ADVERTISEMENT

ರಾಜಸ್ಥಾನ ರಾಜಕೀಯ | ಸಚಿನ್ ಪೈಲಟ್‌ ಮುಂದಿನ ನಡೆ ಏನು?

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 21:28 IST
Last Updated 14 ಜುಲೈ 2020, 21:28 IST
ಸಚಿನ್‌ ಪೈಲಟ್‌
ಸಚಿನ್‌ ಪೈಲಟ್‌   

ನವದೆಹಲಿ: ‘ಸತ್ಯವನ್ನು ಅದುಮಿಡಬಹುದು, ಆದರೆ ಸೋಲಿಸಲಾಗದು’ ಎಂದು ಉಪಮುಖ್ಯಮಂತ್ರಿ ಸ್ಥಾನ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಯಿಂದ ವಜಾಗೊಂಡ ಬಳಿಕ ಸಚಿನ್‌ ಪೈಲಟ್‌ ಟ್ವೀಟ್‌ ಮಾಡಿದ್ದಾರೆ. ಪೈಲಟ್‌ ಅವರ ಮುಂದಿನ ನಡೆ ಏನು ಎಂಬುದು ತಕ್ಷಣಕ್ಕೆ ತಿಳಿದು ಬಂದಿಲ್ಲ. ಆದರೆ, ಬಿಜೆಪಿ ಸೇರುವುದಿಲ್ಲ ಎಂಬುದನ್ನು ಅವರು ಈ ಹಿಂದೆಯೇ ಸ್ಪಷ್ಟಪಡಿಸಿದ್ದರು.

ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ, ಮುಖಂಡರಾದ ಪ್ರಿಯಾಂಕಾ ಗಾಂಧಿ ವಾದ್ರಾ, ಪಿ. ಚಿದಂಬರಂ, ಕೆ.ಸಿ. ವೇಣುಗೋಪಾಲ್‌ ಸೇರಿ ಹಲವರು ಪೈಲಟ್‌ ಅವರ ಬಂಡಾಯ ಶಮನಕ್ಕೆ ಯತ್ನಿಸಿದ್ದಾರೆ. ಆದರೆ, ಅದು ಫಲ ನೀಡಿಲ್ಲ.

‘ಸಚಿನ್‌ ಪೈಲಟ್‌ ಮತ್ತು ಅವರ ಕೆಲವು ಸಹೋದ್ಯೋಗಿಗಳು ಬಿಜೆಪಿಯ ಬಲೆಗೆ ಬಿದ್ದಿರುವುದು ಬೇಸರ ತಂದಿದೆ’ ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ.

ADVERTISEMENT

ಸಂಖ್ಯಾಬಲವು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರ ಪರವಾಗಿದೆ ಎಂಬುದು ಖಚಿತವಾದ ಬಳಿಕ, ಪೈಲಟ್‌ ಮತ್ತು ಅವರ ಬೆಂಬಲಿಗರನ್ನು ವಜಾ ಮಾಡುವ ನಿರ್ಧಾರಕ್ಕೆ ಕಾಂಗ್ರೆಸ್ ಪಕ್ಷವು ಬಂದಿದೆ ಎನ್ನಲಾಗಿದೆ. 109 ಸದಸ್ಯರ ಬೆಂಬಲವನ್ನು ಗೆಹ್ಲೋಟ್‌ ಹೊಂದಿದ್ದಾರೆ. ತಮಗೆ 30 ಶಾಸಕರ ಬೆಂಬಲ ಇದೆ ಎಂದು ಪೈಲಟ್‌ ಹೇಳಿಕೊಂಡಿದ್ದರು. ಅವರ ಜತೆಗೆ 16 ಶಾಸಕರು ಮಾತ್ರ ಇದ್ದಾರೆ ಎನ್ನಲಾಗುತ್ತಿದೆ.

‘ಪೈಲಟ್‌ ಕೈಯಲ್ಲಿ ಏನೂ ಇಲ್ಲ. ಅವರು ಬಿಜೆಪಿಯ ದಾಳ ಮಾತ್ರ. ಪೈಲಟ್‌ ಮತ್ತು ಅವರ ಬೆಂಬಲಿಗರು ತಂಗಿರುವ ಹೋಟೆಲ್‌ ಕೂಡ ಬಿಜೆ‍ಪಿಯವರಿಗೆ ಸೇರಿದ್ದು. ಬೇರೆ ರಾಜ್ಯಗಳಲ್ಲಿನ ಸರ್ಕಾರ ಉರುಳಿಸುವುದರ ಉಸ್ತುವಾರಿ ವಹಿಸಿದ್ದವರೇ ಈಗಿನ ಸ್ಥಿತಿಯನ್ನು ನಿರ್ವಹಿಸುತ್ತಿದ್ದಾರೆ’ ಎಂದು ಗೆಹ್ಲೋಟ್‌ ಹೇಳಿದ್ದಾರೆ.

ಬಲಾಬಲ ಲೆಕ್ಕಾಚಾರ
200 ಸದಸ್ಯರ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಪಕ್ಷವು 107 ಶಾಸಕರನ್ನು ಹೊಂದಿದೆ. ಪಕ್ಷೇತರರಾಗಿ ಆಯ್ಕೆಯಾದ 13 ಶಾಸಕರು, ಸಿಪಿಎಂ ಮತ್ತು ಭಾರತೀಯ ಟ್ರೈಬಲ್‌ ಪಾರ್ಟಿಯ (ಬಿಟಿಪಿ) ತಲಾ ಇಬ್ಬರು ಮತ್ತು ರಾಷ್ಟ್ರೀಯ ಲೋಕದಳದ (ಆರ್‌ಎಲ್‌ಡಿ) ಒಬ್ಬ ಶಾಸಕರ ಬೆಂಬಲ ಇದೆ ಎಂದು ಕಾಂಗ್ರೆಸ್‌ ಹೇಳಿಕೊಂಡಿತ್ತು.

ಈಗ, ಕಾಂಗ್ರೆಸ್‌ನ ಬಣ ಸಂಘರ್ಷ ಶಮನವಾಗುವವರೆಗೆ ತಟಸ್ಥವಾಗಿ ಉಳಿಯಲು ಸಿಪಿಎಂ ಮತ್ತು ಬಿಟಿಪಿ ನಿರ್ಧರಿಸಿವೆ. ಸರ್ಕಾರ ಉರುಳಿಸುವ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಕಾರಣಕ್ಕೆ ಮೂವರು ಪಕ್ಷೇತರರಿಂದ ಕಾಂಗ್ರೆಸ್ ಪಕ್ಷವು ಅಂತರ ಕಾಯ್ದುಕೊಂಡಿದೆ.

ತಮಗೆ ಕಾಂಗ್ರೆಸ್‌ನ 30 ಶಾಸಕರು ಮತ್ತು ಕೆಲವು ಪಕ್ಷೇತರ ಶಾಸಕರ ಬೆಂಬಲ ಇದೆ ಎಂದು ಪೈಲಟ್‌ ಹೇಳಿಕೊಂಡಿದ್ದಾರೆ. ಸೋಮವಾರ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಪೈಲಟ್‌ ಬೆಂಬಲಿಗರಾದ 18 ಶಾಸಕರು ಗೈರುಹಾಜರಾಗಿದ್ದರು ಎಂದು ಮೂಲಗಳು ಹೇಳಿವೆ.

ಬಿಜೆಪಿಯು ಹೊಂದಿರುವ ಶಾಸಕರ ಸಂಖ್ಯೆ: 72.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.