ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ
ನವದೆಹಲಿ: ಕಾಂಗ್ರೆಸ್ ನಾಯಕಿ, ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ‘ಬುದ್ಧಿವಂತೆ’ (ಬ್ರೈಟ್ ಗರ್ಲ್) ಎಂದು ಪ್ರಶಂಸಿಸಿರುವ ಹಿರಿಯ ರಾಜಕಾರಣಿ ಮತ್ತು ಮಾಜಿ ಕೇಂದ್ರ ಸಚಿವ ಕರಣ್ ಸಿಂಗ್, ರಾಹುಲ್ ಗಾಂಧಿ ಅವರು ಸುಧಾರಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಸಂಸ್ಥೆ ಪಿಟಿಐ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ನೆಹರೂ–ಗಾಂಧಿ ಕುಟುಂಬದ ನಾಲ್ಕು ತಲೆಮಾರುಗಳೊಂದಿಗಿನ ತಮ್ಮ ಒಡನಾಟದ ಬಗ್ಗೆ ಮಾತನಾಡಿದ್ದಾರೆ.
ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆಯ ಸೋಲಿನ ನಂತರ ಕಠಿಣ ಸವಾಲುಗಳನ್ನು ಎದುರಿಸುತ್ತಿರುವ ರಾಹುಲ್ ಗಾಂಧಿ ಅವರ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಂಗ್, ‘ರಾಹುಲ್ ಒಬ್ಬ ಒಳ್ಳೆಯ ಹುಡುಗ, ಅವರೆಂದರೆ ನನಗೆ ಇಷ್ಟ. ಹಿಂದೆ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದೆ’ ಎಂದು ಹೇಳಿದ್ದಾರೆ.
‘ವರ್ಷದಿಂದ ವರ್ಷಕ್ಕೆ ಅವರು(ರಾಹುಲ್) ಸುಧಾರಿಸುತ್ತಾ ಬರುತ್ತಿದ್ದಾರೆ. ಹೊಸ ಹೊಸ ಕೌಶಲಗಳನ್ನು ಕಲಿಯುತ್ತಿದ್ದಾರೆ. ಪ್ರಧಾನಿಯಾಗುತ್ತಾರೋ ಇಲ್ಲವೋ ಅವೆಲ್ಲ ಊಹಾಪೋಹಗಳಷ್ಟೆ’ ಎಂದು ಹೇಳಿದ್ದಾರೆ
ಪ್ರಿಯಾಂಕಾ ಗಾಂಧಿ ಅವರ ಬಗ್ಗೆ ಕೇಳಿದ ಪ್ರಶ್ನೆಗೆ ತುಂಬಾ ಉತ್ಸಾಹದಿಂದ ಪ್ರತಿಕ್ರಿಯಿಸಿದ ಅವರು, ‘ಅವಳು(ಪ್ರಿಯಾಂಕಾ) ತುಂಬಾ ಬುದ್ದಿವಂತೆ’ ಎಂದು ಹೊಗಳಿದ್ದಾರೆ.
ಇದೇ ವೇಳೆ ತಮ್ಮ ರಾಜಕೀಯ ಜೀವನದ ಬಗ್ಗೆ ಮಾತನಾಡಿದ ಅವರು, ‘ನಾನು ಇಂದಿರಾ ಗಾಂಧಿ ಅವರ ಕ್ಯಾಬಿನೆಟ್‌ನಲ್ಲಿ 10 ವರ್ಷಗಳ ಕಾಲ ಇದ್ದೆ. ಅವರ ರಾಜಕೀಯ ಜೀವನದ ಉತ್ತಮ ಕ್ಷಣ(ಬಾಂಗ್ಲಾದೇಶ ವಿಮೋಚನೆ) ಮತ್ತು ಕರಾಳ ಕ್ಷಣವನ್ನು(ತುರ್ತು ಪರಿಸ್ಥಿತಿ) ನೋಡಿದ್ದೇನೆ. 'ಸಬ್ ದೇಖಾ ಹೈ’ (ಎಲ್ಲವನ್ನೂ ನೋಡಿದ್ದೇನೆ)' ಎಂದು ಅವರು ಹೇಳಿದ್ದಾರೆ.
‘2006ರಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ನನ್ನ ಹೆಸರನ್ನು ಸೋನಿಯಾ ಗಾಂಧಿ ಅವರು ಸಭೆಯೊಂದರಲ್ಲಿ ಪ್ರಸ್ತಾಪಿಸಿದ್ದರು. ಆದರೆ ಎಡಪಕ್ಷಗಳು ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ’ ಎಂದು ತಿಳಿಸಿದ್ದಾರೆ.
‘ಮಹಾರಾಜ‘ ರಾಷ್ಟ್ರಪತಿಯಾಗುವುದು ಹೇಗೆ ಎಂದು ಎಡಪಕ್ಷಗಳು ಪ್ರಶ್ನಿಸಿದ್ದವು. ರಾಷ್ಟ್ರಪತಿಯಾಗಿ ಆಯ್ಕೆಯಾಗದೇ ಇರುವುದಕ್ಕೆ ಯಾವುದೇ ವಿಷಾದವಿಲ್ಲ ಎಂದಿದ್ದಾರೆ.
2007ರಲ್ಲಿ ಪ್ರತಿಭಾ ಪಾಟೀಲ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.