ಮುಂಬೈನ ವರ್ಲಿಯ ಎನ್‌ಎಸ್‌ಸಿಐ ಡೋಮ್‌ನಲ್ಲಿ ಶನಿವಾರ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ರಾಜ್ ಠಾಕ್ರೆ ಹಾಗೂ ಉದ್ಧವ್ ಠಾಕ್ರೆ ವೇದಿಕೆ ಮೇಲೆ ತಮ್ಮ ಒಗ್ಗಟ್ಟು ಪ್ರದರ್ಶಿಸಿದರು
ಪಿಟಿಐ ಚಿತ್ರ
ಮುಂಬೈ: ಎರಡು ದಶಕಗಳ ನಂತರ ಸೋದರ ಸಂಬಂಧಿ ಹಾಗೂ ಮಹಾರಾಷ್ಟ್ರ ನವನಿರ್ಮಾಣ ವೇದಿಕೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಜತೆ ವೇದಿಕೆ ಹಂಚಿಕೊಂಡಿದ್ದರ ಕುರಿತು ಪ್ರತಿಕ್ರಿಯಿಸಿರುವ ಶಿವಸೇನಾ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ, ‘ನಾವು ಜತೆಗೂಡಿದ್ದೇ ಒಂದಾಗಿರಲು’ ಎಂದು ಬಣ್ಣಿಸಿದ್ದಾರೆ.
ಮಹಾರಾಷ್ಟ್ರದ ಆಡಳಿತಾರೂಢ ಬಿಜೆಪಿ ಸರ್ಕಾರದ ಹಿಂದಿ ಹೇರಿಕೆ ವಿರೋಧಿಸಲು ಮತ್ತು ಮರಾಠಿ ಅಸ್ಮಿತೆ ಉಳಿಸಲು ಮುಂಬೈನ ವರ್ಲಿಯಲ್ಲಿ ಆಯೋಜಿಸಿದ್ದ ‘ವಿಕ್ಟರಿ’ ರ‍್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಜತೆಗೆ ಮುಂಬರಲಿರುವ ಪಾಲಿಕೆ ಚುನಾವಣೆಯಲ್ಲಿ ಜತೆಗೂಡಿ ಸ್ಪರ್ಧಿಸುವ ಸೂಚನೆಯನ್ನೂ ನೀಡಿದರು. ಉದ್ಧವ್ ಮಾತಿಗೆ ಎನ್‌ಎಸ್‌ಸಿಐ ಡೋಮ್ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಅಪಾರ ಜನರು ಕರತಾಡನದ ಮೂಲಕ ಮೆಚ್ಚುಗೆ ಸೂಚಿಸಿದರು.
ವೇದಿಕೆ ಮೇಲೆ ಕುಳಿತಿದ್ದ ಏಕೈಕ ವ್ಯಕ್ತಿ ಉದ್ಧವ್ ಠಾಕ್ರೆ ಅವರನ್ನು ಉದ್ದೇಶಿಸಿ ಮಾತನಾಡಿದ ರಾಜ್ ಠಾಕ್ರೆ, ‘ಇಬ್ಬರು ಸೋದರರನ್ನು ಒಂದುಗೂಡಿಸಲು ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರಿಗೂ ಸಾಧ್ಯವಾಗಿರಲಿಲ್ಲ. ಅದನ್ನು ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರು ಸಾಧ್ಯವಾಗಿಸಿದರು’ ಎಂದರು.
‘ಮುಂಬೈ ಅನ್ನು ಮಹಾರಾಷ್ಟ್ರದಿಂದ ಬೇರ್ಪಡಿಸುವ ಹುನ್ನಾರದಿಂದಲೇ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ತ್ರಿಭಾಷಾ ಸೂತ್ರವನ್ನು ಜಾರಿಗೆ ತರುವ ಸಂಚು ರೂಪಿಸಿದೆ. ಇದನ್ನು ವಿರೋಧಿಸಿ ಪ್ರತಿಭಟನಾ ರ‍್ಯಾಲಿ ನಡೆಸಲು ಯೋಜನೆ ರೂಪಿಸಲಾಗಿತ್ತು. ಆದರೆ ಅಷ್ಟರೊಳಗೆ ರಾಜ್ಯ ಸರ್ಕಾರ ತನ್ನ ವಿವಾದಿತ ತ್ರಿಭಾಷಾ ಸೂತ್ರ ಜಾರಿಯನ್ನು ಹಿಂಪಡೆದಿದೆ. ಇದರಿಂದಾಗಿ ‘ವಿಕ್ಟರಿ’ ರ‍್ಯಾಲಿ ಆಯೋಜಿಸಲಾಗಿದೆ’ ಎಂದಿದ್ದಾರೆ.
‘ತ್ರಿಭಾಷಾ ಸೂತ್ರದ ಮೂಲಕ ಭಾಷಾ ಸಂಘರ್ಷವನ್ನು ಹುಟ್ಟುಹಾಕಲು ಮುಂದಾಗಿದ್ದ ಹಾಲಿ ಸರ್ಕಾರವು, ಭವಿಷ್ಯದಲ್ಲಿ ಜಾತಿ ಆಧಾರಿತ ವಿಭಜನೆಯ ರಾಜಕೀಯವನ್ನು ನಡೆಸಲಿದೆ. ಒಡೆದು ಆಳುವುದೇ ಬಿಜೆಪಿಯ ನೀತಿಯಾಗಿದೆ’ರಾಜ್ ಠಾಕ್ರೆ, ಮುಖ್ಯಸ್ಥ, ಎಂಎನ್‌ಎಸ್
‘ತಮ್ಮ ಪುತ್ರ ‘ಕಾನ್ವೆಂಟ್ ಶಿಕ್ಷಣ’ ಪಡೆಯುತ್ತಿರುವ ಕುರಿತು ಮಾತುಗಳನ್ನಾಡುತ್ತಿದ್ದಾರೆ. ಆದರೆ ದಕ್ಷಿಣದ ರಾಜ್ಯಗಳನ್ನು ಗಮನಿಸಿದರೆ, ಬಹಳಷ್ಟು ರಾಜಕಾರಣಿಗಳು, ಚಿತ್ರ ನಟ, ನಟಿಯರ ಮಕ್ಕಳು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಓದಿದರೂ, ಅವರು ಸದಾ ತಮ್ಮ ಭಾಷಾಭಿಮಾನವನ್ನು ಮೆರೆಯುತ್ತಾರೆ’ ಎಂದರು.
‘ಬಾಳಾಸಾಹೇಬ್ ಠಾಕ್ರೆ ಅವರೂ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಕಲಿತವರು. ಇಂಗ್ಲಿಷ್ ಸುದ್ದಿಪತ್ರಿಕೆಯಲ್ಲಿ ಕೆಲಸ ಮಾಡಿದವರು. ಹಾಗೆಂದ ಮಾತ್ರಕ್ಕೆ ಮರಾಠಿ ಅಸ್ಮಿತೆಯೊಂದಿಗೆ ಎಂದೂ ರಾಜಿ ಮಾಡಿಕೊಂಡವರಲ್ಲ. ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ. ಅಡ್ವಾನಿ ಅವರೂ ಕಾನ್ವೆಂಟ್ ಶಾಲೆಯಲ್ಲಿ ಕಲಿತವರು. ಹಾಗೆಂದ ಮಾತ್ರಕ್ಕೆ ಅವರ ಹಿಂದುತ್ವವನ್ನು ಯಾರಾದರೂ ಪ್ರಶ್ನಿಸುತ್ತಾರೆಯೇ?’ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.
‘ಬಾಯಲ್ಲಿ ಮರಾಠಿ ಉಳಿಸುವ ಮಾತು, ಮಕ್ಕಳಿಗೆ ಮಾತ್ರ ಇಂಗ್ಲಿಷ್ ಕಾನ್ವೆಂಟ್ ಶಿಕ್ಷಣ’ ಎಂದು ವಿರೋಧ ಪಕ್ಷಗಳು ಈ ಸೋದರ ಸಂಬಂಧಿಗಳ ಪುತ್ರರಾದ ಅಮಿತ್ ಮತ್ತು ಆದಿತ್ಯ ಅವರ ಶಿಕ್ಷಣ ಕುರಿತು ಟೀಕಿಸುತ್ತಿದ್ದವು. ಅದಕ್ಕೆ ರಾಜ್ ಠಾಕ್ರೆ ವೇದಿಕೆ ಮೂಲಕ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಮುಂಬೈನ ವರ್ಲಿಯ ಎನ್‌ಎಸ್‌ಸಿಐ ಡೋಮ್‌ನಲ್ಲಿ ಶನಿವಾರ ಆಯೋಜನೆಗೊಂಡಿದ್ದ ಸಮಾವೇಶದಲ್ಲಿ ರಾಜ್ ಠಾಕ್ರೆ ಮತ್ತು ಉದ್ಧವ್ ಠಾಕ್ರೆ ಕುಟುಂಬಸ್ಥರ ಮಿಲನ
ಉದ್ಧವ್ ಠಾಕ್ರೆ ಮಾತನಾಡಿ, ‘ಸರ್ಕಾರವು ಜನರ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರಲು ಹೊರಟಿದೆ. ಮರಾಠಿ ಮತ್ತು ಮಹಾರಾಷ್ಟ್ರದ ಮೇಲೆ ಯಾರ ಕೆಟ್ಟ ದೃಷ್ಟಿಯೂ ಬೀಳದಿರಲಿ. ನಮ್ಮ ಶಕ್ತಿ ನಮ್ಮ ಒಗ್ಗಟ್ಟಿನಲ್ಲಿರಬೇಕು. ಯಾವೆಗಲ್ಲಾ ಸಂಕಷ್ಟ ಎದುರಾಗಿದೆಯೋ, ಆಗೆಲ್ಲಾ ನಾವು ಜತೆಗೂಡಿದ್ದೇವೆ. ಅದು ಮುಗಿದ ನಂತರ ಮತ್ತೆ ಒಳಜಗಳದಲ್ಲಿ ನಿರತರಾಗಿದ್ದೇವೆ’ ಎಂದರು.
‘ಮರಾಠಿಗರು ಪರಸ್ಪರ ಬಡಿದಾಡಿಕೊಳ್ಳುವ ಮೂಲಕ ದೆಹಲಿಯಲ್ಲಿ ಆಳುವವರ ಗುಲಾಮರಾಗುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ‘ಜೈ ಗುಜರಾತ್’ ಘೋಷಣೆ ಕೂಗಿದವರ ಹತಾಷೆ ಮಿತಿಮೀರಿತ್ತು’ ಎಂದು ಉಪಮುಖ್ಯಮಂತ್ರಿ ಏಕನಾಥ ಶಿಂಧೆ ಅವರನ್ನು ಹೆಸರು ಹೇಳದೆ ಟೀಕಿಸಿದರು.
ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮುಖಂಡರು ‘ಬಟೆಂಗೆ ತೊ ಕಟೆಂಗೆ’ (ವಿಭಜನೆಗೊಂಡರೆ ಕುಸಿಯುತ್ತೇವೆ) ಎಂಬ ಹೇಳಿಕೆ ನೀಡಿದ್ದು ಹಿಂದೂ ಮತ್ತು ಮುಸಲ್ಮಾನರನ್ನು ವಿಭಜಿಸುವ ಉದ್ದೇಶದಿಂದ. ಆದರೆ ಈಗ ಮಹಾರಾಷ್ಟ್ರದವರನ್ನು ವಿಭಜಿಸಲು ಬಿಜೆಪಿ ಈ ಘೋಷಣೆಯನ್ನು ಬಳಸಿಕೊಳ್ಳುತ್ತಿದೆ. ಬಿಜೆಪಿ ಮುಖಂಡರು ರಾಜಕೀಯ ವ್ಯಾಪಾರಿಗಳುಉದ್ಧವ್ ಠಾಕ್ರೆ, ಮುಖ್ಯಸ್ಥ, ಶಿವಸೇನಾ (ಯುಬಿಟಿ)
2005ರಲ್ಲಿ ಇಬ್ಬರು ಸೋದರರ ನಡುವೆ ವೈಮನಸ್ಸು ಉಂಟಾಗಿದ್ದರಿಂದ ರಾಜ್ ಠಾಕ್ರೆ ಶಿವಸೇನಾ ತೊರೆದರು. ಮಹಾರಾಷ್ಟ್ರ ನವನಿರ್ಮಾಣ ವೇದಿಕೆ (ಎಂಎನ್‌ಎಸ್) ಹುಟ್ಟುಹಾಕಿದರು. ಇದಾದ ನಂತರ ಈ ಇಬ್ಬರನ್ನೂ ಒಂದುಗೂಡಿಸುವ ಹಲವು ಪ್ರಯತ್ನಗಳು ನಡೆದರೂ ಪರಸ್ಪರ ಪ್ರತಿಸ್ಪರ್ಧಿಗಳಾಗಿ ಚುನಾವಣೆಗಳಲ್ಲಿ ಎದುರುಬದರಾಗಿದ್ದರು.
2022ರಲ್ಲಿ ಮಹಾರಾಷ್ಟ್ರದಲ್ಲಿ ಉಂಟಾದ ರಾಜಕೀಯ ಪಲ್ಲಟದಲ್ಲಿ ಶಿವಸೇನಾ ಮತ್ತು ಎನ್‌ಸಿಪಿ ವಿಭಜನೆಗೊಂಡಿತು. ಶಿವಸೇನಾದಿಂದ ಬಂದ ಏಕನಾಥ ಶಿಂಧೆ ಹಾಗೂ ಎನ್‌ಸಿಪಿಯ ಅಜಿತ್ ಪವಾರ್ ಅವರನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಬಿಜೆಪಿ, ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿತು. ಇದರ ಬೆನ್ನಲ್ಲೇ ಕಳೆದ ನಾಲ್ಕು ತಿಂಗಳಿಂದ ಈ ಸೋದರ ಸಂಬಂಧಿಗಳು ಒಂದಗೂಡುವ ಕುರಿತು ವ್ಯಾಪಕ ಚರ್ಚೆಗಳು ನಡೆದಿದ್ದವು. ಆದರೆ ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟ ತ್ರಿಭಾಷಾ ಸೂತ್ರ ಮತ್ತು ಅದರಲ್ಲಿ ಮೂರನೇ ಭಾಷೆಯಾಗಿ ಹಿಂದಿಯ ಹೇರಿಕೆ ಕುರಿತು ಮಹಾರಾಷ್ಟ್ರದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಯಿತು. ಮರಾಠಿ ಅಸ್ಮಿತೆಯ ಈ ವಿಷಯವೇ ಈ ಸೋದರ ಸಂಬಂಧಿಗಳು ಜತೆಗೂಡಲು ವೇದಿಕೆ ಕಲ್ಪಿಸಿತು.
ಮುಂದಿನ ಕೆಲ ತಿಂಗಳುಗಳಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ಮುಂಬೈ ಸಹಿತ ಇತರ ಪಾಲಿಕೆಗಳನ್ನು ತಮ್ಮ ಹಿಡಿತಕ್ಕೆ ಪಡೆಯುವ ಯೋಜನೆಯನ್ನು ಉಭಯ ಪಕ್ಷಗಳು ಹೊಂದಿವೆ ಎಂದೆನ್ನಲಾಗಿದೆ.
ಕಳೆದ ಚುನಾವಣೆಯಲ್ಲಿ ಶಿವಸೇನಾ (ಯುಬಿಟಿ) 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಏಕನಾಥ ಶಿಂದೆ ಬಣ 57 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ಎಂಎನ್‌ಸಿ ಖಾತೆ ತೆರೆಯಲಿಲ್ಲ.
ಶನಿವಾರ ನಡೆದ ಉಭಯ ಬಣಗಳ ಜಂಟಿ ಕಾರ್ಯಕ್ರಮದಲ್ಲಿ ಸೋದರರು ದ್ವೇಷ ಮರೆತು ಒಂದುಗೂಡಿದ್ದು ಕಂಡುಬಂತು. ಈ ದೃಶ್ಯ ಎರಡೂ ಬಣಗಳ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿತು. ಜತೆಗೆ ಹಿಂದಿನ ಚುನಾವಣೆಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಈ ಎರಡೂ ಪಕ್ಷಗಳಿಗೆ ಸೋದರರು ಒಂದುಗೂಡಿದ್ದು ದೊಡ್ಡ ಶಕ್ತಿಯನ್ನು ನೀಡಿದೆ ಎಂದೇ ವಿಶ್ಲೇಷಿಸಲಾಗಿದೆ.
ಮುಂಬೈನ ವರ್ಲಿಯ ಎನ್‌ಎಸ್‌ಸಿಐ ಡೋಮ್‌ನಲ್ಲಿ ಆಯೋಜನೆಗೊಂಡಿದ್ದ ವಿಕ್ಟರಿ ರ‍್ಯಾಲಿಯಲ್ಲಿ ಪಾಲ್ಗೊಂಡ ಅಪಾರ ಜನಸ್ತೋಮ
ವೇದಿಕೆ ಮೇಲೆ ರಾಜ್ ಮತ್ತು ಉದ್ಧವ್ ಮಾತ್ರ ಇದ್ದರು. ಮರಾಠಿ ಅಸ್ಮಿತೆಯೇ ತಮ್ಮ ಪ್ರಮುಖ ಭಾವನಾತ್ಮಕ ಕೊಂಡಿಯನ್ನಾಗಿಸಿಕೊಂಡಿರುವ ಎರಡೂ ಲಕ್ಷಗಳ ಬೆಂಬಲಿಗರು ಇಬ್ಬರು ಸೋದರ ಸಂಬಂಧಿಗಳು ಜತೆಗೂಡಿದ್ದನ್ನು ಕಂಡು ಸಂಭ್ರಮದಿಂದ ಹಿಗ್ಗಿದರು.
ಕಾರ್ಯಕ್ರಮದಲ್ಲಿ ಎನ್‌ಸಿಪಿ (ಎಸ್‌ಪಿ) ಪಕ್ಷದ ಕಾರ್ಯಕಾರಿ ಅಧ್ಯಕ್ಷೆ ಸುಪ್ರಿಯಾ ಸುಳೆ ಹಾಗೂ ಇತರ ಮುಖಂಡರು ಇದ್ದರೂ, ವೇದಿಕೆ ಮೇಲೆ ರಾಜ್ ಮತ್ತು ಉದ್ಧವ್ ಮಾತ್ರ ಇದ್ದರು. ಅವರಿಬ್ಬರೇ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮುಂದಿನ ತಲೆಮಾರಿನ ನಾಯಕರಾದ ಆದಿತ್ಯ ಮತ್ತು ಅಮಿತ್ ಠಾಕ್ರೆ ಇಬ್ಬರೂ ಮೊದಲ ಬಾರಿಗೆ ಜತೆಗೂಡಿದ್ದು ಕಂಡುಬಂತು. ಇಬ್ಬರೂ ಪರಸ್ಪರ ಪರಸ್ಪರರ ಭುಜದ ಮೇಲೆ ಕೈಹಾಕಿದ್ದು ಕಂಡುಬಂತು. ರಾಜ್ ಮತ್ತು ಉದ್ಧವ್ ಜತೆಗೆ ನಿಂತು ರಾಷ್ಟ್ರಗೀತೆಗೆ ಗೌರವ ಸೂಚಿಸಿದರು.
ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಕಾರ್ಯಕ್ರಮ ಆಯೋಜನೆಗೊಂಡಿದ್ದ ಸಭಾಂಗಣದ ಹೊರಗೂ ಕಿಕ್ಕಿರಿದು ಜನರು ಸೇರಿದ್ದರು. ಎಂಎನ್‌ಎಸ್ ಮತ್ತು ಶಿವಸೇನಾ (ಯುಬಿಟಿ) ಪಕ್ಷಗಳ ಕಾರ್ಯಕರ್ತರು ಉತ್ಸಾಹದಿಂದ ಸಮಾವೇಶದಲ್ಲಿ ಪಾಲ್ಗೊಂಡರು. ಪಕ್ಷಗಳ ಧ್ವಜ ಹಿಡಿದು ಘೋಷಣೆಗಳನ್ನು ಕೂಗಿದರು. ಮುಂಬೈನ ವಿವಿಧ ಸ್ಥಗಳಲ್ಲಿ ಅಳವಡಿಸಿದ್ದ ಬೃಹತ್ ಎಲ್‌ಇಡಿ ಪರದೆಗಳಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಬಿತ್ತರಗೊಳ್ಳುವಂತೆ ವ್ಯವಸ್ಥೆ ಮಾಡಲಾಗಿತ್ತು. ಆ ಮೂಲಕ ಎರಡೂ ಪಕ್ಷಗಳ ನಾಯಕರು ಜತೆಗೂಡಿದ ದೊಡ್ಡ ಸಂದೇಶವನ್ನು ರವಾನಿಸುವಲ್ಲಿ ‘ವಿಕ್ಟರಿ’ ಸಮಾವೇಶ ಯಶಸ್ವಿಯಾಯಿತು ಎಂದೇ ವಿಶ್ಲೇಷಿಸಲಾಗುತ್ತಿದೆ.
ವರ್ಲಿ ಶಾಸಕರೂ ಆಗಿರುವ ಶಿವಸೇನಾ (ಯುಬಿಟಿ) ಮುಖ್ಯಸ್ಥ ಆದಿತ್ಯ ಠಾಕ್ರೆ ಅವರ ಕ್ಷೇತ್ರದಲ್ಲಿ ರಾಜ್ ಮತ್ತು ಉದ್ಧವ್ ಜತೆಗೂಡಿದ ಚಿತ್ರಗಳ ಬೃಹತ್ ಹೋರ್ಡಿಂಗ್‌ಗಳು ಕಣ್ಣಿಗೆ ರಾಚುವಂತಿದ್ದವು. ಮರಾಠಿಗರಿಗಾಗಿ ಈ ಇಬ್ಬರು ಸೋದರರು ಸದಾ ಜತೆಯಾಗಿರಲಿ ಎಂಬ ಒಕ್ಕಣೆಗಳೂ ಬ್ಯಾನರ್‌ಗಳಲ್ಲಿದ್ದಿದ್ದು ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.