ADVERTISEMENT

ಪ್ಯಾಸೆಂಜರ್ ರೈಲನ್ನು ಎಕ್ಸ್‌ಪ್ರೆಸ್ ರೈಲಾಗಿ ಪರಿವರ್ತಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 3:26 IST
Last Updated 22 ಜೂನ್ 2020, 3:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: 200 ಕಿ.ಮೀ ಗಿಂತ ದೂರ ಸಂಚರಿಸುವ 502 ಪ್ಯಾಸೆಂಜರ್‌ ರೈಲುಗಳನ್ನು ಎಕ್ಸ್‌ಪ್ರೆಸ್‌ ರೈಲುಗಳನ್ನಾಗಿ ಪರಿವರ್ತಿಸಿ, ಅವುಗಳ ವೇಗ ಹೆಚ್ಚಿಸುವುದರ ಜತೆಗೆ ನಿಲುಗಡೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ರೈಲ್ವೆ ಮಂಡಳಿ ನಿರ್ಧರಿಸಿದೆ.

ವೇಗ ಹೆಚ್ಚಿಸಲು ಹಾಗೂ ನಿಲುಗಡೆ ಕಡಿಮೆ ಮಾಡುವ ರೈಲುಗಳ ಪಟ್ಟಿಯನ್ನು ಕಳುಹಿಸಿಕೊಡಬೇಕು. ಈ ಕ್ರಮದ ಬಗ್ಗೆ ಶುಕ್ರವಾರ ಸಂಜೆ 4 ಗಂಟೆಯೊಳಗೆ ಸಲಹೆ ನೀಡಬೇಕು ಎಂದು ರೈಲ್ವೆ ವಲಯಗಳಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ಮಂಡಳಿ ತಿಳಿಸಿದೆ.

ಪ್ಯಾಸೆಂಜರ್‌ ರೈಲುಗಳನ್ನೇ ಅವಲಂಬಿಸಿರುವ, ನಿತ್ಯ ಸಂಚರಿಸುವ ಬಡ ಹಾಗೂ ಕೆಳ ಮಧ್ಯಮ ವರ್ಗದ ಪ್ರಯಾಣಿಕರಿಗೆರೈಲ್ವೆ ಮಂಡಳಿಯ ಈ ನಿರ್ಧಾರ ಭಾರಿ ಪರಿಣಾಮ ಬೀರಲಿದೆ ಎಂಬ ಆತಂಕ ಸೃಷ್ಟಿಯಾಗಿದೆ.

ADVERTISEMENT

ಈ ಮೊದಲು ರೈಲ್ವೆ ಮಂಡಳಿಯು, ನಷ್ಟದಲ್ಲಿ ಸಂಚರಿಸುವ ಮತ್ತು ಪ್ರಯಾಣಿಕರ ಸಂಖ್ಯೆ ಕಡಿಮೆಯಿರುವ ರೈಲುಗಳನ್ನು ರದ್ದುಪಡಿಸುವ ‘ಜಿರೋ ಟೈಮ್‌ಟೇಬಲ್‌’ ಅನ್ನು ಜುಲೈ 1 ರಿಂದ ಜಾರಿಗೆ ತರುವಂತೆ ವಲಯಗಳಿಗೆ ಸಲಹೆ ನೀಡಿತ್ತು.

‘ಕಡಿಮೆ ಸಂಖ್ಯೆಯ ಪ್ರಯಾಣಿಕರು ಸಂಚರಿಸುವ ಮತ್ತು ಲಾಭದಾಯಕವಲ್ಲದ ನಿಲುಗಡೆ ಕಡಿಮೆ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ಯಾಸೆಂಜರ್‌ ರೈಲುಗಳ ವೇಗ ಹೆಚ್ಚಿಸಿ, ಎಕ್ಸ್‌ಪ್ರೆಸ್‌ ರೈಲುಗಳಾಗಿ ಪರಿವರ್ತಿಸಿದರೂ, ಇತರೆ ಸಾರಿಗೆ ಕ್ಷೇತ್ರಕ್ಕೆ ಹೋಲಿಸಿದರೆ, ರೈಲಿನ ಪ್ರಯಾಣ ದರ ಕಡಿಮೆ ಇರಲಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರೈಲುಗಳ ಸೇವೆ ಬಂದ್‌ ಮಾಡಲಾಗಿತ್ತು.ಮಾರ್ಚ್‌ 23 ರಿಂದ ರೈಲ್ವೆ ಇಲಾಖೆ ಭಾರಿ ನಷ್ಟ ಅನುಭವಿಸುತ್ತಿದೆ. ಅಗತ್ಯ ಸರಕುಗಳ ಪೂರೈಕೆಗೆ ಸರಕು ಸಾಗಣೆ ರೈಲುಗಳು ಮಾತ್ರ ಕಾರ್ಯನಿರ್ವಹಿಸಿವೆ. ಪ್ರಸ್ತುತ 100 ಜೋಡಿ ಸಾಮಾನ್ಯ ಮತ್ತು 15 ಜೋಡಿ ವಿಶೇಷ ರಾಜಧಾನಿ ರೈಲುಗಳು ಮಾತ್ರ ಸಂಚರಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.