಪ್ರಾಮಾಣಿಕ ನಾಯಕ ಎಂದೂ ತರೂರ್ ಶ್ಲಾಘಿಸಿದ್ದಾರೆ.
ತರೂರ್ ಅವರು ಪಕ್ಷದ ಹೈಕಮಾಂಡ್‌ನೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿರುವ ನಡುವೆಯೇ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಗುರುವಾರ ಭೇಟಿ ಮಾಡಿ ಚರ್ಚೆ ನಡೆಸಿದ್ದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ್ದ ಅವರು, ‘ಎಲ್ಲವೂ ಸರಿಯಾಗಿಯೇ ಇದೆ. ಪಕ್ಷದ ನಾಯಕತ್ವದೊಂದಿಗಿನ ನಂಟು ಹಿಂದಿನಂತೆಯೇ’ ಇದೆ ಎಂದು ತಿಳಿಸಿದ್ದರು.
‘ಪಕ್ಷದ ಇಬ್ಬರು ನಾಯಕರೊಂದಿಗೆ ಚರ್ಚೆ ನಡೆಸಿದ್ದೇನೆ. ಸಕಾರಾತ್ಮಕವಾದ ಚರ್ಚೆ ನಡೆದಿದೆ. ಎಲ್ಲವೂ ಸರಿಯಾಗಿ ಇದೆ. ಇದಕ್ಕಿಂತ ಹೆಚ್ಚು ಏನು ಹೇಳಲು ಸಾಧ್ಯ’ ಎಂದು ಪತ್ರಕರ್ತರನ್ನು ಪ್ರಶ್ನಿಸಿದರು.
ಇತ್ತೀಚೆಗೆ ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ಅವರು ತಮ್ಮನ್ನು ಸರಿಯಾಗಿ ಗುರುತಿಸದಿರುವುದು ಸೇರಿದಂತೆ ಹಲವು ವಿಚಾರಗಳಲ್ಲಿ ಪಕ್ಷವು ನಿರ್ಲಕ್ಷಿಸುತ್ತಿದೆ ಎಂಬ ಕಾರಣಕ್ಕೆ ತರೂರ್ ಅಸಮಾಧಾನಗೊಂಡಿದ್ದರು ಎಂದು ವರದಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.