ADVERTISEMENT

ರಾಜಸ್ಥಾನ ಸರ್ಕಾರ ಪತನಗೊಳಿಸಲು ಸಂಚಿನ ಆರೋಪ: ಸಂಜಯ್ ಜೈನ್ ಬಂಧನ

ಪಿಟಿಐ
Published 18 ಜುಲೈ 2020, 1:48 IST
Last Updated 18 ಜುಲೈ 2020, 1:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜೈಪುರ: ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಸರ್ಕಾರ ಪತನಗೊಳಿಸಲು ಸಂಚು ಹೂಡಿದ ಪ್ರಕರಣದ ಆರೋಪಿ ಸಂಜಯ್ ಜೈನ್‌ರನ್ನು ರಾಜಸ್ಥಾನದ ವಿಶೇಷ ಕಾರ್ಯಾಚರಣೆ ಪಡೆಯ (ಎಸ್‌ಒಜಿ) ಪೊಲೀಸರು ಬಂಧಿಸಿದ್ದಾರೆ. ಶಾಸಕರ ಖರೀದಿ ವಿಚಾರಕ್ಕೆ ಸಂಬಂಧಿಸಿ ನಡೆದಿದೆ ಎನ್ನಲಾದ ಸಂಭಾಷಣೆಯ ಧ್ವನಿಮುದ್ರಣವನ್ನು ಕಾಂಗ್ರೆಸ್ ಶುಕ್ರವಾರ ಬಿಡುಗಡೆ ಮಾಡಿತ್ತು. ಅದರಲ್ಲಿ ಸಂಜಯ್ ಜೈನ್ ಹೆಸರೂ ಇದೆ.

ಸರ್ಕಾರ ಪತನಗೊಳಿಸುವ ಸಂಚಿನ ಕುರಿತು ಕಾಂಗ್ರೆಸ್ ನೀಡಿದ ದೂರಿನ ಆಧಾರದಲ್ಲಿ ಎಸ್‌ಒಜಿ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದರು. ಕಾಂಗ್ರೆಸ್‌ ದೂರಿನಲ್ಲಿ ‘ಗಜೇಂದ್ರ ಸಿಂಗ್‌’, ಭವರ್‌ಲಾಲ್‌ ಶರ್ಮಾ ಹಾಗೂ ಸಂಜಯ್‌ ಜೈನ್‌ ಹೆಸರಿತ್ತು.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಆಡಿಯೊ ಕುರಿತು ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿ ವಿಚಾರಣೆ ನಡೆಸುವ ಸಲುವಾಗಿ ಜೈನ್‌ರನ್ನು ಬಂಧಿಸಲಾಗಿದೆ ಎಂದು ಎಸ್‌ಒಜಿ ಹೆಚ್ಚುವರಿ ಮಹಾನಿರ್ದೇಶಕ ಅಶೋಕ್ ರಾಥೋಡ್ ತಿಳಿಸಿದ್ದಾರೆ.

ADVERTISEMENT

ಜೈನ್‌ರನ್ನು ಗುರುವಾರ ಮತ್ತು ಶುಕ್ರವಾರ ವಿಚಾರಣೆಗೆ ಒಳಪಡಿಸಲಾಗಿದೆ. ಬಳಿಕ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಂಗ್ರೆಸ್‌ನ ಮುಖ್ಯ ವಿಪ್ ಮಹೇಶ್ ಜೋಶಿ ನೀಡಿದ ದೂರಿನದ ಆಧಾರದಲ್ಲಿ ಎರಡು ಎಫ್ಐಆರ್ ದಾಖಲಿಸಲಾಗಿತ್ತು. ಆರೋಪಿಗಳ ವಿರುದ್ಧ ಶಾಸಕರ ಖರೀದಿಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್‌ 124–ಎ (ದೇಶದ್ರೋಹ) ಹಾಗೂ 120–ಬಿ (ಸಂಚು) ಅಡಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.

ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲ, ‘ಕೇಂದ್ರಸ ಸಚಿವ ಗಜೇಂದ್ರಸಿಂಗ್‌ ಶೆಖಾವತ್‌ ಅವರು ರಾಜಸ್ಥಾನ ಸರ್ಕಾರ ಉರುಳಿಸುವ ಸಂಚು ರೂಪಿಸಿದ್ದರು’ ಎಂದು ಆರೋಪಿಸಿದ್ದಲ್ಲದೆ, ಅವರು ಮಾತನಾಡಿದ್ದು ಎನ್ನಲಾದ ಎರಡು ಧ್ವನಿಮುದ್ರಿಕೆಗಳನ್ನೂ ಬಿಡುಗಡೆ ಮಾಡಿದ್ದರು. ಆದರೆ ಅದರಲ್ಲಿರುವ ಧ್ವನಿ ನನ್ನದಲ್ಲ, ಯಾವುದೇ ವಿಚಾರಣೆ ಎದುರಿಸಲು ನಾನು ಸಿದ್ಧ ಎಂದು ಸಚಿವರು ಹೇಳಿದ್ದಾರೆ.

ಈ ಮಧ್ಯೆ, ರಾಜಸ್ಥಾನ ವಿಧಾನಸಭೆ ಸ್ಪೀಕರ್‌ ನೀಡಿರುವ ಅನರ್ಹತೆ ನೋಟಿಸ್‌ ವಿಚಾರದಲ್ಲಿ 19 ಶಾಸಕರ ವಿರುದ್ಧ ಮಂಗಳವಾರದವರೆಗೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್‌ ಶುಕ್ರವಾರ ಸೂಚಿಸಿತ್ತು. ಹೀಗಾಗಿ ಸಚಿನ್‌ ಪೈಲಟ್‌ ನೇತೃತ್ವದ ಬಣ ಸದ್ಯಕ್ಕೆ ನಿರಾಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.