ADVERTISEMENT

ಕೋವಿಡ್ ವಿರುದ್ಧದ ಹೋರಾಟ ಅತಿ ದೊಡ್ಡ ಅಗೋಚರ ಯುದ್ಧ: ರಾಜನಾಥ್ ಸಿಂಗ್

ಪಿಟಿಐ
Published 19 ಏಪ್ರಿಲ್ 2020, 11:33 IST
Last Updated 19 ಏಪ್ರಿಲ್ 2020, 11:33 IST
ರಾಜನಾಥ್ ಸಿಂಗ್ –ಪಿಟಿಐ ಚಿತ್ರ
ರಾಜನಾಥ್ ಸಿಂಗ್ –ಪಿಟಿಐ ಚಿತ್ರ   

ನವದೆಹಲಿ: ಕೊರೊನಾ ವೈರಸ್ (ಕೋವಿಡ್–19) ವಿರುದ್ಧದ ಹೋರಾಟವು ನಮ್ಮ ಜೀವಿತಾವಧಿಯಲ್ಲೇ ಅತಿ ದೊಡ್ಡ ಅಗೋಚರ ಯುದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಮಾನವೀಯತೆಯ ವಿರುದ್ಧದ ಈ ಯುದ್ಧವು ದೇಶದ ಆರೋಗ್ಯ ಮತ್ತು ಆರ್ಥಿಕ ಸುರಕ್ಷತೆಯ ಮೇಲೆ ಅನೇಕ ಪರಿಣಾಮ ಬೀರುತ್ತಿದೆ’ ಎಂದು ಹೇಳಿದ್ದಾರೆ.

‘ಒಂದು ದೇಶವಾಗಿ ನಾವು ಕೋವಿಡ್ ವಿರುದ್ಧ ಸಮರೋಪಾದಿಯಲ್ಲಿ ಹೋರಾಡುತ್ತಿದ್ದೇವೆ. ಸರ್ಕಾರದ ಎಲ್ಲ ಏಜೆನ್ಸಿಗಳು ನಿಕಟ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಸಶಸ್ತ್ರ ಪಡೆಗಳೂ ದೇಶಕ್ಕೆ ನೆರವಾಗುತ್ತಿವೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಕೋವಿಡ್ ಸೋಂಕು ಸೇನೆಯ ಕಾರ್ಯಾಚರಣೆ ಮೇಲೆ ಪರಿಣಾಮ ಬೀರಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರು (ಸಶಸ್ತ್ರ ಪಡೆಗಳು) ಎಲ್ಲ ರೀತಿಯ ಸನ್ನಿವೇಶವನ್ನು ಎದುರಿಸಲು ಸಿದ್ಧರಾಗಿದ್ದಾರೆ. ವಿರೋಧಿ ಶಕ್ತಿಗಳಿಂದ ಭಾರತದ ಸಾರ್ವಭೌಮತ್ವವನ್ನು ರಕ್ಷಿಸಲು ಎಲ್ಲ ರೀತಿಯಲ್ಲಿಯೂ ಸಿದ್ಧರಿದ್ದಾರೆ’ ಎಂದು ಹೇಳಿದ್ದಾರೆ.

ಜಮ್ಮು–ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಗ್ಗೆ ಉಲ್ಲೇಖಿಸಿದ ಅವರು, ಗುಪ್ತಚರ ಸುಳಿವು ಆಧಾರಿತ ಕಾರ್ಯಾಚರಣೆ, ವಿರೋಧಿಗಳ ನೆಲೆಗಳ ಮೇಲಿನ ದಾಳಿಯ ಮೂಲಕ ಭಾರತವು ಶತ್ರುಗಳ ಮೇಲೆ ಪ‍್ರಾಬಲ್ಯ ಸಾಧಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಬೇರೆ ಪ್ರದೇಶ, ರಾಜ್ಯದಿಂದ ಬರುವ ಪ್ರತಿಯೊಬ್ಬ ಯೋಧ ಹಾಗೂ ಸಿಬ್ಬಂದಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸುವಂತೆ ಸೇನೆಗೆ ಸೂಚಿಸಲಾಗಿದೆ. ಯುದ್ಧನೌಕೆ ಮತ್ತು ಜಲಾಂತರ್ಗಾಮಿಗಳಲ್ಲಿಯೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.