ADVERTISEMENT

ಮದುವೆ ವಯಸ್ಸು ಏರಿಕೆ: ಹೆಣ್ಮಕ್ಕಳ ಮುಂದಿನ ಶಿಕ್ಷಣವನ್ನು ಸಾಧ್ಯವಾಗಿಸಿದೆ- ಮೋದಿ

ಐಎಎನ್ಎಸ್
Published 21 ಡಿಸೆಂಬರ್ 2021, 11:33 IST
Last Updated 21 ಡಿಸೆಂಬರ್ 2021, 11:33 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಪ್ರಯಾಗ್‌ರಾಜ್: ಹೆಣ್ಣು ಮಕ್ಕಳು ಮುಂದೆ ಓದಬೇಕು ಎನ್ನುವ ಕಾರಣಕ್ಕೆ ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು 21 ವರ್ಷಕ್ಕೆ ಏರಿಸಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದರು.

ಉತ್ತರ ಪ್ರದೇಶದ 75 ಜಿಲ್ಲೆಗಳ ಸುಮಾರು 2.75 ಲಕ್ಷ ಮಹಿಳೆಯರಿದ್ದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, 'ಈ ನಿರ್ಧಾರವನ್ನು ವಿರೋಧಿಸುತ್ತಿರುವವರು ಮತ್ತು ಹೆಣ್ಣು ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸವನ್ನು ತಡೆಯುವ ಜನರು ಯಾರೆಂದು ಎಲ್ಲರಿಗೂ ತಿಳಿದಿದೆ' ಎಂದರು.

ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬರುವ ಮುನ್ನ ರಾಜ್ಯದಲ್ಲಿ 'ಮಾಫಿಯಾ ರಾಜ್' ಮತ್ತು 'ಗೂಂಡಾ ರಾಜ್' ಇತ್ತು. 'ಇದರಿಂದಾಗಿ ಮಹಿಳೆಯರು ತೊಂದರೆಗೊಳಗಾದರು ಮತ್ತು ಮುಕ್ತವಾಗಿ ಓಡಾಡಲು ಕೂಡ ಸಾಧ್ಯವಾಗಲಿಲ್ಲ. ಯೋಗಿ ಆದಿತ್ಯನಾಥ್ ಅಂತಹ ಕೆಟ್ಟ ಅಂಶಗಳಿಗೆ ಕಡಿವಾಣ ಹಾಕಿದರು ಮತ್ತು ಇಂದು ಮಹಿಳೆಯರು ಮುಕ್ತವಾಗಿ ಹಾಗೂ ಸುರಕ್ಷಿತವಾಗಿ ಓಡಾಡುತ್ತಿದ್ದಾರೆ. ಉತ್ತರ ಪ್ರದೇಶ ಇನ್ನು ಮುಂದೆಯೂ ಹೆಚ್ಚಿನ ಸುರಕ್ಷತೆ ಮತ್ತು ಭದ್ರತೆಯನ್ನು ಒಳಗೊಳ್ಳುವ ಸಾಧ್ಯತೆಯನ್ನು ಹೊಂದಿದೆ. ಇನ್ನು ಮುಂದೆ ಇದನ್ನು ತಪ್ಪಿಸಲು ಸಾಧ್ಯವಿಲ್ಲ' ಎಂದು ಹೇಳಿದರು.

ADVERTISEMENT

'ನಾನು ಈ ಹಿಂದೆ ಬ್ಯಾಂಕ್ ಸಖಿ, ಸ್ವಸಹಾಯ ಗುಂಪುಗಳು ಮತ್ತು ಕನ್ಯಾ ಸುಮಂಗಲಾ ಯೋಜನೆಯ ಫಲಾನುಭವಿಗಳೊಂದಿಗೆ ಮಾತನಾಡುತ್ತಿದ್ದೆ. ಆಗ ಅವರಲ್ಲಿ ಅಪಾರ ವಿಶ್ವಾಸವನ್ನು ಕಂಡಿದ್ದೇನೆ. ಈಗ ಎಲ್ಲರ ಮುಂದೆಯೇ ಅದು ಕಾಣಿಸುತ್ತಿದೆ. ಮತ್ತೆ ಸಾಬೀತುಪಡಿಸುವ ಅಗತ್ಯವಿಲ್ಲ. ಅವರ ಜೀವನದಲ್ಲಾಗಿರುವ ಬದಲಾವಣೆ ಕಾಣಿಸುತ್ತಿದೆ ಮತ್ತು ಇಡೀ ದೇಶವೇ ಅದನ್ನು ನೋಡಬಹುದು' ಎಂದು ಅವರು ಹೇಳಿದರು.

'ಬ್ಯಾಂಕ್ ಸಖಿ ಯೋಜನೆಯು ಮಹಿಳೆಯರ ಉದ್ಯೋಗಾವಕಾಶಗಳನ್ನು ಹೆಚ್ಚಿಸಿದೆ ಮತ್ತು ಮನೆಬಾಗಿಲಿಗೆ ಬ್ಯಾಂಕ್ ಸೇವೆಯನ್ನು ತಂದಿದೆ. ಬ್ಯಾಂಕ್ ಸಖಿ ಮೂಲಕ ₹ 75,000 ಕೋಟಿ ವಹಿವಾಟು ನಡೆದಿದೆ. ಅಭಿವೃದ್ಧಿ ಮತ್ತು ಮಹಿಳೆಯರ ಸಬಲೀಕರಣದ ಹರಿವು ನಿಲ್ಲುವುದಿಲ್ಲ ಮತ್ತು ಇದು ಉತ್ತರ ಪ್ರದೇಶದಲ್ಲಿ ಕಾಣಿಸುತ್ತದೆ. ಸ್ವಸಹಾಯ ಸಂಘಗಳು ಮಹಿಳೆಯರನ್ನು 'ಆತ್ಮನಿರ್ಭರ್' ಆಗಿಸಿವೆ. ಮಹಿಳೆಯರಿಗೆ ನೆರವಾಗಲು ತಮ್ಮ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.