ADVERTISEMENT

ರಾಜಸ್ಥಾನ ಕಾಂಗ್ರೆಸ್‌ ಅಭ್ಯರ್ಥಿ ಪಟ್ಟಿ: ಮಾತು ಮರೆತು ವಲಸಿಗರಿಗೆ ರಾಹುಲ್‌ ಮಣೆ

ಕೊನೆಗೂ ಹೊರಬಿತ್ತು 20 ಮಹಿಳೆಯರು, 9 ಮುಸ್ಲಿಮರು, 19 ಹಾಲಿ ಶಾಸಕರಿಗೆ ಟಿಕೆಟ್‌

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 20:22 IST
Last Updated 16 ನವೆಂಬರ್ 2018, 20:22 IST
   

ಜೈಪುರ: ಸಾಕಷ್ಟು ಸಮಯ ತೆಗೆದುಕೊಂಡಿರುವ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಸಮಿತಿಯು ರಾಜಸ್ಥಾನ ಕಾಂಗ್ರೆಸ್‌ನಲ್ಲಿರುವ ಸಚಿನ್‌ ಪೈಲಟ್‌ ಮತ್ತು ಅಶೋಕ್‌ ಗೆಹ್ಲೋಟ್‌ ಬಣಗಳಿಗೆ ಸೇರಿದವರಿಗೆ ಸಮಾಧಾನವಾಗುವ ರೀತಿಯಲ್ಲಿ ಟಿಕೆಟ್‌ ಹಂಚಿಕೆ ಮಾಡಿದೆ. ಆದರೆ, ವಲಸಿಗರಿಗೆ ಟಿಕೆಟ್‌ ಕೊಡುವುದಿಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಹಿಂದೆ ನೀಡಿದ್ದ ಮಾತು ಈ ಸರ್ಕಸ್‌ನಲ್ಲಿ ಆಯ್ಕೆ ಸಮಿತಿಗೆ ಮರೆತೇ ಹೋಗಿದೆ.

ಇತ್ತೀಚೆಗೆ ಮತ್ತು ಒಂದೆರಡು ದಿನಗಳ ಹಿಂದೆ ಕಾಂಗ್ರೆಸ್‌ ಪಕ್ಷ ಸೇರಿದ ಐದು ಮಂದಿಗೆ ಟಿಕೆಟ್‌ ನೀಡಲಾಗಿದೆ. ವಲಸಿಗರಿಗೆ ಮಣೆ ಹಾಕಿರುವ ಕ್ರಮ ಮೂಲ ಕಾಂಗ್ರೆಸಿಗರಲ್ಲಿ ಆಕ್ರೋಶ ಸೃಷ್ಟಿಸಿದೆ. ಜೈಪುರದ ಕಾಂಗ್ರೆಸ್‌ ಕಚೇರಿ ಮುಂದೆ ಸರಣಿ ಪ್ರತಿಭಟನೆಗಳು ನಡೆದಿವೆ. ಟಿಕೆಟ್‌ ವಂಚಿತರ ಬೆಂಬಲಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಪ್ರದರ್ಶಿಸುತ್ತಿದ್ದ ಫಲಕಗಳಲ್ಲಿ ‘ಅನಕ್ಷರಸ್ಥರನ್ನು ಕೈಬಿಡಿ, ವಲಸಿಗರನ್ನು ಕೈಬಿಡಿ’, ‘ಪ್ಯಾರಾಚೂಟ್‌ ಅಭ್ಯರ್ಥಿಗಳು ಬೇಕಿಲ್ಲ’ ಎಂಬ ಬರಹಗಳಿದ್ದವು.

ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಹೊರ ಬಿದ್ದ ಕೂಡಲೇ ಪ್ರತಿಭಟನೆಯೂ ಆಯಿತು.

ADVERTISEMENT

ಕಾಂಗ್ರೆಸ್‌ ಕೇಂದ್ರೀಯ ಚುನಾವಣಾ ಸಮಿತಿ ಗುರುವಾರ ಮಧ್ಯರಾತ್ರಿ ನವದೆಹಲಿಯಲ್ಲಿ 152 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿತು.

ಮೊದಲ ಪಟ್ಟಿಯಲ್ಲಿ 20 ಮಹಿಳೆಯರಿಗೆ ಮಣೆ ಹಾಕಲಾಗಿದೆ. 9 ಮುಸ್ಲಿಮರಿಗೆ ಮತ್ತು 19 ಹಾಲಿ ಶಾಸಕರಿಗೆ ಟಿಕೆಟ್‌ ನೀಡಲಾಗಿದೆ.

ಕಳೆದ ಭಾನುವಾರ ರಾತ್ರಿ ಅಥವಾ ಸೋಮವಾರವೇ ಕಾಂಗ್ರೆಸ್‌ ಪಟ್ಟಿ ಹೊರಬೀಳುವ ನಿರೀಕ್ಷೆ ಇತ್ತು. ಆದರೆ, ಮೂರ‍್ನಾಲ್ಕು ದಿನಗಳಿಂದ ನವದೆಹಲಿಯಲ್ಲಿ ಬಿಡಾರ ಹೂಡಿದ್ದ ಸಚಿನ್ ಪೈಲಟ್‌, ಅಶೋಕ್‌ ಗೆಹ್ಲೋಟ್‌, ಶೆಲ್ಜಾ ಕುಮಾರಿ ಹಾಗೂ ಇತರರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಜತೆ ಸುದೀರ್ಘ ಸಮಾಲೋಚನೆ ನಡೆಸಿದ ನಂತರ ಮೊದಲ ಪಟ್ಟಿ ಅಂತಿಮಗೊಳಿಸಿದ್ದರು.

ನಾಮಪತ್ರ ಸಲ್ಲಿಸಲು ನವೆಂಬರ್‌ 19 ಕೊನೆಯ ದಿನವಾಗಿದೆ.

ಬಿಜೆಪಿ ಈಗಾಗಲೇ 162 ಅಭ್ಯರ್ಥಿಗಳ ಎರಡು ಪಟ್ಟಿಗಳನ್ನು ಪ್ರಕಟಿಸಿದ್ದು, ಮುಸ್ಲಿಮರಿಗೆ ಯಾವುದೇ ಪ್ರಾತಿನಿಧ್ಯ ನೀಡಿಲ್ಲ.

ಹಳೆ ಬೇರು, ಹೊಸ ಚಿಗುರು: ಕಾಂಗ್ರೆಸ್‌ ಮೊದಲ ಪಟ್ಟಿಯಲ್ಲಿ ಹಳೆಯ ಮತ್ತು ಹೊಸ ಮುಖಗಳಿಗೆ ಸಮಾನ ಪ್ರಾತಿನಿಧ್ಯ ನೀಡಲಾಗಿದೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾದ ರಾಜಸ್ಥಾನ ಕಾಂಗ್ರೆಸ್‌ ಅಧ್ಯಕ್ಷ ಸಚಿನ್‌ ಪೈಲಟ್‌ ಮತ್ತು ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

ಸಂಸದರಾಗಿರುವ ಸಚಿನ್‌ ಪೈಲಟ್‌ ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಟೋಂಕ್ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ.

ಸರ್ದಾರಪುರದಿಂದ ಅಶೋಕ್‌ ಗೆಹ್ಲೋಟ್‌, ನಾಥಡವಾಡದಿಂದ ಸಿ.ಪಿ. ಜೋಶಿ ಮತ್ತು ನೋಖಾ ಕ್ಷೇತ್ರದಿಂದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಾಮೇಶ್ವರ್‌ ಡುಡಿ ಕಣಕ್ಕಿಳಿಯಲಿದ್ದಾರೆ.

ಮಹಿಳೆಯರಿಗೆ ಮಣೆ: 2013ರಲ್ಲಿ ಸದುಲಪುರ ಕ್ಷೇತ್ರದಿಂದ ಸೋಲುಂಡಿದ್ದ ಕಾಂಗ್ರೆಸ್‌ ಅಭ್ಯರ್ಥಿ ಮತ್ತು ಒಲಿಂಪಿಕ್ಸ್‌ ಕ್ರೀಡಾಪಟು ಕೃಷ್ಣಾ ಪೂನಿಯಾ ಈ ಬಾರಿಯೂ ಅದೇ ಕ್ಷೇತ್ರದಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷಿಸಲಿದ್ದಾರೆ.

ಭನ್ವಾರಿ ದೇವಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಕಾಂಗ್ರೆಸ್‌ ನಾಯಕ ಮತ್ತು ಜಾಟ್‌ ಸಮುದಾಯದ ಪ್ರಭಾವಿ ಧುರೀಣ ಮಹಿಪಾಲ್‌ ಮದೆರ್ಣಾಅವರ ಪುತ್ರಿ ದಿವ್ಯಾ ಮದೆರ್ಣಾ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ.

ಬಿಜೆಪಿ ಟಿಕೆಟ್‌ ವಂಚಿತರಾಗಿ ಎರಡು ದಿನಗಳ ಹಿಂದೆಯಷ್ಟೇ ಕಾಂಗ್ರೆಸ್‌ ಸೇರಿದ್ದ ಹಾಲಿ ಶಾಸಕ ಹಬೀಬುರ್‌ ರಹಮಾನ್‌ ಮತ್ತು ದೌಸಾದ ಬಿಜೆಪಿ ಸಂಸದ ಹಾಗೂ ನಿವೃತ್ತ ಡಿಜಿಪಿ ಹರೀಶ್‌ ಮೀನಾ ಅವರು ಕಾಂಗ್ರೆಸ್‌ ಟಿಕೆಟ್‌ ಪಡೆಯಲು ಯಶಸ್ವಿಯಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ಉಪ ಚುನಾವಣೆಯಲ್ಲಿ ಅಜ್ಮೀರ್‌ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕಾಂಗ್ರೆಸ್‌ ಸಂಸದ ರಘು ಶರ್ಮಾ ಅವರು ಕೆಕ್ರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಗೆ ಡಿಸೆಂಬರ್‌ 7 ಮತ್ತು ಡಿ.11ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ.

**

ಪಕ್ಷದ ಅಧ್ಯಕ್ಷ ಸ್ಥಾನ: ಕಾಂಗ್ರೆಸ್‌ಗೆ ಮೋದಿ ಸವಾಲು

ರಾಯಪುರ: ನೆಹರೂ–ಗಾಂಧಿ ಕುಟುಂಬದ ವ್ಯಕ್ತಿಯನ್ನು ಹೊರತುಪಡಿಸಿ ಬೇರೆಯವರನ್ನು ಐದು ವರ್ಷ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಸವಾಲು ಹಾಕಿದ್ದಾರೆ.

ಬ್ರಿಟಿಷರು ದೇಶಬಿಟ್ಟು ಹೋಗುವಾಗ ಹಿಂದುಸ್ತಾನವನ್ನು ಒಂದು ಕುಟುಂಬದ ಹೆಸರಿಗೆ ಉಂಬಳಿ ಬರೆದಿಟ್ಟು ಹೋಗಿದ್ದಾರೆಯೇ ಎಂದು ಅವರು ಶುಕ್ರವಾರ ಪ್ರಶ್ನಿಸಿದ್ದಾರೆ.

ಛತ್ತೀಸಗಡ ವಿಧಾನಸಭಾ ಚುನಾವಣೆ ಪ್ರಚಾರ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಅಂಬಿಕಾಪುರಕ್ಕೆ ತೆರಳುತ್ತಿದ್ದ ವೇಳೆ ಅವರು ಮಾತನಾಡಿದರು.

‘ಬ್ರಿಟಿಷರು ಹೋಗುವಾಗ ವಂಶಪಾರಂಪರ್ಯ ಆಡಳಿತ ನಡೆಸುವಂತೆ ಗಾಂಧಿ–ನೆಹರೂ ಕುಟುಂಬಕ್ಕೆ ಅಧಿಕಾರ ದಂಡ ಹಸ್ತಾಂತರಿಸಿ ಹೋಗಿದ್ದರು. ಆದರೆ, ಇಂದು ಅವರು ಕೂಡಬೇಕಾದ ಜಾಗದಲ್ಲಿ ಚಹಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಕುಳಿತಿದ್ದಾನೆ. ಅದನ್ನು ಸಹಿಸಿಕೊಳ್ಳಲು ಆ ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ’ ಎಂದು ಮೋದಿ ಕುಹಕವಾಡಿದರು.

ದೇಶದ ಮೊದಲ ಪ್ರಧಾನಿ ಜವಾಹರ ಲಾಲ್‌ ನೆಹರೂ ಅವರಿಂದಾಗಿಯೇ ಚಾಯ್‌ವಾಲಾನೊಬ್ಬ ಪ್ರಧಾನಿಯಾಗಲು ಸಾಧ್ಯವಾಗಿದೆ ಎಂಬ ಕಾಂಗ್ರೆಸ್‌ ಟೀಕೆಗೆ ಅವರು ಈ ರೀತಿ ತಿರುಗೇಟು ನೀಡಿದ್ದಾರೆ.
**
ಗಮನ ಸೆಳೆದ ಗುಲಾಬಿ ಕಾರು

ಹೈದರಾಬಾದ್‌: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಅಭ್ಯರ್ಥಿ ಗಣೇಶ್‌ ಬಿಗಲಾ ಅವರ ನಾಮಪತ್ರ ಸಲ್ಲಿಸಲು ನಿಜಾಮಾಬಾದ್‌ ಸಂಸದೆ ಕೆ. ಕವಿತಾ ಚಲಾಯಿಸಿಕೊಂಡು ಬಂದ ತಿಳಿ ಗುಲಾಬಿ ಬಣ್ಣದ ಅಂಬಾಸಿಡರ್‌ ಕಾರು ಎಲ್ಲರ ಗಮನ ಸೆಳೆಯಿತು.

ಟಿಆರ್‌ಎಸ್‌ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್ ಅವರ ಪುತ್ರಿಯಾದ ಕವಿತಾ ತಾವೇ ಕಾರನ್ನು ಚಲಾಯಿಸಿಕೊಂಡು ಬಂದರು. ‘ಕಾರು’ ಟಿಆರ್‌ಎಸ್‌ ಪಕ್ಷದ ಚುನಾವಣಾ ಚಿಹ್ನೆಯಾಗಿದೆ.


**
ನಕ್ಸಲರ ಪ್ರಾಬಲ್ಯವಿರುವ ಬಸ್ತಾರ್‌ ಭಾಗದಲ್ಲಿ ನಿರೀಕ್ಷೆ ಮೀರಿ ಮತದಾನವಾಗಿದೆ. ನಕ್ಸಲರ ಬಂದೂಕಿಗೆ ಹೆದರದ ಜನರು ಪ್ರಜಾತಂತ್ರದ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಸಂದ ಜಯ
- ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.