ದೇವೇಂದ್ರ ಫಡಣವೀಸ್ ಮತ್ತು ರಾಹುಲ್ ಗಾಂಧಿ
–ಪಿಟಿಐ ಚಿತ್ರಗಳು
ಮುಂಬೈ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಗರ ನಕ್ಸಲರ ರೀತಿ ಮಾತನಾಡುತ್ತಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರವನ್ನು ಉರುಳಿಸಲು ಝೆನ್ ಜೀಗಳನ್ನು ಕೇಳಿಕೊಂಡಿದ್ದಾರೆ ಎಂದು ಫಡಣವೀಸ್ ಹೇಳಿದ್ದಾರೆ.
ರಾಹುಲ್ ಗಾಂಧಿ ಸಂವಿಧಾನವನ್ನು ನಂಬುವುದಿಲ್ಲ. ಸಾಂವಿಧಾನಿಕ ಸಂಸ್ಥೆಗಳನ್ನು ತಿರಸ್ಕರಿಸುತ್ತಾರೆ, ಅವರ ಸಲಹೆಗಾರರು ಸಹ ನಗರ ನಕ್ಸಲರ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕರ್ನಾಟಕದ ಆಳಂದದಲ್ಲೂ ಮತಗಳ್ಳತನದ ಯತ್ನದ ಬಗ್ಗೆ ಆರೋಪಿಸಿದ್ದ ರಾಹುಲ್, ಗುರುವಾರ ಸಂಜೆ ಪೋಸ್ಟ್‌ನಲ್ಲಿ ‘ದೇಶದ ಯುವಕರು, ವಿದ್ಯಾರ್ಥಿಗಳು, ರಾಷ್ಟ್ರದ ಝೆನ್ ಜೀಗಳು, ಸಂವಿಧಾನವನ್ನು ರಕ್ಷಿಸುತ್ತಾರೆ, ಪ್ರಜಾಪ್ರಭುತ್ವವನ್ನು ರಕ್ಷಿಸುತ್ತಾರೆ ಮತ್ತು ಮತಗಳ್ಳತನವನ್ನು ನಿಲ್ಲಿಸುತ್ತಾರೆ’ಎಂದು ಬರೆದಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಫಡಣವೀಸ್, ‘ಪ್ರಜಾಸತ್ತಾತ್ಮಕ ರೀತಿಯಲ್ಲಿ ಚುನಾಯಿತವಾದ ಸರ್ಕಾರವನ್ನು ಕಿತ್ತೊಗೆಯಲು ಝೆನ್ ಜೀಗೆ ರಾಹುಲ್ ಆಹ್ವಾನ ನೀಡಿದ್ದಾರೆ. ಇದು ಮತಗಳ್ಳತನವಲ್ಲ ರಾಹುಲ್ ಗಾಂಧಿ ಮೆದುಳು ಕಳ್ಳತನವಾಗಿದೆ. ಸಂವಿಧಾನದ ಬಗ್ಗೆ ಅವರಿಗೆ ನಂಬಿಕೆ ಇಲ್ಲ. ಸಾಂವಿಧಾನಿಕ ಸಂಸ್ಥೆಗಳನ್ನು ತಿರಸ್ಕರಿಸುತ್ತಿದ್ದಾರೆ. ನಗರ ನಕ್ಸಲರ ರೀತಿ ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿ ಝೆನ್ ಜೀ, ಯುವಜನರು ಮತ್ತು ದೇಶದ ಹಿರಿಯ ನಾಯಕರು ಯಾರೊಬ್ಬರನ್ನೂ ಅರ್ಥ ಮಾಡಿಕೊಂಡಿಲ್ಲ’ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.