ADVERTISEMENT

ರೈಲು ಅಪಘಾತಗಳಾದಾಗ ರಾಜೀನಾಮೆ ನೀಡಿದ ಸಚಿವರು ಯಾರ್‍ಯಾರು?

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 23:35 IST
Last Updated 4 ಜೂನ್ 2023, 23:35 IST
   

ನವದೆಹಲಿ‌: ಬಾಲಸೋರ್ ರೈಲು ದುರಂತದ ಹಿನ್ನಲೆಯಲ್ಲಿ ನೈತಿಕ ಹೊಣೆ ಹೊತ್ತು ರೈಲ್ವೆ ಸಚಿವ ಅಶ್ವಿನಿ‌ ವೈಷ್ಣವ್‌ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿವೆ. ಈ ಹಿಂದೆ ಇಂಥದ್ದೇ ಅಪಘಾತಗಳು ನಡೆದಾಗ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ನಿತೀಶ್ ಕುಮಾರ್ ಮಾತ್ರ ರಾಜೀನಾಮೆ ಸಲ್ಲಿಸಿದ್ದರು.

ಲಾಲ್‌ ಬಹದ್ದೂರ್‌ ಶಾಸ್ತ್ರಿ: 1956ರಲ್ಲಿ ಅಪಘಾತಗಳ ನಂತರ ಎರಡು ಬಾರಿ ರಾಜೀನಾಮೆ ಸಲ್ಲಿಸಿದ್ದರು. 112 ಜನರ ಸಾವಿಗೆ ಕಾರಣವಾದ ಮೆಹಬೂಬ್ ನಗರ ಅಪಘಾತದ ಬಳಿಕ 1956ರ ಆಗಸ್ಟ್‌ನಲ್ಲಿ ಅವರು ರಾಜೀನಾಮೆ ನೀಡಿದಾಗ, ಪ್ರಧಾನಿ ಜವಾಹರಲಾಲ್ ನೆಹರು ಅದನ್ನು ಸ್ವೀಕರಿಸಲು ನಿರಾಕರಿಸಿದರು. ಮೂರು ತಿಂಗಳ ನಂತರ ನವೆಂಬರ್‌ನಲ್ಲಿ ಅರಿಯಲೂರಿನಲ್ಲಿ ನಡೆದ ಮತ್ತೊಂದು ಅಪಘಾತದಲ್ಲಿ 144 ಜನರು ಮೃತಪಟ್ಟರು. ಆಗ, ಶಾಸ್ತ್ರಿ ಅವರು ‘ನಾನು ಹೊಂದಿರುವ ಹುದ್ದೆಯನ್ನು ಸದ್ದಿಲ್ಲದೆ ತೊರೆದರೆ ಒಳ್ಳೆಯದು’  ಎಂದು ರಾಜೀನಾಮೆಯಲ್ಲಿ ಬರೆದಿದ್ದರು. ನೆಹರು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡರು.

ನಿತೀಶ್ ಕುಮಾರ್: 1999ರಲ್ಲಿ ಗಸೈಲ್ (ಅಸ್ಸಾಂ) ಅಪಘಾತದಲ್ಲಿ 290 ಜನರು ಪ್ರಾಣ ಕಳೆದುಕೊಂಡ ನಂತರ  ರಾಜೀನಾಮೆ ನೀಡಿದರು. ಆದಾಗ್ಯೂ, ಎರಡು ವರ್ಷಗಳ ನಂತರ ಅವರು ಮತ್ತೆ ರೈಲ್ವೆ ಸಚಿವರಾದರು.

ADVERTISEMENT

ಮಮತಾ ಬ್ಯಾನರ್ಜಿ: 2000ರಲ್ಲಿ ಪಂಜಾಬ್‌ನಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ 43 ಮಂದಿ ಮೃತಪಟ್ಟ ಬಳಿಕ ರಾಜೀನಾಮೆ ನೀಡಲು ಮುಂದಾಗಿದ್ದರು. ಪ್ರಧಾನಿ ವಾಜಪೇಯಿ ರಾಜೀನಾಮೆ ಸ್ವೀಕರಿಸಲು ನಿರಾಕರಿಸಿದರು. ನಂತರ ಅವರು ಯುಪಿಎ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದರು. ಆದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಲು ರಾಜೀನಾಮೆ ನೀಡಿದರು.

ಸುರೇಶ್ ಪ್ರಭು: ಸರಣಿ ಅಪಘಾತಗಳ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದರು. ಆದರೆ, ಅದನ್ನು ತಿರಸ್ಕರಿಸಲಾಯಿತು. ಕಾನ್ಪುರದ ಬಳಿ ಪಟ್ನಾ ಇಂದೋರ್ ಎಕ್ಸ್‌ಪ್ರೆಸ್‌ ಹಳಿ ತಪ್ಪಿ 150 ಜನರು  ಮೃ‌ತಪಟ್ಟರು. ಅವರನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯಕ್ಕೆ ವರ್ಗಾಯಿಸಲಾಯಿತು.

ರಾಮ್ ವಿಲಾಸ್ ಪಾಸ್ವಾನ್: 1997ರಲ್ಲಿ ಹಿಮಸಾಗರ್ ಮತ್ತು ಕರ್ನಾಟಕ ಎಕ್ಸ್‌ಪ‍್ರೆಸ್‌ ರೈಲು ಡಿಕ್ಕಿ ಹೊಡೆದ ನಂತರ ರಾಜೀನಾಮೆ ನೀಡಲಿಲ್ಲ. ‘ಚಾಲಕ ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದರೆ ಅದು ರೈಲ್ವೆ ಸಚಿವರ ತಪ್ಪಲ್ಲ. ಕಾರು ಅಪಘಾತದ ನಂತರ ಮುಖ್ಯಮಂತ್ರಿಗಳು ರಾಜೀನಾಮೆ ನೀಡುತ್ತಾರೆಯೇ’ ಎಂದು ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.