ADVERTISEMENT

Train Fare Hike: ಪ್ರತಿ ಕಿ.ಮೀ ಎ.ಸಿ 2 ಪೈಸೆ, ನಾನ್‌ ಎ.ಸಿ 1 ಪೈಸೆ ಏರಿಕೆ

ಪಿಟಿಐ
Published 30 ಜೂನ್ 2025, 23:09 IST
Last Updated 30 ಜೂನ್ 2025, 23:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಜುಲೈ 1ರಿಂದಲೇ ಅನ್ವಯವಾಗುವಂತೆ ಮೇಲ್‌ ಹಾಗೂ ಎಕ್ಸ್‌ಪ‍್ರೆಸ್‌ ರೈಲುಗಳ ಹವಾನಿಯಂತ್ರಿತ (ಎಸಿ) ದರ್ಜೆಯ ಪ್ರಯಾಣದರವನ್ನು ಪ್ರತಿ ಕಿ.ಮೀಗೆ 2 ಪೈಸೆ, ಹವಾನಿಯಂತ್ರಣ ರಹಿತ (ನಾನ್‌ ಎ.ಸಿ) ದರ್ಜೆಯ ದರವನ್ನು 1 ಪೈಸೆ ಏರಿಕೆ ಮಾಡಿ ರೈಲ್ವೆ ಇಲಾಖೆಯು ಸೋಮವಾರ ಆದೇಶ ಹೊರಡಿಸಿದೆ. 

ಜೂನ್‌ 24ರಂದೇ ಪ್ರಯಾಣದರ ಏರಿಕೆ ಮಾಡುವ ಸುಳಿವನ್ನು ಇಲಾಖೆಯ ಅಧಿಕಾರಿಗಳು ನೀಡಿದ್ದರು. ಆದಾಗ್ಯೂ, ರೈಲು ಹಾಗೂ ದರ್ಜೆಗೆ ಅನುಗುಣವಾಗಿ ದರ ಏರಿಕೆಯ ಅಧಿಕೃತ ಅಧಿಸೂಚನೆಯನ್ನು ಸೋಮವಾರ ಪ್ರಕಟಿಸಿದೆ.

ನಿತ್ಯ ಪ್ರಯಾಣಿಸುವ ಪ್ರಯಾಣಿಕರನ್ನು ಗಮನದಲ್ಲಿರಿಸಿಕೊಂಡು, ಉಪನಗರ ರೈಲು (ಸಬರ್ಬನ್‌ ರೈಲು) ಮಾಸಿಕ ಸೀಸನ್‌ ಟಿಕೆಟ್‌ಗಳ ದರದಲ್ಲಿ ಬದಲಾವಣೆ ಮಾಡಿಲ್ಲ.

ADVERTISEMENT

500 ಕಿ.ಮೀವರೆಗಿನ ಸಾಮಾನ್ಯ ದ್ವಿತೀಯ ದರ್ಜೆಯ ಪ್ರಯಾಣ ದರದಲ್ಲಿಯೂ ಹಿಂದಿನ ದರವನ್ನು ಉಳಿಸಿಕೊಳ್ಳಲಾಗಿದೆ. ನಂತರದ ಪ್ರತಿ ಕಿ.ಮೀಗೆ ಅರ್ಧ ಪೈಸೆ ಏರಿಕೆ ಮಾಡಲಾಗಿದೆ. ಸಾಮಾನ್ಯ ಸ್ಲೀಪರ್‌ ವರ್ಗ, ಪ್ರಥಮ ದರ್ಜೆಯ ಪ್ರಯಾಣದರವನ್ನು ಪ್ರತಿ ಕಿ.ಮೀಗೆ ಅರ್ಧ ಪೈಸೆ ಏರಿಕೆ ಮಾಡಲಾಗಿದೆ.

‘ಪರಿಷ್ಕೃತ ದರವು ಪ್ರೀಮಿಯರ್‌ ಹಾಗೂ ವಿಶೇಷ ರೈಲುಗಳಿಗೆ ಅನ್ವಯವಾಗಲಿದೆ. ಅದರಂತೆ, ರಾಜಧಾನಿ, ಶತಾಬ್ದಿ, ತುರಂತೊ, ವಂದೇ ಭಾರತ್‌, ತೇಜಸ್‌, ಹಮ್‌ಸಫರ್‌, ಅಮೃತ್‌ ಭಾರತ್‌, ಮಹಮಾನಾ, ಗತಿಮಾನ್‌, ಅಂತ್ಯೋದಯ, ಜನಶತಾಬ್ದಿ, ಯುವ ಎಕ್ಸ್‌ಪ್ರೆಸ್‌, ಎ.ಸಿ. ವಿಸ್ಟಾಡೋಮ್‌ ಕೋಚ್‌, ಅನುಭೂತಿ ಕೋಚ್‌, ಸಬರ್ಬನ್‌ ಹೊರತುಪಡಿಸಿದ ಸಾಮಾನ್ಯ ರೈಲುಗಳಿಗೂ ಪರಿಷ್ಕೃತ ದರವು ಅನ್ವಯವಾಗಲಿದೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಜುಲೈ1ರಿಂದ ಬುಕ್ಕಿಂಗ್‌ ಮಾಡಿದ ಎಲ್ಲ ಟಿಕೆಟ್‌ಗಳಿಗೂ ಪರಿಷ್ಕೃತ ದರ ಅನ್ವಯವಾಗಲಿದೆ. ಈ ಹಿಂದೆ ಬುಕ್ಕಿಂಗ್ ಮಾಡಿದ ಟಿಕೆಟ್‌ಗಳು ಹಿಂದಿನ ದರವೇ ಮಾನ್ಯವಾಗಿರಲಿದೆ. ಪಿಆರ್‌ಎಸ್‌, ಯುಟಿಎಸ್‌ ಹಾಗೂ ಕೌಂಟರ್‌ಗಳ ವ್ಯವಸ್ಥೆಯನ್ನು ಪರಿಷ್ಕರಿಸಲಾಗಿದೆ’ ಎಂದು ತಿಳಿಸಿದೆ.

ಉಳಿದಂತೆ, ರಿಸರ್ವೇಷನ್‌ ಶುಲ್ಕ, ಸೂಪರ್‌ಫಾಸ್ಟ್‌ ಶುಲ್ಕ ಹಾಗೂ ಇತರೆ ಶುಲ್ಕಗಳಲ್ಲಿಯೂ ಯಾವುದೇ ಬದಲಾವಣೆ ಇರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.