ಅಲ್ವರ್: ರಾಜಸ್ಥಾನದ ಅಲ್ವರ್‌ನ ಗುಜ್ಜಾರ್ ಸಮುದಾಯವು ಈಗ ಒಡೆದ ಮನೆಯಂತಾಗಿದೆ. ಸಮುದಾಯದ ಪ್ರಭಾವಿ ನಾಯಕ ಸಚಿನ್ ಪೈಲಟ್ ಅವರು ಮುಖ್ಯಮಂತ್ರಿ ಆಗುವುದನ್ನು ರಾಜ್ಯ ಕಾಂಗ್ರೆಸ್ ಈ ಹಿಂದೆ ತಡೆದಿದ್ದೇ ಇದಕ್ಕೆ ಕಾರಣ.
2018ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಸರ್ಕಾರ ರಚಿಸುವ ವೇಳೆ ಸಚಿನ್ ಪೈಲಟ್ ಅವರನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಲು ಗುಜ್ಜಾರ್ ಸಮುದಾಯ ಬಯಸಿತ್ತು. ಆದರೆ, ಅಶೋಕ್ ಗೆಹಲೋತ್ ಅವರನ್ನು ಪಕ್ಷವು ಮುಖ್ಯಮಂತ್ರಿ ಸ್ಥಾನಕ್ಕೇರಿಸಿತು. ಇದನ್ನು ಸಮುದಾಯಕ್ಕೆ ಬಗೆದ ದ್ರೋಹ ಎಂದು ಪರಿಗಣಿಸಿದ ಹಲವರು ತಮ್ಮ ನಿಷ್ಠೆಯನ್ನು ಬಿಜೆಪಿಯತ್ತ ತಿರುಗಿಸಿದರು. ಪೈಲಟ್ ಅವರನ್ನು ಮುಖ್ಯಮಂತ್ರಿಯನ್ನಾಗಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ನಂಬಿದ ಇನ್ನೂ ಹಲವರು ಕಾಂಗ್ರೆಸ್‌ಗೇ ತಮ್ಮ ನಿಷ್ಠೆ ಮುಂದುವರೆಸಿದರು.
ರಾಜ್ಯದ 200 ವಿಧಾನಸಭಾ ಕ್ಷೇತ್ರಗಳ ಪೈಕಿ 35ರಲ್ಲಿ ಗುಜ್ಜಾರ್ ಸಮುದಾಯವು ಪ್ರಭಾವ ಹೊಂದಿದೆ. ಅಲ್ವರ್ ಜಿಲ್ಲೆಯಲ್ಲಿ ಈ ಸಮುದಾಯದ ಜನಸಂಖ್ಯೆ 1.5 ಲಕ್ಷಕ್ಕಿಂತಲೂ ಹೆಚ್ಚಿದೆ.
‘ಸಚಿನ್ ಪೈಲಟ್ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂಬ ನಿರೀಕ್ಷೆಯಲ್ಲಿ ಗುಜ್ಜಾರ್ ಸಮುದಾಯ ಕಾಂಗ್ರೆಸ್‌ಗೆ ಮತ ನೀಡಿತ್ತು. ಈ ಬಾರಿ ಕಾಂಗ್ರೆಸ್ ಗೆದ್ದರೆ ಪೈಲಟ್ ಅವರನ್ನೇ ಮುಖ್ಯಮಂತ್ರಿ ಮಾಡುವಂತೆ ನಾವು ಆಗ್ರಹಿಸುತ್ತೇವೆ’ ಎಂದು ಸ್ಥಳೀಯರಾದ ಅಮರ್ ಸಿಂಗ್ ಗುಜ್ಜಾರ್ ಹೇಳುತ್ತಾರೆ. ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಗಮನದಲ್ಲಿರಿಸಿಕೊಂಡು ಸಮುದಾಯವು ಈ ಬಾರಿಯೂ ಕಾಂಗ್ರೆಸ್‌ಗೇ ಮತ ನೀಡಲಿದೆ ಎನ್ನುತ್ತಾರೆ.
‘ಪೈಲಟ್ ಅವರನ್ನು ಮುಖ್ಯಮಂತ್ರಿ ಮಾಡದೇ ಕಾಂಗ್ರೆಸ್ ದ್ರೋಹ ಬಗೆದಿದೆ. ಹಾಗಾಗಿ ಸಮುದಾಯದ ಮತಗಳು ಗಣನೀಯ ಸಂಖ್ಯೆಯಲ್ಲಿ ಬಿಜೆಪಿ ಕಡೆಗೆ ಹೋಗಲಿವೆ’ ಎಂದು ಮತ್ತೊಬ್ಬ ಸ್ಥಳೀಯ ನಿವಾಸಿ ಸಂಜತ್ ಚೌಡಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಸಚಿನ್ ಪೈಲಟ್ ವಿಚಾರದಲ್ಲಿ ಗುಜ್ಜಾರ್ ಸಮುದಾಯಕ್ಕೆ ಕಾಂಗ್ರೆಸ್ ಮೋಸ ಮಾಡಿರುವ ಕಾರಣ ಆ ಸಮುದಾಯವು ಈ ಬಾರಿ ಬಿಜೆಪಿಯನ್ನು ಬೆಂಬಲಿಸಲಿದೆ ಎಂದು ಪಕ್ಷದ ಸಂಸದ ಕಿರೋಡಿ ಲಾಲ್ ಮೀನಾ ಅವರು ಈಚೆಗಷ್ಟೇ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.