ADVERTISEMENT

ಅಕ್ಟೋಬರ್‌ನಿಂದ ರೈಲಿನಲ್ಲಿ 4 ಲಕ್ಷ ಹೆಚ್ಚುವರಿ ‘ಬರ್ತ್‌’

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 18:32 IST
Last Updated 10 ಜುಲೈ 2019, 18:32 IST
ರೈಲ್ವೆ ಕೋಚ್‌
ರೈಲ್ವೆ ಕೋಚ್‌   

ನವದೆಹಲಿ: ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆಯು 4 ಲಕ್ಷ ಹೆಚ್ಚುವರಿ ‘ಬರ್ತ್’ ಸೌಲಭ್ಯ ಒದಗಿಸಲು ನಿರ್ಧರಿಸಿದೆ.

ಈ ಸೌಲಭ್ಯ ಬರುವ ಅಕ್ಟೋಬರ್‌ನಿಂದ ಜಾರಿಗೆ ಬರಲಿದ್ದು, ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವುದೇ ಇದಕ್ಕೆ ಕಾರಣ ಭಾರತೀಯ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

‘ಅಕ್ಟೋಬರ್‌ ವೇಳೆಗೆ ನೂತನ ತಂತ್ರಜ್ಞಾನ ಸಹಾಯದಿಂದ ಕಾರ್ಯನಿರ್ವಹಿಸುವಂತೆ 5 ಸಾವಿರ ಕೋಚ್‌ಗಳನ್ನು ಮಾರ್ಪಾಡು ಮಾಡಲಾಗುವುದು. ಈ ತಂತ್ರಜ್ಞಾನ ಪರಿಸರಸ್ನೇಹಿಯಾಗಿದ್ದು, ವಾಯು ಮತ್ತು ಶಬ್ದ ಮಾಲಿನ್ಯ ಇರುವುದಿಲ್ಲ. ಇಂಗಾಲ ಹೊರಸೂಸುವ ಪ್ರಮಾಣ ಪ್ರತಿ ರೈಲಿಗೆ ವರ್ಷಕ್ಕೆ 700 ಟನ್‌ನಷ್ಟು ಕಡಿಮೆ ಆಗುವುದು’ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಏನಿದು ತಂತ್ರಜ್ಞಾನ?: ಪ್ರಸ್ತುತ, ರೈಲುಗಳಿಗೆ ಡೀಸೆಲ್‌ ಜನರೇಟರ್‌ ಹೊಂದಿರುವ ಬೋಗಿಗಳನ್ನು ಜೋಡಿಸಲಾಗಿದೆ. ಇವುಗಳ ಸಹಾಯದಿಂದ ಎಲ್ಲ ಕೋಚ್‌ಗಳಿಗೆ ವಿದ್ಯುತ್‌ ಪೂರೈಕೆಯಾಗುತ್ತದೆ. ವಿದ್ಯುತ್‌ದೀಪ ಬೆಳಗಲು, ಫ್ಯಾನ್‌ ಹಾಗೂ ಎ.ಸಿ ಕಾರ್ಯ ನಿರ್ವಹಿಸಲು ಇದೇ ವಿದ್ಯುತ್‌ ಬಳಸಲಾಗುತ್ತದೆ.

ಈಗ ‘ಹೆಡ್‌ ಆನ್‌ ಜನರೇಷನ್‌’ (ಎಚ್‌ಒಜಿ) ಎಂಬ ನೂತನ ತಂತ್ರಜ್ಞಾನವನ್ನು ರೈಲ್ವೆ ಅಳವಡಿಸಿಕೊಳ್ಳುತ್ತಿದೆ. ಈ ವ್ಯವಸ್ಥೆಯಲ್ಲಿ ಕೋಚ್‌ಗಳ ಮೇಲಿಂದ ಹಾಯ್ದುಹೋಗುವ ತಂತಿಗಳ ಮೂಲಕ ವಿದ್ಯುತ್‌ ಪೂರೈಕೆಯಾಗುತ್ತದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.