ADVERTISEMENT

ರಾಜೀವ್ ಗಾಂಧಿ ಹತ್ಯೆ: ಶ್ರೀಲಂಕಾದ ನಾಲ್ವರ ಗಡಿಪಾರಿಗೆ ಕ್ರಮ

ಮದ್ರಾಸ್‌ ಹೈಕೋರ್ಟ್‌ಗೆ ಕೇಂದ್ರ ಸರ್ಕಾರದ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2023, 16:15 IST
Last Updated 15 ಸೆಪ್ಟೆಂಬರ್ 2023, 16:15 IST
ರಾಜೀವ್ ಗಾಂಧಿ (ಪ್ರಜಾವಾಣಿ ಸಂಗ್ರಹ ಚಿತ್ರ)
ರಾಜೀವ್ ಗಾಂಧಿ (ಪ್ರಜಾವಾಣಿ ಸಂಗ್ರಹ ಚಿತ್ರ)   

ಚೆನ್ನೈ (ಪಿಟಿಐ): ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಶ್ರೀಲಂಕಾದ ನಾಲ್ವರನ್ನು ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮದ್ರಾಸ್‌ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಿಂದ ಹಿಂದಿನ ವರ್ಷ ಬಿಡುಗಡೆಯ ಆದೇಶ ಪಡೆದ ಏಳು ಜನರಲ್ಲಿ ಒಬ್ಬರಾದ ಎಸ್‌.ನಳಿನಿ ಸಲ್ಲಿಸಿದ್ದ ಅರ್ಜಿಗೆ ಪ್ರತಿಯಾಗಿ ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ ಅರುಣ್‌ಶಕ್ತಿಕುಮಾರ್‌, ಕೇಂದ್ರ ಗೃಹ ಸಚಿವಾಲಯದ ಹೇಳಿಕೆಯ ಪ್ರಮಾಣಪತ್ರವನ್ನು ಗುರುವಾರ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ.

‘ತಿರುಚಿನಾಪಳ್ಳಿಯ ವಿಶೇಷ ಶಿಬಿರದಲ್ಲಿರುವ (ವಿದೇಶಿಯರ ಬಂಧನ ಕೇಂದ್ರ) ತನ್ನ ಪತಿ ಶ್ರೀಹರನ್ ಅಲಿಯಾಸ್ ಮುರುಗನ್ ಅವರನ್ನು ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ’ ನಳಿನಿ ಹೈಕೋರ್ಟ್‌ ಮೊರೆ ಹೋಗಿದ್ದರು.

ADVERTISEMENT

‘ಲಂಡನ್‌ನಲ್ಲಿರುವ ಮಗಳು–ಅಳಿಯನೊಟ್ಟಿಗೆ ಮುರುಗನ್ ನೆಲೆಸಲು ಬಯಸಿದ್ದಾರೆ. ಇದಕ್ಕೆ ಅವಶ್ಯವಿರುವ ಪಾಸ್‌ಪೋರ್ಟ್‌ಗಾಗಿ ಶ್ರೀಲಂಕಾ ರಾಯಭಾರಿ ಕಚೇರಿ ಸಂಪರ್ಕಿಸಬೇಕು. ಆದರೆ ವಿದೇಶಿಯರ ಬಂಧನ ಕೇಂದ್ರದಲ್ಲಿರುವುದರಿಂದ ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ತನ್ನೊಟ್ಟಿಗೆ ಚೆನ್ನೈನಲ್ಲಿ ವಾಸಿಸಲು ಅವಕಾಶ ಮಾಡಿಕೊಡಲಿಕ್ಕಾಗಿ ವಿಶೇಷ ಶಿಬಿರದಿಂದ ಬಿಡುಗಡೆ ಮಾಡಬೇಕು ಎಂದು ಕೋರಿ ಕಳೆದ ಮೇ 20ರಂದು ಪ್ರಾದೇಶಿಕ ನೋಂದಣಿ ಅಧಿಕಾರಿಗೆ ಮನವಿ ಮಾಡಿದ್ದರೂ, ಇದೂವರೆಗೂ ಸ್ಪಂದನೆ ಸಿಕ್ಕಿಲ್ಲ’ ಎಂದು ನಳಿನಿ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

‘ಶ್ರೀಲಂಕಾದ ನಾಲ್ವರು ದೋಣಿ ಮೂಲಕ ಭಾರತಕ್ಕೆ ಯಾವೊಂದು ದಾಖಲೆಯಿಲ್ಲದೆ ಅಕ್ರಮವಾಗಿ ಬಂದಿದ್ದಾರೆ. ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಯಂತೆ ಇವರನ್ನು ಮರಳಿ ಕಳಿಸುವ ತನಕವೂ, ದೇಶದೊಳಗೆ ಸಂಚರಿಸಲು ಅವಕಾಶ ಕೊಡುವಂತಿಲ್ಲ. ಇವರಿಗೆ ಸಂಬಂಧಿಸಿದ ದಾಖಲಾತಿಗಳನ್ನು ಒದಗಿಸುವಂತೆ ಶ್ರೀಲಂಕಾ ಹೈಕಮಿಷನ್‌ಗೆ 2022ರ ನ.22ರಂದು ಪತ್ರ ಕಳಿಸಲಾಗಿದೆ’ ಎಂದು ಅಧಿಕಾರಿ ತಿಳಿಸಿದ್ದಾರೆ.

‘ನಳಿನಿ ತಮ್ಮ ಪತಿಯನ್ನು ಬಿಡುಗಡೆ ಮಾಡುವಂತೆ ಮೇ ತಿಂಗಳಲ್ಲಿ ನಮ್ಮ ಕಚೇರಿಗೆ ಕೋರಿದ್ದರು. ವಿದೇಶಾಂಗ ಸಚಿವಾಲಯದ ಪ್ರತಿಕ್ರಿಯೆಗಾಗಿ ಕಾಯುತ್ತಿರುವುದರಿಂದ, ಈ ಮನವಿ ನಮ್ಮಲ್ಲೇ ಉಳಿದಿದೆ’ ಎಂದಿದ್ದಾರೆ.

ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ ಮುರುಗನ್‌ ಜೊತೆಗೆ ಶಿಕ್ಷೆಗೊಳಪಟ್ಟಿದ್ದ ಶ್ರೀಲಂಕಾದವರಾದ‌ ಸಾಂತನ್, ರಾಬರ್ಟ್ ಪಯಸ್ ಮತ್ತು ಜಯಕುಮಾರ್ ಅವರನ್ನು ಸುಪ್ರೀಂಕೋರ್ಟ್‌ ಕಳೆದ ವರ್ಷವೇ ಬಿಡುಗಡೆಗೊಳಿಸಿ ಆದೇಶ ಹೊರಡಿಸಿತ್ತು. ಭಾರತದವರಾದ ಪೆರಾರಿವಾಲನ್, ನಳಿನಿ ಮತ್ತು ರವಿಚಂದ್ರನ್ ಅವರನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.