ADVERTISEMENT

ರಾಜೀವ್‌ ಗಾಂಧಿ ಹಂತಕರ ಬಿಡುಗಡೆ: ಸುಪ್ರೀಂಗೆ ಕೇಂದ್ರದಿಂದ ಮರುಪರಿಶೀಲನಾ ಅರ್ಜಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ನವೆಂಬರ್ 2022, 16:26 IST
Last Updated 17 ನವೆಂಬರ್ 2022, 16:26 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳ ಅವಧಿಪೂರ್ವ ಬಿಡುಗಡೆ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಕೇಂದ್ರ ಸರ್ಕಾರವು ಗುರುವಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ.

‘ಪ್ರಕರಣದಲ್ಲಿ ತಾನು ಪ್ರತಿವಾದಿಯಾಗಿದ್ದರೂ ಕೂಡ ತನ್ನ ಅಭಿಪ್ರಾಯ ಆಲಿಸದೆ, ಅದಕ್ಕೆ ಅವಕಾಶ ನೀಡದೆ ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡುವ ಸಂಬಂಧ ಆದೇಶ ಹೊರಡಿಸಲಾಗಿದೆ’ ಎಂದು ಕೇಂದ್ರವು ತನ್ನ ಅರ್ಜಿಯಲ್ಲಿ ಹೇಳಿದೆ.

ಸಂವಿಧಾನದ 142ನೇ ವಿಧಿಯು ಅನ್ವಯ ವಿಶೇಷ ಅಧಿಕಾರವನ್ನು ಬಳಸಿ ಸುಪ್ರೀಂ ಕೋರ್ಟ್‌ ಈ ನಿರ್ಧಾರ ತೆಗೆದುಕೊಂಡಿತ್ತು. ನಳಿನಿ ಸೇರಿ, ಜೀವಾವಧಿ ಶಿಕ್ಷೆಯಲ್ಲಿದ್ದ ರವಿಚಂದ್ರನ್, ಶಾಂತನ್, ಮುರುಗನ್, ರಾಬರ್ಟ್‌ ಪಯಾಸ್‌ ಮತ್ತು ಜಯಕುಮಾರ್‌ ಅವರಿಗೆ ಬಿಡುಗಡೆಯ ಅವಕಾಶ ದೊರೆತಿತ್ತು.

ADVERTISEMENT

ಸುಪ್ರೀಂ ಕೋರ್ಟ್‌ನ ಈ ಆದೇಶದ ವಿರುದ್ಧ ಕಾಂಗ್ರೆಸ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಹಂತಕರನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡುವುದರ ಪರವಾಗಿದ್ದ ರಾಜೀವ್ ಗಾಂಧಿ ಪತ್ನಿ ಮತ್ತು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿಲುವಿನಿಂದ ಕಾಂಗ್ರೆಸ್‌ ಅಂತರ ಕಾಯ್ದುಕೊಂಡಿದೆ.

ರಾಜೀವ್ ಹಂತಕರನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡಬೇಕು ಎಂದು 2018ರಲ್ಲಿ ತಮಿಳುನಾಡು ಸರ್ಕಾರವು ಶಿಫಾರಸು ಮಾಡಿತ್ತು. ಆದರೆ, ಶಿಫಾರಸನ್ನು ರಾಜ್ಯಪಾಲರು ಕೇಂದ್ರ ಸರ್ಕಾರದ ಪರಾಮರ್ಶೆಗೆ ಕಳುಹಿಸಿದ್ದರು. ಹಂತಕರನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡಬಾರದು ಎಂದು ಕೇಂದ್ರ ಸರ್ಕಾರವು ಹೇಳಿತ್ತು. ರಾಜೀವ್ ಹತ್ಯೆಯ ಸಂಚುಕೋರರಲ್ಲಿ ಒಬ್ಬರಾದ ಎ.ಜಿ.ಪೇರರಿವಾಳನ್ ಇದರ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಮರಣದಂಡನೆ ಮಾರ್ಪಾಡಾಗಿ ಈಗ ಬಿಡುಗಡೆ
ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಹಂತಕರು 23ರಿಂದ 31 ವರ್ಷಗಳಷ್ಟು ಜೈಲುಶಿಕ್ಷೆ ಅನುಭವಿಸಿದ್ದಾರೆ.

ಈ ಪ್ರಕರಣದಲ್ಲಿ ಅವರಿಗೆ ಮೊದಲು ಮರಣದಂಡನೆ ಘೋಷಿಸಲಾಗಿತ್ತು. ಆನಂತರ ಅದನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಲಾಗಿತ್ತು. ಈಗ ಜೀವಾವಧಿ ಶಿಕ್ಷೆಯಿಂದಲೂ ಅವರನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡಲಾಗಿದೆ.

1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ ರಾಜೀವ್ ಅವರು ಚುನಾವಣಾ ಪ್ರಚಾರ ನಡೆಸುವಾಗ ಆತ್ಮಹತ್ಯಾ ಬಾಂಬ್‌ ದಾಳಿ ನಡೆದಿತ್ತು.

ಧನು ಎಂಬಾಕೆ ಬಾಂಬ್‌ ಸ್ಫೋಟಿಸಿಕೊಂಡು, ರಾಜೀವ್ ಅವರ ಹತ್ಯೆ ಮಾಡಿದ್ದಳು. ಈ ಹತ್ಯೆಗೆ ಎ.ಜಿ.ಪೇರರಿವಾಳನ್ ಮತ್ತು ಈ ಆರೂ ಮಂದಿ ಸಂಚು ರೂಪಿಸಿ, ಹತ್ಯೆ ನಡೆಸಲು ನೆರವಾಗಿದ್ದರು. 1998ರಲ್ಲಿ ತಮಿಳುನಾಡಿನ ವಿಚಾರಣಾ ನ್ಯಾಯಾಲಯವು ಎಲ್ಲಾ ಹಂತಕರಿಗೆ ಮರಣದಂಡನೆ ಘೋಷಿಸಿತ್ತು. ಮರಣದಂಡನೆಯನ್ನು ಸುಪ್ರೀಂ ಕೋರ್ಟ್‌ 1999ರಲ್ಲಿ ಎತ್ತಿಹಿಡಿದಿತ್ತು.

ಮುರುಗನ್, ಶಾಂತನ್‌ ಮತ್ತು ಎ.ಜಿ.ಪೇರರಿವಾಳನ್‌ ಅವರು ಕ್ಷಮಾಪಣಾ ಅರ್ಜಿ ಸಲ್ಲಿಸಿದ್ದರು. ಅರ್ಜಿಯು ಇತ್ಯರ್ಥವಾಗದೇ ದೀರ್ಘಾವಧಿ ಕಳೆದಿದೆ ಎಂಬ ಆಧಾರದಲ್ಲಿ 2014ರಲ್ಲಿ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಲಾಗಿತ್ತು. ಆನಂತರ ಎ.ಜಿ.ಪೇರರಿವಾಳನ್ ಅವಧಿಪೂರ್ವ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿದ್ದರು.

ಪೇರರಿವಾಳನ್‌ ಸೇರಿ ಜೀವಾವಧಿ ಶಿಕ್ಷೆಯಲ್ಲಿರುವ ಏಳೂ ಮಂದಿಯನ್ನು ಅವಧಿಪೂರ್ವ ಬಿಡುಗಡೆ ಮಾಡಲು ತಮಿಳುನಾಡು ಸಚಿವ ಸಂಪುಟವು ಅನುಮೋದನೆ ನೀಡಿತ್ತು. ಆದರೆ, ಸಂಪುಟದ ಶಿಫಾರಸನ್ನು ರಾಜ್ಯಪಾಲರು ಕೇಂದ್ರ ಸರ್ಕಾರದ ಪರಾಮರ್ಶೆಗೆ ಕಳುಹಿಸಿದ್ದರು. ಇದರ ವಿರುದ್ಧ ಪೇರರಿವಾಳನ್ ಮತ್ತು ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. 2022ರ ಮೇನಲ್ಲಿ ಈ ಅರ್ಜಿಯನ್ನು ಇತ್ಯರ್ಥಪಡಿಸಿದ್ದ ಸುಪ್ರೀಂ ಕೋರ್ಟ್‌, ಪೇರರಿವಾಳನ್ ಅವರ ಅವಧಿಪೂರ್ವ ಬಿಡುಗಡೆಗೆ ಆದೇಶಿಸಿತ್ತು. ‘ಇಂತಹ ಪ್ರಕರಣಗಳಲ್ಲಿ ರಾಜ್ಯಪಾಲರು ಸಚಿವ ಸಂಪುಟದ ನಿರ್ಧಾರಕ್ಕೆ ಬದ್ಧವಾಗಿರಬೇಕು’ ಎಂದು ತೀರ್ಪು ನೀಡಿತ್ತು.

ಉಳಿದವರು ಸಲ್ಲಿಸಿದ್ದ ಅರ್ಜಿಯಲ್ಲೂ ಇದೇ ತೀರ್ಪನ್ನು ಸುಪ್ರೀಂ ಕೋರ್ಟ್‌ ಪುನರಾವರ್ತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.