ರಾಜ್‌ಕೋಟ್ ಅಗ್ನಿ ದುರಂತ
ಪಿಟಿಐ
ರಾಜ್‌ಕೋಟ್: ಕಳೆದ ತಿಂಗಳು 27 ಜನರ ಸಾವಿಗೆ ಕಾರಣವಾದ ಅಗ್ನಿ ದುರಂತ ಸಂಭವಿಸಿದ ಇಲ್ಲಿನ ಗೇಮ್ ಝೋನ್‌ಗೆ ಸಂಬಂಧಿಸಿದ ದಾಖಲೆಗಳನ್ನು ತಿದ್ದಿದ ಆರೋಪದಲ್ಲಿ ರಾಜ್‌ಕೋಟ್ ನಗರ ಪಾಲಿಕೆಯ (ಆರ್‌ಎಂಸಿ) ಇಬ್ಬರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರ್‌ಎಂಸಿ ಸಹಾಯಕ ನಗರ ಯೋಜನಾಧಿಕಾರಿ ರಾಜೇಶ್ ಮಕ್ವಾನಾ ಮತ್ತು ಸಹಾಯಕ ಎಂಜಿನಿಯರ್ ಜೈದೀಪ್ ಚೌಧರಿ ಅವರನ್ನು ನಗರ ಅಪರಾಧ ವಿಭಾಗದ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಅಗ್ನಿ ದುರಂತದ ಬಳಿಕ, ಗೇಮ್ ಝೋನ್‌ಗೆ ಸಂಬಂಧಿಸಿದ ಮಾಹಿತಿಯನ್ನು ತಿದ್ದದ ಆರೋಪ ಇವರ ಮೇಲಿದೆ ಎಂದು ಅಪರಾಧ ವಿಭಾಗದ ಡಿಸಿಪಿ ಪಾರ್ಥರಾಜ್‌ಸಿನ್ಹ ಗೋಹಿಲ್ ತಿಳಿಸಿದ್ದಾರೆ.
'ಅಗ್ನಿ ದುರಂತದ ಬಳಿಕ, ಸರ್ಕಾರಿ ದಾಖಲೆಗಳಲ್ಲಿ ಟಿಆರ್‌ಪಿ ಗೇಮ್ ಝೋನ್‌ಗೆ ಸಂಬಂಧಿಸಿದ ಮಾಹಿತಿಯನ್ನು ಬಂಧಿತರು ತಿದ್ದಿದ್ದಾರೆ. ಅಲ್ಲದೆ, ನಕಲಿ ದಾಖಲೆಗಳನ್ನೂ ಸೃಷ್ಟಿಸಿದ್ದಾರೆ' ಎಂದು ಗೋಹಿಲ್ ಮಾಹಿತಿ ನೀಡಿದ್ದಾರೆ.
ಇದರೊಂದಿಗೆ ಬಂಧಿತರ ಸಂಖ್ಯೆ 12ಕ್ಕೇರಿದೆ. ಇದರಲ್ಲಿ, ಆರು ಮಂದಿ ಸರ್ಕಾರಿ ನೌಕರರೂ ಇದ್ದಾರೆ. ಗುಜರಾತ್‌ನ ರಾಜ್‌ಕೋಟ್‌ನಲ್ಲಿರುವ ಟಿಆರ್‌ಪಿ ಗೇಮ್ ಝೋನ್‌ನಲ್ಲಿ ಮೇ 25ರಂದು ದುರಂತ ಸಂಭವಿಸಿತ್ತು ಎಂದು ಅವರು ಹೇಳಿದ್ದಾರೆ.
ಸರ್ಕಾರಿ ನೌಕರರಾದ ರಾಜ್‌ಕೋಟ್ ನಗರ ಯೋಜನಾಧಿಕಾರಿ ಎಂ.ಡಿ.ಸಗಾತಿಯಾ, ಸಹಾಯಕ ನಗರ ಯೋಜನಾಧಿಕಾರಿಗಳಾದ ಮುಕೇಶ್ ಮಕ್ವಾನಾ, ಗೌತಮ್ ಜೋಶಿ ಮತ್ತು ಕಲಾವದ್ ರಸ್ತೆ ಅಗ್ನಿಶಾಮಕ ಠಾಣೆ ಅಧಿಕಾರಿ ರೋಹಿತ್ ವಿಗೋರ ಅವರನ್ನು ಈಗಾಗಲೇ ಬಂಧಿಸಲಾಗಿದೆ.
ಗೇಮ್ ಝೋನ್‌ನ 6 ಮಂದಿ ಸಹ-ಮಾಲೀಕರಲ್ಲಿ ಅಶೋಕ್ ಸಿನ್ಹ್ ಜಡೇಜಾ ಎಂಬವರು ಗುರುವಾರ ಸಂಜೆ ಪೊಲೀಸರಿಗೆ ಶರಣಾಗಿದ್ದಾರೆ. ಅವರು ದುರಂತದ ಬೆನ್ನಲ್ಲೇ ತಲೆಮರೆಸಿಕೊಂಡಿದ್ದರು. ಬಾಕಿ ಐವರಲ್ಲಿ ಒಬ್ಬ ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದು, ಉಳಿದವರನ್ನು ಹಾಗೂ ವ್ಯವಸ್ಥಾಪಕನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.