* ನಾಮಪತ್ರ ಸಲ್ಲಿಕೆ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಜೋಧಪುರ ಜಿಲ್ಲೆಯ ಸರ್ದಾರ್‌ಪುರ ಕ್ಷೇತ್ರದಿಂದ ಸೋಮವಾರ ನಾಮಪತ್ರ ಸಲ್ಲಿಸಿದರು. ಈ ವೇಳೆ ಅವರ ಪತ್ನಿ ಮತ್ತು ಪುತ್ರ ಜೊತೆಯಲ್ಲಿದ್ದರು. 1998ರಿಂದ ಈಚೆಗೆ ನಡೆದ ರಾಜಸ್ಥಾನದ ಎಲ್ಲಾ ವಿಧಾನಸಭಾ ಚುನಾವಣೆಗಳಲ್ಲೂ ಗೆಹಲೋತ್ ಅವರು ಸರ್ದಾರ್‌ಪುರ ವಿಧಾನಸಭೆ ಕ್ಷೇತ್ರದಿಂದಲೇ ಸ್ಪರ್ಧಿಸಿ ಗೆದ್ದಿದ್ದಾರೆ.
* 3 ಹಂತದ ಭದ್ರತೆ: ಛತ್ತೀಸಗಢದ ನಕ್ಸಲ್ ಪೀಡಿತ ಬಸ್ತರ್ ವಲಯದ 600ಕ್ಕೂ ಹೆಚ್ಚು ಮತಗಟ್ಟೆಗಳಿಗೆ ಮೂರು ಹಂತಗಳ ಭದ್ರತೆಯನ್ನು ಒದಗಿಸಲಾಗಿದೆ. ಸುಮಾರು 60,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅವರಲ್ಲಿ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ 40,000 ಸಿಬ್ಬಂದಿ ಮತ್ತು ರಾಜ್ಯ ಪೊಲೀಸ್ ಪಡೆಯ 20,000 ಸಿಬ್ಬಂದಿ ಇದ್ದಾರೆ.
* ಪ್ರಿಯಾಂಕಾ ರ‍್ಯಾಲಿ: ಮಧ್ಯಪ್ರದೇಶದ ಕುಕ್ಷಿ ಪಟ್ಟಣದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಾರ್ವಜನಿಕ ಸಭೆ ನಡೆಸಿ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ಕುರಿತು ಟೀಕಾಪ್ರಹಾರ ನಡೆಸಿದರು. ಕೇಂದ್ರವು ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಮುಚ್ಚಿದೆ ಎಂದು ದೂರಿದರು. ಸರ್ಕಾರ ತೆಗೆದುಕೊಂಡ ನೋಟು ರದ್ದತಿ, ಜಿಎಸ್‌ಟಿಯಂಥ ಕ್ರಮಗಳಿಂದ ಎಲ್ಲರೂ ಪರಿತಪಿಸುವಂತಾಗಿದೆ ಎಂದರು.
* ನಾಗಾಲ್ಯಾಂಡ್ ಉಪಚುನಾವಣೆ: ನಾಗಾಲ್ಯಾಂಡ್‌ನ ತಾಪಿ ವಿಧಾನಸಭೆಗೆ ಮಂಗಳವಾರ ಉಪಚುನಾವಣೆ ನಡೆಯಲಿದ್ದು, ಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲೂ ಸಿ.ಸಿ.ಟಿ.ವಿ. ಕ್ಯಾಮರಾ ಕಣ್ಗಾವಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು. ಬೆಳಿಗ್ಗೆ ಏಳು ಗಂಟೆಯಿಂದ ಸಂಜೆ 4 ಗಂಟೆವರೆಗೆ 23 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಕ್ಷೇತ್ರದಲ್ಲಿ ಒಟ್ಟು 15,256 ಮತದಾರರಿದ್ದಾರೆ.
* ಸೀಟು ಹಂಚಿಕೆ: ಸೀಟು ಹಂಚಿಕೆ ವಿಚಾರದಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು ಸಿಪಿಐ ನಡುವೆ ಒಮ್ಮತ ಮೂಡಿದೆ. ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿಪಿಐಗೆ ಕಾಂಗ್ರೆಸ್ ಅವಕಾಶ ಮಾಡಿಕೊಟ್ಟಿದೆ. ಅದರಂತೆ ಕೊತ್ತಗೂಡಂನಲ್ಲಿ ಸಿಪಿಐ ಸ್ಪರ್ಧಿಸಲಿದೆ. ಸಿಪಿಐ ಅಭ್ಯರ್ಥಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ ಹೇಳಿದ್ದಾರೆ.
* ಬಿಜೆಪಿ ಸೇರ್ಪಡೆ: ರಾಜಸ್ಥಾನದ ಬಾರೀ ಕ್ಷೇತ್ರದ ಕಾಂಗ್ರೆಸ್ ಶಾಸಕ ಗಿರ್ರಾಜ್ ಮಲಿಂಗ ಅವರು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರ ಉಪಸ್ಥಿತಿಯಲ್ಲಿ ಬಿಜೆಪಿಗೆ ಭಾನುವಾರ ಸೇರ್ಪಡೆ ಆದರು. ಕಾಂಗ್ರೆಸ್ ಬಿಡುಗಡೆ ಮಾಡಿದ್ದ ಅಭ್ಯರ್ಥಿಗಳ ಏಳನೇ ಪಟ್ಟಿಯಲ್ಲಿ ಗಿರ್ರಾಜ್ ಅವರನ್ನು ಕೈಬಿಡಲಾಗಿತ್ತು. ಅದಾದ ಕೆಲವೇ ಗಂಟೆಗಳಲ್ಲಿ ಅವರು ಬಿಜೆಪಿ ಸೇರಿದ್ದಾರೆ.
* ಸ್ಮೃತಿ ರ‍್ಯಾಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಛತ್ತೀಸಗಢದ ಕೊಂಡಗಾಂವ್‌ನಲ್ಲಿ ಭಾನುವಾರ ರ‍್ಯಾಲಿ ನಡೆಸಿದರು. ರಾಜ್ಯದ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಅವರು ಮಹಾದೇವ್ ಬೆಟ್ಟಿಂಗ್ ಆ್ಯಪ್‌ನಿಂದ ಹಣ ಪಡೆದಿದ್ದಾರೆ ಎಂಬ ಆರೋಪದ ಆಧಾರದಲ್ಲಿ ವಾಗ್ದಾಳಿ ನಡೆಸಿದ ಅವರು, ಬಘೆಲ್ ಅವರು ದುಬೈ ಮೂಲದ ಪ್ರವರ್ತಕರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.