ADVERTISEMENT

ಅಗ್ನಿಪಥ ಯೋಜನೆ: ನಮ್ಮ ಸೇನೆಯ ಘನತೆಯ ಜೊತೆ ರಾಜಿ ಬೇಡ- ರಾಹುಲ್ ಗಾಂಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜೂನ್ 2022, 15:25 IST
Last Updated 15 ಜೂನ್ 2022, 15:25 IST
ರಾಹುಲ್ ಗಾಂಧಿ (ಪಿಟಿಐ ಚಿತ್ರ)
ರಾಹುಲ್ ಗಾಂಧಿ (ಪಿಟಿಐ ಚಿತ್ರ)   

ಬೆಂಗಳೂರು: ಸೇನಾ ನೇಮಕಾತಿ ನೀತಿ ಬದಲಾವಣೆ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಪಸ್ವರ ವ್ಯಕ್ತಪಡಿಸಿದ್ದಾರೆ. ನಮ್ಮ ಭಾರತ ಸೇನೆಯ ಘನತೆ, ಸಂಪ್ರದಾಯ, ಶೌರ್ಯ ಮತ್ತು ಶಿಸ್ತಿನ ಜೊತೆಗೆ ರಾಜಿ ಮಾಡಿಕೊಳ್ಳುವುದನ್ನು ಬಿಜೆಪಿ ಸರ್ಕಾರ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಸೈನಿಕರ ನೇಮಕಕ್ಕಾಗಿ ‘ಅಗ್ನಿಪಥ’ ಎಂಬ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದ ಬೆನ್ನಲ್ಲೇ, ಎರಡು ಕಡೆಗಳಿಂದಬೆದರಿಕೆಯಿರುವ ಈ ಸಂದರ್ಭದಲ್ಲಿ,ಅಗ್ನಿಪಥ ಯೋಜನೆಯಿಂದ ಶಸಸ್ತ್ರ ಪಡೆಗಳ ಕಾರ್ಯಾಚರಣೆಯ ಸಾಮರ್ಥ್ಯವನ್ನು ಕುಂಟಿತಗೊಳಿಸುತ್ತದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡಾ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ‘ಯೋಜನೆಯನ್ನು ಪ್ರಕಟಿಸುವ ಮುನ್ನ ಸರ್ಕಾರವು ಯಾವುದೇ ರೀತಿಯ ಗಂಭೀರ ಚಿಂತನೆಯನ್ನಾಗಲೀ ಅಥವಾ ಸಮಾಲೋಚನೆಯನ್ನಾಗಲೀ ನಡೆಸಿಲ್ಲ’ ಎಂದು ಆರೋಪಿಸಿದ್ದಾರೆ.

ADVERTISEMENT

‘ಬಿಜೆಪಿ ಸರ್ಕಾರವು ತನ್ನ ಪ್ರಯೋಗಾಲಯದಲ್ಲಿ ಸಶಸ್ತ್ರ ಪಡೆಗಳ ನೇಮಕಾತಿಯನ್ನು ಏಕೆ ಮಾಡುತ್ತಿದೆ? ಸೈನಿಕರ ಸುದೀರ್ಘ ಸೇವೆಯು ಸರ್ಕಾರಕ್ಕೆ ಹೊರೆಯಾಗಿದೆಯೇ? ನಾಲ್ಕು ವರ್ಷಗಳ ನಿಯಮದಿಂದ ಅನ್ಯಾಯವಾಗುತ್ತದೆ ಎಂದು ಯುವಕರು ಹೇಳುತ್ತಿದ್ದಾರೆ. ನಮ್ಮ ಮಾಜಿ ಸೈನಿಕರೂ ಕೂಡಾ ಇದನ್ನು ಒಪ್ಪುವುದಿಲ್ಲ. ಸೇನಾ ನೇಮಕಾತಿಯ ಸೂಕ್ಷ್ಮ ವಿಷಯದ ಬಗ್ಗೆ ಯಾವುದೇ ಗಂಭೀರ ಚಿಂತನೆಯೂ ಇಲ್ಲ’ ಎಂದು ಪ್ರಿಯಾಂಕಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಹದಿನೇಳೂವರೆ ವರ್ಷದಿಂದ 21 ವರ್ಷದೊಳಗಿನವರು ಅಗ್ನಿಪಥ ಯೋಜನೆಯಡಿ ಸೇನೆಗೆ ಸೇರಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.