
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ ಕುಮಾರ್ ಗೋಯಲ್ ಅವರಿಗೆ ಪ್ರಮಾಣವಚನ ಬೋಧಿಸಿದರು
–ಪಿಟಿಐ ಚಿತ್ರ
ನವದೆಹಲಿ: ಮಾಜಿ ಐಎಎಸ್ ಅಧಿಕಾರಿ ರಾಜ್ ಕುಮಾರ್ ಗೋಯಲ್ ಅವರು ಕೇಂದ್ರ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರಾಗಿ (ಸಿಐಸಿ) ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.
ಅವರೊಂದಿಗೆ ಇತರ ಎಂಟು ಮಂದಿಯನ್ನು ಮಾಹಿತಿ ಆಯುಕ್ತರನ್ನಾಗಿ ನೇಮಿಸಲಾಗಿದೆ. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗೋಯಲ್ ಮತ್ತು ಇತರ ಆಯುಕ್ತರಿಗೆ ಪ್ರಮಾಣ ವಚನ ಬೋಧಿಸಿದರು.
ಹೀರಾಲಾಲ್ ಸಮಾರಿಯಾ ಅವರ ಅಧಿಕಾರಾವಧಿ ಸೆಪ್ಟೆಂಬರ್ 13ಕ್ಕೆ ಪೂರ್ಣಗೊಂಡ ಬಳಿಕ ಸಿಐಸಿ ಹುದ್ದೆ ಖಾಲಿಯಿತ್ತು.
ರೈಲ್ವೆ ಮಂಡಳಿಯ ಮಾಜಿ ಮುಖ್ಯಸ್ಥೆ ಜಯ ವರ್ಮಾ ಸಿನ್ಹಾ, ಮಾಜಿ ಐಪಿಎಸ್ ಅಧಿಕಾರಿ ಸ್ವಾಗತ್ ದಾಸ್, ಸಿಎಸ್‌ಎಸ್ ಅಧಿಕಾರಿ ಸಂಜೀವ್ ಕುಮಾರ್ ಜಿಂದಾಲ್, ಮಾಜಿ ಐಎಎಸ್ ಅಧಿಕಾರಿ ಸುರೇಂದ್ರ ಸಿಂಗ್ ಮೀನಾ ಮತ್ತು ಮಾಜಿ ಭಾರತೀಯ ಅರಣ್ಯ ಸೇವೆ ಅಧಿಕಾರಿ ಖುಷ್ವಂತ್ ಸಿಂಗ್ ಸೇಥಿ ಮತ್ತು ಹಿರಿಯ ಪತ್ರಕರ್ತರಾದ ಪಿ.ಆರ್. ರಮೇಶ್ ಹಾಗೂ ಅಶುತೋಷ್ ಚತುರ್ವೇದಿ, ಮಾಜಿ ಭಾರತೀಯ ಕಾನೂನು ಸೇವಾ ಅಧಿಕಾರಿ ಸುಧಾ ರಾಣಿ ರೇಲಂಗಿ ಅವರನ್ನು ಮಾಹಿತಿ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್, ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಸೇರಿದಂತೆ ಇತರರು ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೂವರ ಸಮಿತಿಯು ಕಳೆದ ವಾರ ಇವರ ಹೆಸರಗಳನ್ನು ನೇಮಕಾತಿಗೆ ಶಿಫಾರಸ್ಸು ಮಾಡಿತ್ತು.
ಆಯೋಗವು ಸಿಐಸಿ ನೇತೃತ್ವದಲ್ಲಿದ್ದು, ಗರಿಷ್ಠ 10 ಮಂದಿ ಮಾಹಿತಿ ಆಯುಕ್ತರನ್ನು ಹೊಂದಿರಬಹುದು. ಈ ಹೊಸ ನೇಮಕಾತಿಯ ಮೂಲಕ ಮಾಹಿತಿ ಆಯೋಗವು ಒಂಬತ್ತು ವರ್ಷಗಳ ಬಳಿಕ ಸಂಪೂರ್ಣ ಬಲವನ್ನು ಹೊಂದಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.