ADVERTISEMENT

ರೈಲು ಸಂಚಾರ ಆರಂಭಕ್ಕೆ ಸಿದ್ಧತೆ ನಡೆಸಿದ ಇಲಾಖೆ

ಲಾಕ್‌ಡೌನ್‌ ಅವಧಿ ಬಳಿಕ ತೀರ್ಮಾನ: ವಲಯವಾರು ಹಂತ, ಹಂತವಾಗಿ ಆರಂಭಿಸಲು ಚಿಂತನೆ

ಪಿಟಿಐ
Published 5 ಏಪ್ರಿಲ್ 2020, 20:38 IST
Last Updated 5 ಏಪ್ರಿಲ್ 2020, 20:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಲಾಕ್‌ಡೌನ್ ಅವಧಿ (ಏ. 14) ಮುಗಿದ ಬಳಿಕ ರೈಲು ಸಂಚಾರಕ್ಕೆ ಮರುಚಾಲನೆ ನೀಡಲು ರೈಲ್ವೆ ಇಲಾಖೆ ಸಿದ್ಧತೆ ನಡೆಸಿದ್ದು, ಮುಂಜಾಗ್ರತೆ ಕ್ರಮಗಳಿಗೂ ಒತ್ತು ನೀಡಲಿದೆ.

ರೈಲು ಪ್ರಯಾಣಿಕರು ಮುಖಗವಸು ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಪ್ರಯಾಣ ಆರಂಭಿಸುವ ಮೊದಲು ‘ಆರೋಗ್ಯ ಸೇತು’ ಆ್ಯಪ್‌ ಮೂಲಕ ತಮ್ಮ ಆರೋಗ್ಯ ಸ್ಥಿತಿಯನ್ನು ಅರಿಯುವುದು ಇಲಾಖೆ ಕೈಗೊಳ್ಳಲಿರುವ ಮುಂಜಾಗ್ರತೆ ಕ್ರಮಗಳಲ್ಲಿ ಸೇರಿವೆ.

‘ಇದು ಸೂಕ್ಷ್ಮ ಸಮಯ. ಆದಾಯದ ದೃಷ್ಟಿಯಿಂದ ಇಲಾಖೆ ನೋಡುತ್ತಿಲ್ಲ. ಪ್ರಯಾಣಿಕರ ಸುರಕ್ಷತೆ, ಸೋಂಕು ಹರಡದಂತೆ ಎಚ್ಚರವಹಿಸುವುದೇ ನಮ್ಮ ಆದ್ಯತೆ. ಸದ್ಯ, ಸೇವೆ ಪುನರಾರಂಭ ಕುರಿತು ಯಾವುದೇ ತೀರ್ಮಾನಕ್ಕೆ ಬಂದಿಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಲಾಕ್‌ಡೌನ್‌ ಅವಧಿ ಮುಗಿದ ನಂತರ ಸರ್ಕಾರದ ಅನುಮತಿ ಆಧರಿಸಿ ಹಂತ, ಹಂತವಾಗಿ ಪ್ರಯಾಣಿಕ ರೈಲು ಸೇವೆಗೆ ಚಾಲನೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೇವೆಯನ್ನು ಮರು ಆರಂಭಿಸುವ ರೂಪುರೇಷೆ ಕುರಿತಂತೆ ಬಹುತೇಕ ಮುಂದಿನ ವಾರ ನಿರ್ಧಾರ ಕೈಗೊಳ್ಳುವ ಸಂಭವವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಲಯ ಮಟ್ಟದಲ್ಲಿ ಆದ್ಯತೆ ಮೇರೆಗೆ ಆರಂಭಿಸಬೇಕಾದ ರೈಲು ಮಾರ್ಗಗಳನ್ನು ಅಧಿಕಾರಿಗಳು ಗುರುತಿಸುತ್ತಿದ್ದಾರೆ. ವಲಸಿಗರ ಸಂಚಾರಕ್ಕೆ ಅನುವಾಗುವಂತೆ ಪ್ರಥಮ ಆದ್ಯತೆ ನೀಡಬಹುದು ಎಂದು ಅವರು ಸುಳಿವು ನೀಡಿದರು.

ಪ್ರತಿ ರೈಲು ಸೇವೆ ಚಾಲನೆಗೆ ರೈಲ್ವೆ ಮಂಡಳಿ ಸಮ್ಮತಿ ಅಗತ್ಯ. ಸೇವೆ ಆರಂಭಿಸುವುದಕ್ಕೆ ಸಂಬಂಧಿಸಿದ ವೇಳಾಪಟ್ಟಿಯನ್ನು ಆಯಾ ವಲಯಗಳೇ ನೀಡಬೇಕು ತಿಳಿಸಿದ್ದಾರೆ.

ಸುರಕ್ಷತೆಗೆ ‘ಆರೋಗ್ಯ ಆ್ಯಪ್‌’ ಬಳಕೆ?

ರೈಲು ಸೇವೆ ಪುನರಾರಂಭದ ಬಳಿಕ ಪ್ರಯಾಣಿಕರ ಹಿತದೃಷ್ಟಿಯಿಂದ ಅನುಸರಿಸಬೇಕಾದ ಶಿಷ್ಟಾಚಾರ ಪಾಲನೆಗೂ ಆದ್ಯತೆ ನೀಡಲಾಗುತ್ತದೆ.

ಪ್ರಯಾಣಿಕರ ಆರೋಗ್ಯ ಸ್ಥಿತಿ ತಿಳಿಯಲು ಥರ್ಮಲ್‌ ಸ್ಕ್ರೀನಿಂಗ್ ಹಾಗೂ ಇತರೆ ಪರ್ಯಾಯ ಕ್ರಮಗಳ ಜಾರಿ ಕುರಿತು ಚಿಂತನೆ ನಡೆದಿದೆ.

ಆರೋಗ್ಯ ಸುಸ್ಥಿತಿಯಲ್ಲಿ ಇರುವವರ ಸಂಚಾರಕ್ಕಷ್ಟೇ ಅನುವು ಮಾಡಿಕೊಡಲು ಆರೋಗ್ಯ ಸೇತು ಆ್ಯಪ್‌ ಬಳಕೆಯನ್ನು ಪರಿಶೀಲಿಸಲಾಗುತ್ತಿದೆ. ಉದ್ದೇಶಿತ ಆ್ಯಪ್ ಬಳಸಿ ಪ್ರಯಾಣಿಕರ ಆರೋಗ್ಯದ ಸ್ಥಿತಿ ತಿಳಿಯಬಹುದಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಸೇವೆ ಪುನರಾರಂಭವಾದಾಗ ಜನದಟ್ಟಣೆ ಆಗುವುದು ನಿಶ್ಚಿತ. ಹೀಗಾಗಿ, ಮುಂಜಾಗ್ರತಾ ಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ವಲಯ ಕಚೇರಿಗಳಿಗೆ ಇಲಾಖೆಯು ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.