ADVERTISEMENT

ಅಶೋಕ್‌ ಗೆಹಲೋತ್‌ ರಾಜೀನಾಮೆ

ಪಿಟಿಐ
Published 3 ಡಿಸೆಂಬರ್ 2023, 16:05 IST
Last Updated 3 ಡಿಸೆಂಬರ್ 2023, 16:05 IST
<div class="paragraphs"><p>ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌</p></div>

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌

   

ಜೈಪುರ: ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲು ಖಾತರಿಯಾದ ಕೂಡಲೇ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಬಿಜೆಪಿ ಗೆದ್ದ ಸ್ಥಾನಗಳು ಮ್ಯಾಜಿಕ್‌ ಸಂಖ್ಯೆ (100) ದಾಟುತ್ತಿದ್ದಂತೆಯೇ ಭಾನುವಾರ ಸಂಜೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ಕಲ್ರಾಜ್‌ ಮಿಶ್ರಾ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.

ADVERTISEMENT

72 ವರ್ಷದ ಗೆಹಲೋತ್‌ ಅವರು ಒಟ್ಟು ಮೂರು ಸಲ (1998-2003, 2008-13 ಮತ್ತು 2018-23) ಮುಖ್ಯಮಂತ್ರಿ ಆಗಿದ್ದರು.

‘ಹೊಸ ಸರ್ಕಾರಕ್ಕೆ ಶುಭ ಹಾರೈಸುತ್ತೇನೆ. ನನ್ನ ಸಲಹೆ ಏನೆಂದರೆ, ಕಷ್ಟಪಟ್ಟು ಕೆಲಸ ಮಾಡಿದರೂ ನಮಗೆ ಯಶಸ್ಸು ಸಿಗಲಿಲ್ಲ. ಸರ್ಕಾರ ರಚಿಸಿದ ನಂತರ ನೀವು ಕೆಲಸ ಮಾಡಬಾರದು ಎಂಬುದು ಇದರ ಅರ್ಥವಲ್ಲ’ ಎಂದು ಅವರು ‘ಎಕ್ಸ್‌’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಚಿರಂಜೀವಿ ಆರೋಗ್ಯ ವಿಮಾ ಯೋಜನೆ ಒಳಗೊಂಡಂತೆ ಕಾಂಗ್ರೆಸ್ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಜಾರಿಗೊಳಿಸಿದ್ದ ಎಲ್ಲ ಯೋಜನೆಗಳನ್ನು ಹೊಸ ಸರ್ಕಾರ ಮುಂದುವರಿಸಬೇಕು ಎಂದು ಕೇಳಿಕೊಂಡಿದ್ದಾರೆ.

*****

ಹಲವು ಸಚಿವರಿಗೆ ಸೋಲು

ಜೈಪುರ (ಪಿಟಿಐ): ವಿಪತ್ತು ನಿರ್ವಹಣಾ ಸಚಿವ ಗೋವಿಂದ್‌ ರಾಮ್‌ ಮೆಗವಾಲ್‌ ಸೇರಿದಂತೆ ಅಶೋಕ್‌ ಗೆಹಲೋತ್‌ ಸರ್ಕಾರದಲ್ಲಿ ಸಚಿವರಾಗಿದ್ದ ಹಲವರು ಸೋತಿದ್ದಾರೆ. 

ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿಯ ಚುಕ್ಕಾಣಿ ಹಿಡಿದಿದ್ದ ಮೆಗವಾಲ್‌ ಅವರು ಖಾಜೂವಾಲಾ ಕ್ಷೇತ್ರದಲ್ಲಿ ಬಿಜೆಪಿಯ ವಿಶ್ವನಾಥ್‌ ಮೆಗವಾಲ್‌ ಕೈಯಲ್ಲಿ ಪರಾಭವಗೊಂಡರು. 

ಭನ್ವರ್‌ ಸಿಂಗ್‌ ಭಾಟೀ (ಕೊಲಾಯತ್‌ ಕ್ಷೇತ್ರ), ಶಕುಂತಲಾ ರಾವತ್‌ (ಬಾನಸೂರ್‌), ವಿಶ್ವೇಂದ್ರ ಸಿಂಗ್ (ಡೀಗ್‌ ಕುಮೇರ್), ರಮೇಶ್‌ ಚಾಂದ್ ಮೀನಾ (ಸಪೋಟರಾ), ಶಾಲೇ ಮೊಹಮ್ಮದ್ (ಪೋಕರಣ್) ಮತ್ತು ಉದೈಲಾಲ್‌ ಅಂಜನಾ (ನಿಂಬಾಹೆರಾ) ಅವರು ಸೋತ ಸಚಿವರಲ್ಲಿ ಸೇರಿದ್ದಾರೆ. ಗೆಹಲೋತ್‌ ಅಲ್ಲದೆ ಸಂಪುಟದ 25 ಸಚಿವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

*****

ಬಿಜೆಪಿಯ ಏಳು ಸಂಸದರಲ್ಲಿ ನಾಲ್ವರಿಗೆ ಜಯ

ಜೈಪುರ (ಪಿಟಿಐ): ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿಯ ಏಳು ಸಂಸದರಲ್ಲಿ ನಾಲ್ವರು ಗೆದ್ದರೆ, ಮೂವರು ಪರಾಭವಗೊಂಡರು.

ಬಿಜೆಪಿಯು ಸಂಸದರಾದ ದಿಯಾ ಕುಮಾರಿ (ರಾಜಸಮಂದ್), ರಾಜ್ಯವರ್ಧನ್‌ ಸಿಂಗ್‌ ರಾಠೋಡ್ (ಜೈಪುರ ಗ್ರಾಮಾಂತರ), ಭಗೀರಥ ಚೌಧರಿ (ಅಜ್ಮೇರ್), ಬಾಬಾ ಬಾಲಕನಾಥ (ಅಲ್ವಾರ್), ನರೇಂದ್ರ ಕುಮಾರ್ (ಜುಂಜುನು), ದೇವ್‌ಜೀ ಪಟೇಲ್ (ಜಾಲೋರ್‌) ಮತ್ತು ರಾಜ್ಯಸಭಾ ಸದಸ್ಯ ಕಿರೋಡೀ ಲಾಲ್‌ ಮೀನಾ ಅವರನ್ನು ಕಣಕ್ಕಿಳಿಸಿತ್ತು.

ಇದರಲ್ಲಿ ಜೈಪುರ ರಾಜಮನೆತನದ ದಿಯಾ, ರಾಜ್ಯವರ್ಧನ್, ಬಾಲಕನಾಥ್‌ ಮತ್ತು ಮೀನಾ ಅವರು ಗೆದ್ದರು. 

ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷದ (ಆರ್‌ಎಲ್‌ಪಿ) ಸಂಚಾಲಕ ಮತ್ತು ನಾಗೌರ್‌ ಸಂಸದ ಹನುಮಾನ್ ಬೆನೀವಾಲ್‌ ಅವರು ಖಿನ್ವಸರ್‌ ಕ್ಷೇತ್ರದಿಂದ ಜಯಿಸಿದರು.

*******

* ಮಾಜಿ ಮುಖ್ಯಮಂತ್ರಿ ಬಿಜೆಪಿಯ ವಸುಂಧರಾ ರಾಜೇ ಅವರಿಗೆ ಝಾಲ್ರಾಪಾಟನ್ ಕ್ಷೇತ್ರದಲ್ಲಿ 53,193 ಮತಗಳ ಅಂತರದ ಗೆಲುವು. ಈ ಕ್ಷೇತ್ರದಿಂದ ಅವರು ಸತತ ಐದನೇ ಬಾರಿ ಆಯ್ಕೆ

* ಮುಖ್ಯಮಂತ್ರಿ ಅಶೋಕ್ ಗೆಹಲೋತ್‌ ಅವರು ಸರ್ದಾರ್‌ಪುರ ಕ್ಷೇತ್ರದಿಂದ ಆರನೇ ಬಾರಿ ಗೆದ್ದರು

* ಟೊಂಕ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌, ಬಿಜೆಪಿಯ ಅಜಿತ್‌ ಸಿಂಗ್ ಮೆಹ್ತಾ ವಿರುದ್ಧ 29,475 ಮತಗಳಿಂದ ಗೆದ್ದರು 

* ಬಿಜೆಪಿ ನಾಯಕಿ, ರಾಜಸಮಂದ್‌ ಕ್ಷೇತ್ರದ ಸಂಸದೆ ದಿಯಾ ಕುಮಾರಿ ಅವರು ವಿದ್ಯಾಧರ್‌ ನಗರ ಕ್ಷೇತ್ರದಿಂದ 71,368 ಮತಗಳಿಂದ ಜಯಿಸಿದರು

* ಕೇಂದ್ರದ ಮಾಜಿ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಠೋಡ್‌ ಅವರು ಝೋಟ್ವಾಡಾ ಕ್ಷೇತ್ರದಿಂದ 50,167 ಮತಗಳಿಂದ ಗೆದ್ದರು

* 20 ಮಹಿಳಾ ಅಭ್ಯರ್ಥಿಗಳಿಗೆ ಗೆಲುವು; ಕಳೆದ ಬಾರಿ 24 ಮಂದಿ ಗೆದ್ದಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.