ADVERTISEMENT

ರಾಹುಲ್‌ಗಾಂಧಿ ಅಣಬೆ ಬಿರಿಯಾನಿ ಸವಿದ ವಿಡಿಯೊ ವೈರಲ್‌

ಪಿಟಿಐ
Published 30 ಜನವರಿ 2021, 10:57 IST
Last Updated 30 ಜನವರಿ 2021, 10:57 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ಚೆನ್ನೈ: ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಇತ್ತೀಚೆಗೆ ತಮಿಳುನಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಗ್ರಾಮವೊಂದರಲ್ಲಿ ಕೆಲ ಗ್ರಾಮಸ್ಥರೊಂದಿಗೆ ಕುಳಿತು ಅಣಬೆ ಬಿರಿಯಾನಿಯನ್ನು ಸವಿದ ವಿಡಿಯೊ ವೈರಲ್‌ ಆಗಿದೆ.

31.24 ಲಕ್ಷ ಜನರು ಈ ವಿಡಿಯೊ ವೀಕ್ಷಿಸಿದ್ದಾರೆ. ‘ವಿಲೇಜ್‌ ಕುಕಿಂಗ್ ಚಾನೆಲ್‌’ ಈ ವಿಡಿಯೊವನ್ನು ಯೂಟೂಬ್‌ನಲ್ಲಿ ಅಪ್‌ಲೋಡ್‌ ಮಾಡಿದೆ.

ತಮಿಳುನಾಡಿನ ಪಶ್ಚಿಮ ಭಾಗದ ಜಿಲ್ಲೆಗಳಲ್ಲಿ ರಾಹುಲ್‌ ಗಾಂಧಿ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಈ ವಿಡಿಯೊ ಚಿತ್ರೀಕರಣ ಮಾಡಲಾಗಿದೆ. ಕರೂರು ಕ್ಷೇತ್ರದ ಸಂಸದೆ ಎಸ್‌.ಜ್ಯೋತಿಮಣಿ, ಎಐಸಿಸಿಯ ತಮಿಳುನಾಡು ಉಸ್ತುವಾರಿ ದಿನೇಶ್‌ ಗುಂಡೂರಾವ್‌ ಅವರೂ ರಾಹುಲ್‌ ಜೊತೆಗಿದ್ದರು.

ADVERTISEMENT

ಬಿರಿಯಾನಿ ಜೊತೆಗೆ ಸವಿಯಲು ಗ್ರಾಮಸ್ಥರೊಬ್ಬರು ರಾಯತ ತಯಾರಿಸುವಾಗ, ಒಬ್ಬ ಗ್ರಾಮಸ್ಥ ರಾಯತ ತಯಾರಿಸಲು ಈರುಳ್ಳಿ, ಮೊಸರು ಹಾಗೂ ಇತರ ಪದಾರ್ಥಗಳು ಬೇಕು ಎಂಬುದನ್ನು ತಮಿಳಿನಲ್ಲಿ ವಿವರಿಸಿದ್ದಾರೆ. ಅವರು ಹೇಳಿದಂತೆ, ರಾಹುಲ್‌ ಈ ಪದಾರ್ಥಗಳನ್ನು ಪಾತ್ರೆಯಲ್ಲಿ ಹಾಕಿ, ಮಿಶ್ರಣ ಮಾಡುತ್ತಿರುವುದು ವಿಡಿಯೊದಲ್ಲಿದೆ.

ನಂತರ ಬಾಳೆ ಎಲೆ ಹಾಕಿ, ಅವರಿಗೆ ಊಟ ಬಡಿಸಲಾಗಿದೆ. ಅವರು, ಗ್ರಾಮಸ್ಥರೊಂದಿಗೆ ಕುಳಿತು ಅಣಬೆ ಬಿರಿಯಾನಿಯನ್ನು ಸವಿದಿದ್ದಾರೆ.

‘ಅಪ್ಪಟ ತಮಿಳುನಾಡಿನ ಆಹಾರವನ್ನು ಸವಿದೆ‘ ಎಂದ ಅವರು, ‘ರೊಂಬ ನಲ್ಲ ಇರುಕ್ಕು’ (ಬಹಳ ಚೆನ್ನಾಗಿತ್ತು) ಎಂದೂ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ಊಟ ಮಾಡುವ ವೇಳೆ ತಮ್ಮೊಂದಿಗೆ ಕುಳಿತವರನ್ನು ಉದ್ದೇಶಿಸಿ, ‘ಏನು ಮಾಡಬೇಕು ಎಂದು ಇಚ್ಛಿಸುತ್ತೀರಿ‘ ಎಂದು ರಾಹುಲ್‌ ಪ್ರಶ್ನಿಸಿದ್ದಾರೆ. ಅವರ ಪೈಕಿ ಒಬ್ಬರು ‘ಅಮೆರಿಕಕ್ಕೆ ಹೋಗಬೇಕು ಎಂಬ ಇಚ್ಛೆ’ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ರಾಹುಲ್‌, ‘ನನ್ನ ಆಪ್ತ ಮಿತ್ರರಾದ ಸ್ಯಾಮ್‌ ಪಿತ್ರೋಡ ಅವರ ಮೂಲಕ ಇದಕ್ಕೆ ವ್ಯವಸ್ಥೆ ಮಾಡುವೆ’ ಎಂದೂ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.