ADVERTISEMENT

51 ಟ್ರ್ಯಾಕ್ಟರ್ ಮೂಲಕ 51 ಕಿ.ಮೀ ಮದುವೆ ಮೆರವಣಿಗೆ: ಟ್ರ್ಯಾಕ್ಟರ್ ಓಡಿಸಿಕೊಂಡು ಬಂದ ವರ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜೂನ್ 2023, 9:35 IST
Last Updated 13 ಜೂನ್ 2023, 9:35 IST
Venugopala K.
   Venugopala K.

ಬರ್ಮರ್: ರಾಜಸ್ಥಾನದ ಬರ್ಮರ್ ಜಿಲ್ಲೆಯಲ್ಲಿ 51 ಟ್ರಾಕ್ಟರ್ ಮೂಲಕ ನಡೆದ ಮದುವೆಯ ಮೆರವಣಿಗೆ ಎಲ್ಲರ ಗಮನ ಸೆಳೆದಿದೆ. 51 ಟ್ರ್ಯಾಕ್ಟರ್‌ಗಳ ಪೈಕಿ ಒಂದನ್ನು ವರನೇ ಓಡಿಸಿದ್ದು ವಿಶೇಷವಾಗಿತ್ತು.

ನನ್ನ ಮದುವೆ ಮೆರವಣಿಗೆಯಲ್ಲಿ ಒಂದು ಟ್ರ್ಯಾಕ್ಟರ್ ಬಳಸಲಾಗಿತ್ತು. ನನ್ನ ಮಗನ ಮದುವೆಯ ಮೆರವಣಿಗೆ ಹೆಚ್ಚು ವಿಶಿಷ್ಟವಾಗಿರಲೆಂದು 51 ಟ್ರ್ಯಾಕ್ಟರ್ ಬಳಸಿದ್ದಾಗಿ ವರನ ತಂದೆ ಹೇಳಿದ್ದಾರೆ ಎಂದು ಎಎನ್‌ಐ ಟ್ವೀಟಿಸಿದೆ.

ಗುಡಮಳನಿ ಗ್ರಾಮದ ಪ್ರಕಾಶ್ ಚೌಧರಿ ಎಂಬಾತ ರೊಲಿ ಗ್ರಾಮದ ಮಮತಾ ಎಂಬುವರನ್ನು ಸೋಮವಾರ ಬೆಳಿಗ್ಗೆ ವರಿಸಿದ್ದಾರೆ.

ADVERTISEMENT

ವರನ ಮನೆಯಿಂದ 51 ಕಿ.ಮೀ ದೂರದ ವಧುವಿನ ರೊಲಿ ಗ್ರಾಮದವರೆಗೆ ಮದುವೆ ದಿಬ್ಬಣದ ಮೆರವಣಿಗೆ ನಡೆದಿದೆ. 51 ಟ್ರ್ಯಾಕ್ಟರ್‌ಗಳಲ್ಲಿ ನೆಂಟರಿಷ್ಟರು, ಕುಟುಂಬದ ಸದಸ್ಯರು ಸೇರಿ 200ಕ್ಕೂ ಅಧಿಕ ಮಂದಿ ಇದ್ದರು.

‘ನನ್ನ ಕುಟುಂಬದ ಪ್ರಮುಖ ವೃತ್ತಿ ಕೃಷಿ. ಪ್ರತಿಯೊಬ್ಬರೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಟ್ರ್ಯಾಕ್ಟರ್ ರೈತನ ಗುರುತಾಗಿದೆ. ನನ್ನ ಅಪ್ಪನ ಮದುವೆಯ ಮೆರವಣಿಗೆಗೆ ಒಂದು ಟ್ರ್ಯಾಕ್ಟರ್ ಬಳಸಲಾಗಿತ್ತು. ನನ್ನ ಮದುವೆ ಮೆರವಣಿಗೇಕೆ 51 ಟ್ರ್ಯಾಕ್ಟರ್ ಬಳಸಬಾರದೆಂದು ಎಲ್ಲರೂ ಯೋಚಿಸಿದ್ದರು’ಎಂದು ವರ ಪ್ರಕಾಶ್ ಚೌಧರಿ ಎಎನ್‌ಐಗೆ ತಿಳಿಸಿದ್ದಾನೆ.

‘ನನ್ನ ತಂದೆ ಮತ್ತು ತಾತನ ಮದುವೆಯಲ್ಲಿ ಒಂಟೆಗಳನ್ನು ಮೆರವಣಿಗೆಗೆ ಬಳಸಲಾಗಿತ್ತು. ನಮ್ಮ ಕುಟುಂಬದಲ್ಲಿ 20–30 ಟ್ರ್ಯಾಕ್ಟರ್‌ಗಳಿವೆ. ನನ್ನ ಸ್ನೇಹಿತರ ಟ್ರ್ಯಾಕ್ಟರ್‌ಗಳನ್ನು ಸೇರಿಸಿ ಒಟ್ಟು 51 ಟ್ರಾಕ್ಟರ್‌ಗಳನ್ನು ಮೆರವಣಿಗೆಗೆ ಬಳಸಿದೆವು. ನಾವು ಕೃಷಿಗೆ ಟ್ರ್ಯಾಕ್ಟರ್ ಬಳಸುತ್ತೇವೆ. ಮದುವೆ ಮೆರವಣಿಗೆಯನ್ನೂ ಇವುಗಳಲ್ಲಿ ಏಕೆ ಮಾಡಬಾರದು?ಎಂದು ಚಿಂತಿಸಿದೆವು’ಎಂದು ವಧುವಿನ ತಂದೆ ಜೆಥರಾಮ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.