ADVERTISEMENT

ಪ್ರಧಾನಿ ಮೋದಿ ವೈಫಲ್ಯಕ್ಕೆ ಆರ್‌ಎಸ್‌ಎಸ್‌ ಹರಡುವ ಧ್ವೇಷ ಕಾರಣ: ರಾಹುಲ್ ಗಾಂಧಿ

ಪಿಟಿಐ
Published 27 ಜನವರಿ 2021, 14:35 IST
Last Updated 27 ಜನವರಿ 2021, 14:35 IST
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ   

ತಿರುವನಂತಪುರಂ: ಚೀನಾದೊಂದಿಗಿನ ಗಡಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ವಾಗ್ದಾಳಿಯನ್ನು ಮುಂದುವರಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಅವರು ದೇಶವನ್ನು 'ದುರ್ಬಲಗೊಳಿಸುತ್ತಿದ್ದಾರೆ' ಮತ್ತು 'ನಾಶಪಡಿಸುತ್ತಿದ್ದಾರೆ'. 'ಇದೇ ಮೊದಲ ಬಾರಿಗೆ' ಚೀನಾದ ಸೈನ್ಯವು ಭಾರತೀಯ ಪ್ರದೇಶದೊಳಗೆ ಠಿಕಾಣಿ ಹೂಡಿದೆ ಎಂದು ಹೇಳಿದ್ದಾರೆ.

ಇನ್ನೇನು ಕೆಲ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಕೇರಳಕ್ಕೆ ಎರಡು ದಿನಗಳ ಕಾಲ ಭೇಟಿ ನೀಡಿರುವ ರಾಹುಲ್, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ನ ಅಭಿಯಾನಕ್ಕೆ ಚಾಲನೆ ನೀಡಿದರು.

ಆಡಳಿತಾರೂಢ ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್‌ ನೀತಿಗಳು ರಾಜ್ಯಕ್ಕೆ 'ಹಾನಿ'ಯುಂಟು ಮಾಡಿವೆ ಎಂದು ಆರೋಪಿಸಿದರು.

ADVERTISEMENT

ಸ್ವಕ್ಷೇತ್ರ ವಯನಾಡ್ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಮಲಪ್ಪುರಂ ಜಿಲ್ಲೆಯ ಥಾನಾ ಮತ್ತು ನೀಲಂಬೂರಿನಲ್ಲಿ ಯುಡಿಎಫ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಆರ್‌ಎಸ್‌ಎಸ್ ದ್ವೇಷವನ್ನು ಹರಡುತ್ತಿದೆ ಮತ್ತು ಇದು ದೇಶದ ಆರ್ಥಿಕತೆಯ 'ಕುಸಿತ'ಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

'ರಾಷ್ಟ್ರವೆಂಬ ಬಟ್ಟೆಗೆ ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿರುವ ಹಾನಿ ನಿಮಗೆ ತಿಳಿದೇ ಇದೆ. ಇದೇ ಮೊದಲ ಬಾರಿಗೆ ಚೀನಾದ ಪಡೆಗಳು ಭಾರತದ ಭೂಪ್ರದೇಶದೊಳಗೆ ಕುಳಿತಿವೆ. ವಿಶ್ವದಲ್ಲೇ ಅತ್ಯುತ್ತಮವಾಗಿದ್ದ ನಮ್ಮ ಆರ್ಥಿಕತೆಯು ಕುಸಿದಿದೆ. ನಮ್ಮ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಇದು ಆರ್‌ಎಸ್‌ಎಸ್‌ನ ಸಿದ್ಧಾಂತದ ಫಲಿತಾಂಶವಾಗಿದೆ' ಎಂದು ದೂರಿದರು.

ಪ್ರಧಾನಿ ಅಸಮರ್ಥರಾಗಿದ್ದಾರೆ, ಆದರೆ ಅವರ ವೈಫಲ್ಯಕ್ಕೆ ಆರ್‌ಎಸ್‌ಎಸ್‌ನಿಂದ ದೇಶದಲ್ಲಿ ಹರಡುತ್ತಿರುವ ದ್ವೇಷವೇ ಕಾರಣ. ಚೀನಾದ ಸೈನ್ಯವು ದೇಶದೊಳಗೆ ಬಂದಾಗ ಅವರ 56 ಇಂಚಿನ ಎದೆಗೆ ಏನಾಯಿತು. ಕಳೆದ ಆರು ತಿಂಗಳಲ್ಲಿ ಒಂದೇ ಒಂದು ಬಾರಿಯು ಪ್ರಧಾನ ಮಂತ್ರಿ ಚೀನಾದ ಬಗ್ಗೆ ಮಾತಾನಾಡಿಲ್ಲ' ಎಂದು ಗಾಂಧಿ ಹೇಳಿದರು.

'ಪ್ರಧಾನಿ ದೇಶವನ್ನು ಒಡೆದಿದ್ದಾರೆ ಮತ್ತು ದ್ವೇಷವನ್ನು ಹರಡುತ್ತಿರುವುದರಿಂದಲೇ ಚೀನಿಯರು ದೇಶದೊಳಗೆ ನುಸುಳಲು ತೀರ್ಮಾನಿಸಿದ್ದಾರೆ. ಪ್ರಧಾನಿ ಈ ದೇಶವನ್ನು ದುರ್ಬಲಗೊಳಿಸಿದ್ದಾರೆ ಮತ್ತು ಅವರು ನಮ್ಮ ವಿರುದ್ಧ ನಿಲ್ಲಲು ಸಾಧ್ಯವಿಲ್ಲ ಎಂಬುದು ತಿಳಿಸಿದೆ ಎಂದ ರಾಹುಲ್, ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ ಜಾರಿ ಮೂಲಕ ಪ್ರಧಾನಿ ದೇಶದ ಆರ್ಥಿಕತೆಯನ್ನು ನಾಶಪಡಿಸಿದ್ದಾರೆ' ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.