ನವದೆಹಲಿ: ವಲಸೆ ಕಾರ್ಮಿಕರಿಗೆ ಅನುಕೂಲ ಕಲ್ಪಿಸಲು ಭಾರತೀಯ ರೈಲ್ವೆಯು ಮುಂದಿನ 2 ತಿಂಗಳಲ್ಲಿ ದೇಶದ 25 ಪ್ರಮುಖ ಮಾರ್ಗಗಳಲ್ಲಿ ಹವಾನಿಯಂತ್ರಿತವಲ್ಲದ ಕೋಚ್‌ಗಳಿರುವ ಒಟ್ಟು 2,000 ಹೊಸ ರೈಲುಗಳನ್ನು ಪ್ರಾರಂಭಿಸಲು ಯೋಜಿಸಿದೆ.
ರೈಲು ಪ್ರಯಾಣಕ್ಕಾಗಿ ದೀರ್ಘ ಕಾಲದವರೆಗೆ ಕಾಯುವಿಕೆ ಮತ್ತು ಹೆಚ್ಚು ಜನ ಪ್ರಯಾಣಿಸುವ ರೈಲು ಮಾರ್ಗಗಳಲ್ಲಿ ತೀವ್ರ ದಟ್ಟಣೆಯ ಸಮಸ್ಯೆಯನ್ನು ಬಗೆಹರಿಸಲು ಈ ನೂತನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಒಡಿಶಾದಂತಹ ರಾಜ್ಯಗಳಿಂದ ಭಾರಿ ಸಂಖ್ಯೆಯ ವಲಸೆ ಕಾರ್ಮಿಕರು, ಗುಜರಾತ್, ದೆಹಲಿ, ಪಂಜಾಬ್, ಕರ್ನಾಟಕ, ಮಹಾರಾಷ್ಟ್ರ, ಕೇರಳ ಮತ್ತು ಆಂಧ್ರ ಪ್ರದೇಶಗಳಂತಹ ರಾಜ್ಯಗಳಿಗೆ ಬರುತ್ತಾರೆ. ಈ ಮಾರ್ಗದ ರೈಲುಗಳು ಆಯಾ ರಾಜ್ಯಗಳ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತವೆ.
ದನಪುರ (ಬಿಹಾರ)– ಬೆಂಗಳೂರು, ಚೆನ್ನರಾಯನಪಳ್ಳಿ (ಆಂಧ್ರಪ್ರದೇಶ)– ಸಂತ್ರಗಾಚಿ (ಪಶ್ಚಿಮ ಬಂಗಾಳ), ದೆಹಲಿ– ಬರೌನಿ (ಬಿಹಾರ), ದೆಹಲಿ– ಪಟನಾ, ದರ್ಭಾಂಗ– ದೆಹಲಿ, ಗಯಾ –ದೆಹಲಿ, ಗೋರಕ್‌ಪುರ (ಉತ್ತರ ಪ್ರದೇಶ)– ದಾದರ್, ಬಲಿಯಾ– ದಾದರ್ ಮತ್ತು ಬಾಂದ್ರಾ ಅಜ್ಮೀರ್ ಸೇರಿದಂತೆ ಅನೇಕ ಪ್ರಮುಖ ನಗರಗಳ ನಡುವಿನ ರೈಲು ಮಾರ್ಗಗಳು ಇವಾಗಿವೆ. ಈ ರೈಲುಗಳು ಹೆಚ್ಚಾಗಿ ನಾನ್–ಎ.ಸಿ ಸ್ಲೀಪರ್ ಕೋಚ್, ಜನರಲ್ ಕೋಚ್ ಮತ್ತು ಕೆಲ ರೈಲುಗಳು ಎ.ಸಿ ಕೋಚ್‌ಗಳನ್ನು ಹೊಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.