ಜೈಪುರ: ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ಜನಿಸಿದ ಹೆಣ್ಣು ಹುಲಿ ಮರಿಗೆ ಪ್ಯಾರಾಲಿಂಪಿಕ್ ವಿಜೇತೆ ಅವನಿ ಲೆಖರಾ ಅವರ ಹೆಸರನ್ನು ಇಡಲಾಗಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ತಿಳಿಸಿದ್ದಾರೆ.
ಒಟ್ಟು ಮೂರು ಹುಲಿ ಮರಿಗಳು ಜನಿಸಿದ್ದು, ಇನ್ನೆರಡು ಹುಲಿ ಮರಿಗೆ ಚಿರಂಜೀವಿ ಮತ್ತು ಚಿರಾಯು ಎಂದು ನಾಮಕರಣ ಮಾಡಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಶೋಕ್ ಗೆಹಲೋತ್, 'ಅಂತರರಾಷ್ಟ್ರೀಯ ಹುಲಿ ದಿನವನ್ನು ಹೆಚ್ಚು ಐತಿಹಾಸಿಕವಾಗಿ ಆಚರಿಸಲು ನಿರ್ಧರಿಸಿದ್ದು, ರಣಥಂಬೋರ್‌ನಲ್ಲಿ ಜನಿಸಿದ ಹೆಣ್ಣು ಹುಲಿ ಮರಿಗೆ ಪ್ಯಾರಾಲಿಂಪಿಕ್ ವಿಜೇತೆ ಅವನಿ ಲೆಖರಾ ಅವರ ಹೆಸರಿಡಲಾಗಿದೆ. ಈ ಹಿಂದೆ ಜನಿಸಿದ ಹೆಣ್ಣು ಮರಿಗೆ(ಟಿ–17) ಕಾಮೆನ್‌ವೆಲ್ತ್‌ನ ಚಿನ್ನದ ಪದಕ ವಿಜೇತೆ ಕೃಷ್ಣ ಪೂನಿಯಾ ಅವರ ಹೆಸರನ್ನು ಇಡಲಾಗಿತ್ತು' ಎಂದರು.
'ದೇಶದಲ್ಲಿ ಹುಲಿಗಳು ವಿನಾಶದ ಅಂಚಿನಲ್ಲಿದ್ದಾಗ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1973ರಲ್ಲಿ 'ಪ್ರಾಜೆಕ್ಟ್ ಟೈಗರ್' ಅನ್ನು ಪ್ರಾರಂಭಿಸಿದರು. ಇದು ದೇಶದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಅಭೂತಪೂರ್ವ ಹೆಚ್ಚಳಕ್ಕೆ ಕಾರಣವಾಯಿತು' ಎಂದು ಗೆಹಲೋತ್ ಹೇಳಿದರು.
'ಕಳೆದ ಒಂದು ತಿಂಗಳಲ್ಲಿ ರಾಜಸ್ಥಾನದ ರಣಥಂಬೋರ್‌ನಲ್ಲಿ ಆರು ಹುಲಿ ಮರಿಗಳು ಜನಿಸಿದ್ದು, ರಾಜಸ್ಥಾನ ಸರ್ಕಾರ ರಾಜ್ಯದ ಅರಣ್ಯ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಲು ಬದ್ಧತೆಯಿಂದ ಕೆಲಸ ಮಾಡುತ್ತಿದೆ' ಎಂದು ಹೇಳಿದರು.
2020ರ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಲೆಖರಾ ಅವರು ಚಿನ್ನ ಹಾಗೂ ಕಂಚಿನ ಪದಕ ಗೆದ್ದಿದ್ದರು.
ಹುಲಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 29ರಂದು ‘ಅಂತರರಾಷ್ಟ್ರೀಯ ಹುಲಿ ದಿನ‘ವೆಂದು ಆಚರಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.