ADVERTISEMENT

ಫಡಣವೀಸ್‌ ಭೇಟಿಯಾದ ರಾಜ್‌ ಠಾಕ್ರೆ: ‘ಮಹಾ’ ರಾಜಕೀಯದಲ್ಲಿ ಚರ್ಚೆ

‘ಮಹಾ’ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾದ ಎಂಎನ್‌ಎಸ್‌ ನಾಯಕನ ನಡೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 15:29 IST
Last Updated 21 ಆಗಸ್ಟ್ 2025, 15:29 IST
–
   

ಮುಂಬೈ: ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಜತೆ ಚುನಾವಣಾ ಮೈತ್ರಿ ಕುರಿತಂತೆ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲಿಯೇ, ಎಂಎನ್‌ಎಸ್ ಮುಖ್ಯಸ್ಥ ರಾಜ್‌ ಠಾಕ್ರೆ ಅವರು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರನ್ನು ಭೇಟಿ ಮಾಡಿದ್ದಾರೆ. 

ರಾಜ್‌ ಠಾಕ್ರೆ ಅವರ ಈ ಅಚ್ಚರಿಯ ನಡೆ ಮಹಾರಾಷ್ಟ್ರ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಭೇಟಿ ಕುರಿತಂತೆ ಫಡಣವೀಸ್‌ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರಾಜ್‌ ಅವರು ತಮ್ಮ ಆಪ್ತ ಹಾಗೂ ಮಾಜಿ ಸಚಿವ ಬಾಳಾ ನಂದಗಾಂವಕರ್ ಅವರೊಂದಿಗೆ ಮಲಬಾರ್‌ ಹಿಲ್‌ನಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ವರ್ಷಾ’ಕ್ಕೆ ತೆರಳಿ, ಫಡಣವೀಸ್‌ ಅವರೊಂದಿಗೆ 45 ನಿಮಿಷ ಮಾತುಕತೆ ನಡೆಸಿದ್ದಾರೆ.

ADVERTISEMENT

ಮರಾಠಿ ಭಾಷೆಗೆ ಪ್ರಾಧಾನ್ಯ ನೀಡುವ ವಿಚಾರ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಕಾರಣದಿಂದ ರಾಜ್‌ ಮತ್ತು ಉದ್ಧವ್‌ ನಡುವೆ ಚುನಾವಣಾ ಮೈತ್ರಿ ಆಗಿಯೇಬಿಡುತ್ತದೆ ಎಂದು ಹೇಳಲಾಗುತ್ತಿತ್ತು. ಈಗ, ರಾಜ್‌ ಅವರು ಫಡಣವೀಸ್‌ ಅವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

‘ಸಮಸ್ಯೆಗಳ ಕುರಿತು ಚರ್ಚೆ’: ಮುಖ್ಯಮಂತ್ರಿ ಫಡಣವೀಸ್‌ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್‌ ಠಾಕ್ರೆ, ‘ನಗರ ಯೋಜನೆ, ಮುಂಬೈನ ಸಂಚಾರ ದಟ್ಟಣೆ ಹಾಗೂ ರಸ್ತೆಗಳ ದುಃಸ್ಥಿತಿ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸಿದೆ’ ಎಂದು ಹೇಳಿದರು.

‘ನಗರ ಯೋಜನೆ ನನ್ನ ಪಾಲಿಗೆ ಮಹತ್ವದ ವಿಷಯ. ಮುಂಬೈ, ಪುಣೆ, ಠಾಣೆ ಸೇರಿ ಯಾವುದೇ ನಗರ ತೆಗೆದುಕೊಂಡರೂ ವ್ಯವಸ್ಥಿತವಾದ ಯೋಜನೆಯದ್ದೇ ಸಮಸ್ಯೆ. ಸಂಚಾರ ವಿಚಾರದಲ್ಲಿ ಶಿಸ್ತು ಇಲ್ಲ. ಇದರಿಂದ ಜನರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ’ ಎಂದರು.

‘ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಷೇಧಿಸಿರುವುದನ್ನು ಖಂಡಿಸಿ ಜೈನ ಸಮುದಾಯ ಪ್ರತಿಭಟಿಸಿತು. ‘ಮಹಾದೇವಿ/ಮಾಧುರಿ’ ಆನೆಯನ್ನು ಕೊಲ್ಹಾಪುರಕ್ಕೆ ಮರಳಿ ತರುವಂತೆ ಆಗ್ರಹಿಸಿ ಬೃಹತ್‌ ಪ್ರತಿಭಟನೆ ನಡೆಯಿತು’ ಎಂದರು.

‘ಅದಾನಿ ಅವರಿಗೆ ಭೂಮಿ ನೀಡಿದಾಕ್ಷಣ ಧಾರಾವಿಯು ಬದಲಾಗುವುದಿಲ್ಲ. ಇನ್ನೊಂದೆಡೆ, ನಗರ ನಕ್ಸಲರ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸುವ ಬದಲಾಗಿ, ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವುದು ಅಗತ್ಯ’ ಎಂದು ಪ್ರತಿಪಾದಿಸಿದರು.

ರಾಜ್‌ ಠಾಕ್ರೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರನ್ನು ಭೇಟಿ ಮಾಡಿರುವುದಕ್ಕೆ ರಾಜಕೀಯವಾಗಿ ಯಾವುದೇ ಮಹತ್ವ ನೀಡುವ ಅಗತ್ಯ ಇಲ್ಲ 
ಚಂದ್ರಶೇಖರ ಬಾವಂಕುಲೆ, ಕಂದಾಯ ಸಚಿವ
ರಾಜ್ ಠಾಕ್ರೆ ದೇವೇಂದ್ರ ಫಡಣವೀಸ್‌ ಭೇಟಿ ಬಗ್ಗೆ ಆತಂಕ ಏಕೆ. ವಿಪಕ್ಷ ನಾಯಕನಾಗಿ ಅವರು ಸರ್ಕಾರದ ಮುಖ್ಯಸ್ಥನನ್ನು ಭೇಟಿ ಮಾಡಬಹುದು. ಈ ಹಿಂದೆಯೂ ಹಲವು ಬಾರಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದಾರೆ
ಸಂಜಯ ರಾವುತ್, ಶಿವಸೇನಾ(ಯುಬಿಟಿ) ನಾಯಕ
ಹಲವರು ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದಾರೆ ಹಲವು ಸಭೆಗಳು ನಡೆದಿವೆ. ಸರ್ಕಾರದ ಭಾಗವಾಗಿರಲಿ ವಿಪಕ್ಷದವರೇ ಆಗಿರಲಿ ಜನರು ಮುಖ್ಯಮಂತ್ರಿಯನ್ನು ಭೇಟಿ ಮಾಡುತ್ತಾರೆ. ಇದು ಮಹಾರಾಷ್ಟ್ರದ ರಾಜಕೀಯ ಮತ್ತು ಸಂಸ್ಕೃತಿ
ಅಜಿತ್‌ ಪವಾರ್‌, ಉಪಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.