ADVERTISEMENT

ಜಡ್ಜ್‌, ಪೊಲೀಸ್‌ ಅಧಿಕಾರಿಗಳ ಹತ್ಯೆಗೆ ಪಿಎಫ್‌ಐ ಸಂಚು?

ಪಿಎಫ್‌ಐ ಮೇಲಿನ ದಾಳಿ ವೇಳೆ ಕಾರ್ಯಸೂಚಿಯ ದಾಖಲೆ ಜಪ್ತಿ l ಅಧಿಕಾರಿಗಳ ವಿವರಣೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 20:19 IST
Last Updated 29 ಸೆಪ್ಟೆಂಬರ್ 2022, 20:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ/ಮುಂಬೈ: ಹೈಕೋರ್ಟ್‌ಗಳ ನ್ಯಾಯಮೂರ್ತಿಗಳು, ಹಿರಿಯ ಪೊಲೀಸ್‌ ಅಧಿಕಾರಿಗಳ ಮೇಲೆ ದಾಳಿ ನಡೆಸಲು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯು ಸಂಚು ನಡೆಸಿತ್ತು ಎಂದು ಆರೋಪಿಸಲಾಗಿದೆ.

ಇಸ್ಲಾಮಿಕ್‌ ಸಂಘಟನೆ ಜೊತೆಗೆ ನಂಟು ಹೊಂದಿದ್ದ ಸಂಘಟನೆಯು 2047ರವರೆಗೆ ಜಾರಿಗೊಳಿಸಲು ಉದ್ದೇಶಿಸಿದ್ದ ಕಾರ್ಯಸೂಚಿ ಕುರಿತ ದಾಖಲೆಯೂ ದಾಳಿ ಸಂದರ್ಭದಲ್ಲಿ ದೊರೆತಿದೆ ಎಂದು ಕೇಂದ್ರ ಮತ್ತು ರಾಜ್ಯಗಳ ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳನ್ನು ವ್ಯಾಪಕವಾಗಿ ಬಳಸಿಕೊಂಡುಪಿಎಫ್‌ಐ, ಯುವಕರನ್ನು ಸಮಾಜವಿರೋಧಿ ಕೃತ್ಯಗಳಿಗೆ ನೇಮಿಸಿಕೊಳ್ಳುತ್ತಿತ್ತು. ಸಂಘಟನೆಯ ಉದ್ದೇಶಿತ ದಾಳಿ ಯೋಜನೆಗಳಲ್ಲಿ ತಮಿಳುನಾಡಿನ ಬೆಟ್ಟ ಪ್ರದೇಶ ವಟ್ಟಕ್ಕನಾಲ್‌ಗೆ ಭೇಟಿ ನೀಡುವ ವಿದೇಶಿಯರು ಮುಖ್ಯವಾಗಿ ಯಹೂದಿಗಳ ಮೇಲೆ ದಾಳಿ ನಡೆಸುವುದು ಸೇರಿತ್ತು ಎಂದು ವಿವರಿಸಿದ್ದಾರೆ.

ADVERTISEMENT

ಈ ಮಧ್ಯೆ ವಿವಿಧ ರಾಜ್ಯಗಳಲ್ಲಿ ಪಿಎಫ್‌ಐನ ಕಚೇರಿಗಳಿಗೆ ಬೀಗಮುದ್ರೆ ಹಾಕಿದ್ದು, ಬ್ಯಾಂಕ್‌ ಖಾತೆಗಳನ್ನು ತಡೆಹಿಡಿಯಲಾಗಿದೆ. ಸಂಘಟನೆಗೆ ಸೇರಿದ ಟ್ವಿಟರ್‌ ಖಾತೆಯನ್ನು ತಡೆಹಿಡಿಯಲಾಗಿದೆ. ಉಗ್ರ ಸಂಘಟನೆ ಐಎಸ್‌ ಜೊತೆಗೆ ನಂಟು ಹೊಂದಿದೆ ಎಂಬ ಆರೋಪದಡಿ ಕೇಂದ್ರ ಸರ್ಕಾರ ಪಿಎಫ್‌ಐ ಅನ್ನು ಐದು ವರ್ಷಗಳಿಗೆ ನಿಷೇಧಿಸಿತ್ತು.

ಇನ್ನೊಂದೆಡೆ, ಕೇಂದ್ರ ಸರ್ಕಾರ ಹೇರಿರುವ ನಿಷೇಧ ಕ್ರಮವನ್ನು ಜಾರಿಗೊಳಿಸುವ ಸಂಬಂಧ ಹಲವು ರಾಜ್ಯ ಸರ್ಕಾರಗಳು ಆದೇಶ ಹೊರಡಿಸಿವೆ. ಇದನ್ನು ಜಾರಿಗೊಳಿಸುವ ಅಧಿಕಾರಿಗಳು ಆಯಾ ಜಿಲ್ಲಾಧಿಕಾರಿಗಳು, ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ನೀಡಲಾಗಿದೆ. ಅಲ್ಲದೆ, ಸಂಘಟನೆಗೆ ಸೇರಿದವರ ಚಲನವಲನಗಳ ಮೇಲೆ ಕಣ್ಗಾವಲು ಇಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ತಮಿಳುನಾಡಿನಲ್ಲಿ ಪೊಲ್ಲಾಚಿ ಪಟ್ಟಣದಲ್ಲಿ ಸುಮಾರು 16 ಸ್ಥಳಗಳ ಮೇಲೆ ಪೆಟ್ರೋಲ್‌ ಬಾಂಬ್ ಎಸೆಯುವ ಕುರಿತಂತೆ ಬೆದರಿಕೆ ಪತ್ರವೊಂದು ಪೊಲೀಸರಿಗೆ ಬಂದಿದೆ. ಇದರ ಹಿಂದೆಯೇ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

‘ಅಂಚೆ ಮೂಲಕ ಬೆದರಿಕೆ ಪತ್ರವನ್ನು ಕಳುಹಿಸಲಾಗಿದೆ. ‘ನಾವು ಪೊಲೀಸರ ವಿರುದ್ಧ ಇಲ್ಲ. ಆದರೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವುದು ನಮ್ಮ ಉದ್ದೇಶ ಎಂದು ಅದರಲ್ಲಿ ಬರೆಯಲಾಗಿದೆ’ ಕೊಯಮತ್ತೂರು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.