ADVERTISEMENT

ರೈಲು ಅಪಘಾತದಲ್ಲಿ ಜೀವಹಾನಿ ಇಲ್ಲದ ವರ್ಷ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 19:45 IST
Last Updated 26 ಫೆಬ್ರುವರಿ 2020, 19:45 IST
   

ನವದೆಹಲಿ: ಈ ಹಣಕಾಸು ವರ್ಷದ 11 ತಿಂಗಳಲ್ಲಿ ರೈಲು ಅಪಘಾತದಲ್ಲಿ ಒಂದೇ ಒಂದು ಸಾವು ವರದಿಯಾಗಿಲ್ಲ. ಹಾಗಾಗಿ, ರೈಲ್ವೆಯ ಅತ್ಯಂತ ಸುರಕ್ಷಿತ ವರ್ಷ ಎಂದು ದಾಖಲಾಗಿದೆ ಎಂದು ಭಾರತೀಯ ರೈಲ್ವೆ ಹೇಳಿಕೊಂಡಿದೆ.

ಹಳಿ ನಿರ್ವಹಣೆ, ಸಿ‌ಗ್ನಲ್‌ ವ್ಯವಸ್ಥೆ, ಸಿಬ್ಬಂದಿಗೆ ಸುರಕ್ಷತಾ ತರಬೇತಿ, ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯು 2019–20ರಲ್ಲಿ ರೈಲ್ವೆ ಸುರಕ್ಷತೆಗೆ ದೊಡ್ಡ ಕೊಡುಗೆ ನೀಡಿವೆ ಎಂದು ಹೇಳಲಾಗಿದೆ.

2019ರ ಏಪ್ರಿಲ್‌ 1ರಿಂದ 2020ರ ಫೆಬ್ರುವರಿ 24ರವರೆಗೆ ರೈಲ್ವೆ ಅಪಘಾತಕ್ಕೆ ಸಂಬಂಧಿಸಿ ಪ್ರಯಾಣಿಕರ ಜೀವಹಾನಿ ಆಗಿಲ್ಲ ಎಂದು ರೈಲ್ವೆಯ ಹೇಳಿಕೆಯು ತಿಳಿಸಿದೆ.

ADVERTISEMENT

‘1853ರಲ್ಲಿ ರೈಲು ಸೇವೆ ಆರಂಭವಾಗಿ ಈವರೆಗಿನ 166 ವರ್ಷಗಳಲ್ಲಿ ಅಪಘಾತದಲ್ಲಿ ಒಂದು ಸಾವು ಕೂಡ ವರದಿಯಾಗದ ಮೊದಲ ವರ್ಷ ಇದು. ಎಲ್ಲ ರೀತಿಯಲ್ಲಿಯೂ ಸುರಕ್ಷತೆಯನ್ನು ಹೆಚ್ಚಿಸಿದ್ದರಿಂದಾಗಿ 11 ತಿಂಗಳಲ್ಲಿ ಒಂದು ಸಾವು ಕೂಡ ವರದಿಯಾಗಿಲ್ಲ’ ಎಂದು ಹೇಳಿಕೆಯು ವಿವರಿಸಿದೆ.

ರಾಷ್ಟ್ರೀಯ ರೈಲು ಸುರಕ್ಷಾ ಕೋಶವನ್ನು 2017–18ರಲ್ಲಿ ಆರಂಭಿಸಲಾಗಿತ್ತು. ಐದು ವರ್ಷಗಳಲ್ಲಿ
ಸುರಕ್ಷತೆಗಾಗಿ ವೆಚ್ಚ ಮಾಡಲು ₹1 ಲಕ್ಷ ಕೋಟಿಯ ನಿಧಿ ಮೀಸಲು ಇರಿಸಲಾಗಿತ್ತು. ವರ್ಷಕ್ಕೆ ₹20 ಸಾವಿರ ಕೋಟಿ ವೆಚ್ಚ ಮಾಡುವ ಗುರಿ ಹಾಕಿಕೊಳ್ಳಲಾಗಿತ್ತು. ಈ ನಿಧಿಯನ್ನು ಬಳಸಿಕೊಂಡು ಸುರಕ್ಷತೆಯ ದೃಷ್ಟಿಯಿಂದ ತುರ್ತಾಗಿ ಆಗಬೇಕಾದ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅದರ ಪರಿಣಾಮ ಈಗ ನಮ್ಮ ಕಣ್ಣ ಮುಂದೆ ಇದೆ ಎಂದು ಹೇಳಿಕೆಯು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.