ADVERTISEMENT

ರಾಜೇ ವಿರುದ್ಧ ಸಿಡಿದ ರಜಪೂತ ಸ್ವಾಭಿಮಾನ

ಉಮಾಪತಿ
Published 23 ನವೆಂಬರ್ 2018, 20:00 IST
Last Updated 23 ನವೆಂಬರ್ 2018, 20:00 IST
ವಸುಂಧರಾ ರಾಜೇ ಮತ್ತು ಮಾನವೇಂದ್ರ ಸಿಂಗ್
ವಸುಂಧರಾ ರಾಜೇ ಮತ್ತು ಮಾನವೇಂದ್ರ ಸಿಂಗ್   

ರಾಜಸ್ಥಾನ ಪ್ರಬಲ ಸಮುದಾಯವಾದ ರಜಪೂತರು ಪಶ್ಚಿಮ ಭಾಗದಲ್ಲಿ ರಾಜಕೀಯವಾಗಿ ದಟ್ಟ ಪ್ರಭಾವ ಹೊಂದಿದ್ದಾರೆ. ಇದೇ ಸೀಮೆಯಲ್ಲಿ ಮುಖ್ಯಮಂತ್ರಿ ವಸುಂಧರಾ ರಾಜೇ ಈ ಸಮುದಾಯವನ್ನು ಎದುರು ಹಾಕಿಕೊಂಡಿರುವ ಹಲವು ಪ್ರಕರಣಗಳಿವೆ.ಹೀಗಾಗಿಯೇ ರಾಜೇ ಸ್ಪರ್ಧಿಸಿರುವ ಝಾಲ್ರಾಪಾಟನ್ ಕ್ಷೇತ್ರ ರಜಪೂತ ಸಮುದಾಯದ ಪಾಲಿಗೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ.

ತಂದೆಯ ಕಾಲದಿಂದ ಕಾಂಗ್ರೆಸ್ ವಿರೋಧಿ ರಾಜಕೀಯ ಮಾಡಿರುವ ಮಾನವೇಂದ್ರ ಇದೀಗ ಅದೇ ಪಕ್ಷದ ಉಮೇದುವಾರ. ಪೂರ್ವ ರಾಜಸ್ಥಾನದ ಶಿವ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅವರ ಪಾಲಿಗೆ ಪಶ್ಚಿಮ ರಾಜಸ್ಥಾನದ ಝಾಲ್ರಾ ಪಾಟನ್ ಅಪರಿಚಿತ ಕ್ಷೇತ್ರ. ಮಾನವೇಂದ್ರ ಅವರ ಸಂಘರ್ಷ ರಜಪೂತ ಸ್ವಾಭಿಮಾನದ ರಂಗು ಪಡೆದಿದೆ.

ರಾಜಸ್ಥಾನದ ಸೊಸೆ: ವಸುಂಧರಾ ರಾಜೇ ಸಿಂಧಿಯಾ ಮಧ್ಯಪ್ರದೇಶದ ಗ್ವಾಲಿಯರ್ ರಾಜ ಕುಟುಂಬದ ಮಗಳು. ರಾಜಸ್ಥಾನದ ಧೋಲ್‌ಪುರ ರಾಜ ಮನೆತನದ ಸೊಸೆ. ಅವರ ರಾಜಕಾರಣ ರೂಪುಗೊಂಡಿದ್ದು ಕೂಡ ಇಲ್ಲಿಯೇ.

ADVERTISEMENT

ಐದು ಬಾರಿ ಲೋಕಸಭೆಗೆ ಮತ್ತು ಮೂರ ಬಾರಿ ರಾಜಸ್ಥಾನ ವಿಧಾನಸಭೆಗೆ ಆಯ್ಕೆಯಾದ ರಾಜೇ ರಾಜ್ಯದ ಜನಪ್ರಿಯ ರಾಜಕಾರಣಿಗಳಲ್ಲಿ ಒಬ್ಬರು. 2003ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಆದ ಅವರಿಗೆ 20013ರಲ್ಲಿ ಪುನಃ ಮುಖ್ಯಮಂತ್ರಿ ಪಟ್ಟ ಒಲಿದಿತ್ತು.

ಝಾಲ್ರಾಪಾಟನದಿಂದ ಸತತ ಮೂರು ಸಲ ಗೆದ್ದಿರುವ ವಸುಂಧರಾ ನಾಲ್ಕನೆಯ ಬಾರಿ ವಿಧಾನಸಭೆಗೆ ಸ್ಪರ್ಧಿಸುತ್ತಿದ್ದಾರೆ. 2013ರಲ್ಲಿ60ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು.

ರಜಪೂತ ಮತಬ್ಯಾಂಕ್‌ಗೆ ಕನ್ನ: ಕ್ಷೇತ್ರದ ಜಾತಿವಾರು ಮತಗಣಿತವನ್ನು ರಾಜೇ ವಿರುದ್ಧ ತಿರುಗಿಸುವ ತಂತ್ರವನ್ನು ಕಾಂಗ್ರೆಸ್‌ ಹೂಡಿದೆ.

ಕ್ಷೇತ್ರದಲ್ಲಿ 50ಸಾವಿರ ಅಲ್ಪಸಂಖ್ಯಾತರು, 35ಸಾವಿರ ದಲಿತರು ಮತ್ತು 22ಸಾವಿರ ರಜಪೂತರ ಮತಗಳಿವೆ. ರಜಪೂತರಾದ ಮಾನವೇಂದ್ರ ಅವರನ್ನು ಕಣಕ್ಕಿಳಿಸಿ ರಾಜೇ ಅವರ ಪಾರಂಪರಿಕ ಮತ ಭಂಡಾರದಲ್ಲಿ ಬಿರುಕು ಉಂಟು ಮಾಡುವ ನಿರೀಕ್ಷೆಯನ್ನು ಕಾಂಗ್ರೆಸ್ ಇಟ್ಟುಕೊಂಡಿದೆ.

ಶೀತಲ ಸಮರ: ಒಂದೇ ಪಕ್ಷದಲ್ಲಿದ್ದರೂ ವಸುಂಧರಾ ರಾಜೇ ಮತ್ತು ಜಸ್ವಂತಸಿಂಗ್ ನಡುವಣ ಶೀತಲಯುದ್ಧ ಜನಜನಿತ.

ಜಸ್ವಂತ್‌ಗೆ ಬಾಡಮೇರ ಲೋಕಸಭಾ ಟಿಕೆಟ್ ನಿರಾಕರಿಸಿ ಆಗಷ್ಟೇ ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ್ದ ಕರ್ನಲ್ ಸೋನಾರಾಮ್ ಅವರಿಗೆ ನೀಡಲಾಗಿತ್ತು. ಈ ನಿರ್ಧಾರದ ಹಿಂದೆ ವಸುಂಧರಾ ಕೈವಾಡ ಇತ್ತು.

ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಸ್ವಂತ್ ಅವರನ್ನು ಸೋಲಿಸಲು ತಮ್ಮ ಎಲ್ಲ ಶಕ್ತಿ ಸಾಮರ್ಥ್ಯ ಬಳಸಿದ್ದರು ಎಂಬ ಆಪಾದನೆ ವಸುಂಧರಾ ಮೇಲಿದೆ.

ನಿಷ್ಠೆ ಬದಲಾಗಿಲ್ಲ-ಬಿಜೆಪಿ: ವಸುಂಧರಾ ರಾಜೇ ಅವರನ್ನು ಉದ್ದೇಶಪೂರ್ವಕವಾಗಿ ರಜಪೂತ ವಿರೋಧಿ ಎಂದು ಬಿಂಬಿಸುವ ಪ್ರಯತ್ನಗಳು ನಡೆದಿವೆ ಎನ್ನುವುದು ಬಿಜೆಪಿಯ ಆರೋಪವಾಗಿದೆ.

ಕ್ಷೇತ್ರ ಮರುವಿಂಗಡಣೆಯ ಕಾರಣ ಬಾಡಮೇರ ಕ್ಷೇತ್ರದ ಜಾತಿ ಲೆಕ್ಕಾಚಾರದ ಸ್ವರೂಪ ಬದಲಾಗಿತ್ತು. ಹೀಗಾಗಿ ಬಿಜೆಪಿಯ ಟಿಕೆಟ್ ಜಸ್ವಂತ್ ಸಿಂಗ್ ಬದಲು ಜಾಟ್ ಅಭ್ಯರ್ಥಿ ಕರ್ನಲ್ ಸೋನಾರಾಮ್ ಅವರಿಗೆ ದೊರೆಯಿತು. ಅದರಲ್ಲಿ ರಾಜೇ ಪಾತ್ರ ಇರಲಿಲ್ಲ ಎಂದು ಬಿಜೆಪಿ ವಿವರಣೆ ನೀಡುತ್ತಿದೆ.

ಬಿಜೆಪಿಯು ರಜಪೂತ ಸಮುದಾಯದ 28 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಕಾಂಗ್ರೆಸ್ ಸಮುದಾಯದ 13 ಜನರಿಗೆ ಟಿಕೆಟ್‌ ನೀಡಿದೆ ಎಂದು ಬಿಜೆಪಿ, ರಜಪೂತರ ಮೇಲಿನ ತನ್ನ ಪ್ರೀತಿಯನ್ನು ಸಾಬೀತುಪಡಿಸುವ ಪ್ರಯತ್ನ ಮಾಡುತ್ತಿದೆ.

ರಾಜಕೀಯ ಹಗೆಯ ಸಂಕೇತ

ವಾಜಪೇಯಿ ಮಂತ್ರಿಮಂಡಲದ ಮಹಾರಥಿಗಳಲ್ಲಿ ಒಬ್ಬರಾಗಿದ್ದರು ಜಸ್ವಂತಸಿಂಗ್.ಮುಹಮ್ಮದ್ ಅಲಿ ಜಿನ್ನಾ ಕುರಿತು ಸಹಾನುಭೂತಿ ವ್ಯಕ್ತಪಡಿಸಿದ ಪುಸ್ತಕ ಬರೆದ ನಂತರ ಬಿಜೆಪಿಯ ಕೆಂಗಣ್ಣಿಗೆ ಗುರಿಯಾದರು.

2014ರಲ್ಲಿ ಬಿಜೆಪಿ ಅವರಿಗೆ ಲೋಕಸಭಾ ಟಿಕೆಟ್ ಕೊಡಲಿಲ್ಲ.ಬಾಡಮೇರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು.ಪಕ್ಷ ವಿರೋಧಿ ಚಟುವಟಿಕೆಗಾಗಿ2014ರಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು.

ತಂದೆಯನ್ನು ಬೆಂಬಲಿಸಿ ಚುನಾವಣಾ ಪ್ರಚಾರ ಮಾಡಿದ್ದ ಮಗ ಮಾನವೇಂದ್ರ ಸಿಂಗ್ ಅವರನ್ನೂ ಬಿಜೆಪಿ ಹೊರಹಾಕಿತು.ಕೆಲವೇ ತಿಂಗಳುಗಳಲ್ಲಿ ತಲೆಗೆ ಪಟ್ಟಾಗಿ ಆಸ್ಪತ್ರೆ ಸೇರಿದ ಜಸ್ವಂತ್ ಸಿಂಗ್ ನಾಲ್ಕು ವರ್ಷಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದಾರೆ.

ವಿದೇಶದಲ್ಲಿ ವ್ಯಾಸಂಗ

ವಿದೇಶಗಳಲ್ಲಿ ವ್ಯಾಸಂಗ ಮಾಡಿದ್ದ ಮಾನವೇಂದ್ರ ಇಂಗ್ಲಿಷ್ ಪತ್ರಿಕೆಗಳಲ್ಲಿ ಪತ್ರಕರ್ತರಾಗಿದ್ದರು. 1999ರಲ್ಲಿ ರಾಜಕಾರಣ ಪ್ರವೇಶಿಸಿ, 2004ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಾಡಮೇರ-ಜೈಸಲ್ಮೇರ್‌ನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 2013ರಲ್ಲಿ ಇದೇ ಲೋಕಸಭಾ ಕ್ಷೇತ್ರದ ಶಿವ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಇತ್ತೀಚೆಗೆ ಕಾಂಗ್ರೆಸ್ ಸೇರಿದ ಮಾನವೇಂದ್ರ ಸಿಂಗ್‌ ನಡೆ ರಾಜ್ಯದ ರಜಪೂತರಲ್ಲಿ ಬಿಜೆಪಿ ಕುರಿತ ಭ್ರಮನಿರಸನದ ಸಂಕೇತ ಎಂಬ ವ್ಯಾಖ್ಯಾನ ಜರುಗಿದೆ.

ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧ ರಜಪೂತರ ರಾಜಕೀಯ ಹಗೆ ಮಾನವೇಂದ್ರ ಸಿಂಗ್ ಅವರನ್ನು ಕಾಂಗ್ರೆಸ್ ಹುರಿಯಾಳಾಗಿ ಕಣಕ್ಕೆ ಇಳಿಸಿದೆ.

***

ರಜಪೂತರ ಗ್ರಹಿಕೆ ಬದಲಾಗಿದೆ. ಬಿಜೆಪಿಯೇ ತಮ್ಮ ಪಕ್ಷ ಎಂಬ ಭಾವನೆಗೆ ರಜಪೂತರು ಮರಳಿದ್ದಾರೆ. ಮಾನವೇಂದ್ರ ಅವರನ್ನು ಕಾಂಗ್ರೆಸ್ ಪಕ್ಷ ಬಲಿಪಶು ಮಾಡಿದೆ

– ಬಿಜೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.