ADVERTISEMENT

ಸಂತ್ರಸ್ತ ರೈತ ಕುಟುಂಬಗಳಿಗೆ ಉದ್ಯೋಗ–ಪರಿಹಾರಕ್ಕೆ ರಾಹುಲ್ ಗಾಂಧಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 20:46 IST
Last Updated 7 ಡಿಸೆಂಬರ್ 2021, 20:46 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ    

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ, ವರ್ಷದಿಂದ ನಡೆಯುತ್ತಿರುವ ಹೋರಾಟದಲ್ಲಿ ಮೃತಪಟ್ಟ ರೈತರ ಕುಟುಂಬದವರಿಗೆ ಪರಿಹಾರ ಹಾಗೂ ಉದ್ಯೋಗ ಕಲ್ಪಿಸಬೇಕು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಂಗಳವಾರ ಒತ್ತಾಯಿಸಿದರು.

ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ವರ್ಷ‍ಪೂರ್ತಿ ನಡೆದ ಪ್ರತಿಭಟನೆಯಲ್ಲಿ ಮೃತಪಟ್ಟ ರೈತರ ಮಾಹಿತಿಯೂ ಕೇಂದ್ರ ಸರ್ಕಾರದ ಬಳಿ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಅಲ್ಲದೇ, ಪಂಜಾಬ್‌ನಲ್ಲಿ ಪರಿಹಾರ ಹಾಗೂ ಉದ್ಯೋಗಾವಕಾಶ ಸೌಲಭ್ಯ ಪಡೆದ ರೈತರ ಪಟ್ಟಿಯನ್ನೂ ‍ಪ್ರಸ್ತುತಪಡಿಸಿದರು.

ಪಂಜಾಬ್‌ ಸರ್ಕಾರವು 400ಕ್ಕೂ ಹೆಚ್ಚು ರೈತರ ಕುಟುಂಬದವರಿಗೆ ತಲಾ ₹ 5 ಲಕ್ಷ ಪರಿಹಾರ ನೀಡಿದ್ದು, ಈ ಪೈಕಿ 152 ಜನರಿಗೆ ಉದ್ಯೋಗವನ್ನೂ ನೀಡಲಾಗಿದೆ. ಹರಿಯಾಣದ 70 ರೈತರ ಪಟ್ಟಿಯೂ ತಮ್ಮ ಬಳಿ ಇದೆ ಎಂದು ರಾಹುಲ್‌ ಹೇಳಿದರು.

ADVERTISEMENT

‘ರೈತ ಹೋರಾಟದಲ್ಲಿ ಅಂದಾಜು 700 ರೈತರು ಮೃತಪಟ್ಟಿದ್ದಾರೆ. ಪ್ರಧಾನಿಯೇ ತಪ್ಪನ್ನು ಒಪ್ಪಿಕೊಂಡಿದ್ದಾರೆ; ರೈತರ ಕ್ಷಮೆ ಕೇಳಿದ್ದಾರೆ. ಆದರೆ, ಎಷ್ಟು ಜನ ರೈತರು ಪ್ರತಿಭಟನೆಯಲ್ಲಿ ಮೃತಪಟ್ಟಿದ್ದಾರೆ ಎಂದು ಕೃಷಿ ಸಚಿವರನ್ನು ಕೇಳಿದರೆ, ತಮಗೆ ಆ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಾರೆ’ ಎಂದು ಟೀಕಿಸಿದ ರಾಹುಲ್‌, ರೈತ ಕುಟುಂಬಗಳಿಗೆ ದೊರೆಯಬೇಕಾದ ಹಕ್ಕನ್ನು ನೀಡಬೇಕು ಎಂದು ಒತ್ತಾಯಿಸಿದರು.

ಈ ವಿಷಯವಾಗಿ ಸರ್ಕಾರವು ಹೇಳಿಕೆ ನೀಡಬೇಕು ಎಂದು ಆಗ್ರಹಿಸಿದ ಕಾಂಗ್ರೆಸ್‌ ಸದಸ್ಯರು, ಎನ್‌ಸಿಪಿ ಹಾಗೂ ಡಿಎಂಕೆ ಸದಸ್ಯರೊಡಗೂಡಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಸದನದಿಂದ ಹೊರನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.