ADVERTISEMENT

ಜಮ್ಮು–ಕಾಶ್ಮೀರ: 17 ಮಂದಿ ನಿಗೂಢ ಸಾವು; ನೂರು ಜನರ ವಿಚಾರಣೆ ನಂತರವೂ ಸಿಗದ ಸುಳಿವು

ಜುಲ್ಫಿಕರ್ ಅಹ್ಮದ್

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 10:02 IST
Last Updated 23 ಜನವರಿ 2025, 10:02 IST
<div class="paragraphs"><p>ಒಂದೂವರೆ ತಿಂಗಳಲ್ಲಿ ನಿಗೂಢ ಕಾರಣದಿಂದ 17 ಮಂದಿ ಮೃತಪಟ್ಟಿರುವ ಬದಹಾಲ್‌ ಗ್ರಾಮಕ್ಕೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮಂಗಳವಾರ ಭೇಟಿ ನೀಡಿದ್ದರು</p></div>

ಒಂದೂವರೆ ತಿಂಗಳಲ್ಲಿ ನಿಗೂಢ ಕಾರಣದಿಂದ 17 ಮಂದಿ ಮೃತಪಟ್ಟಿರುವ ಬದಹಾಲ್‌ ಗ್ರಾಮಕ್ಕೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮಂಗಳವಾರ ಭೇಟಿ ನೀಡಿದ್ದರು

   

ಪಿಟಿಐ ಚಿತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆ ರಾಔರಿಯ ಬಧಾಲ್‌ ಗ್ರಾಮದಲ್ಲಿ 17 ಜನರು ಮೃತಪಟ್ಟಿರುವುದಕ್ಕೆ ಕಾರಣ ಏನು ಎಂಬುದಕ್ಕೆ ಸಂಬಂಧಿಸಿದ ನಿಗೂಢತೆ ಮುಂದುವರಿದಿದೆ. ಕಾರಣ ಪತ್ತೆ ಸಲುವಾಗಿ, ರಚಿಸಲಾಗಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ನೂರಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಿದ್ದರೂ, ಈವರೆಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ.

ADVERTISEMENT

2024ರ ಡಿಸೆಂಬರ್‌ 7ರಿಂದ ಜನವರಿ 19ರ ಅವಧಿಯಲ್ಲಿ ನಿಗೂಢವಾಗಿ ಸಾವಿಗೀಡಾಗಿರುವ ಇವೆರಲ್ಲ, ಪರಸ್ಪರ ಸಂಬಂಧ ಹೊಂದಿರುವ ಮೂರು ಕುಟುಂಬಗಳಿಗೆ ಸೇರಿದವರು.

ಎಲ್ಲರ ಸಾವಿಗೆ ನಿಖರ ಕಾರಣವೇನೆಂಬುದು ಈವರೆಗೆ ಸ್ಪಷ್ಟವಾಗಿಲ್ಲ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ಸೇರಿದಂತೆ ಸ್ಥಳೀಯ ಮತ್ತು ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳು ಇನ್ನಷ್ಟೇ ಅದನ್ನು ಪತ್ತೆ ಹಚ್ಚಬೇಕಿದೆ.

ಪೊಲೀಸರು, ವಿಧಿವಿಜ್ಞಾನ ತಜ್ಞರು, ರೋಗಶಾಸ್ತ್ರಜ್ಞರು, ಆರೋಗ್ಯಾಧಿಕಾರಿಗಳು ಮತ್ತು ಇತರ ತಜ್ಞರು ಇರುವ 11 ಸದಸ್ಯರ ತಂಡಕ್ಕೆ ಈ ಪ್ರಕರಣದ ತನಿಖೆಯ ಹೊಣೆ ವಹಿಸಲಾಗಿದೆ. ಆಹಾರದಲ್ಲಿ ವಿಷ, ಕಲುಷಿತ ನೀರು, ವಿಷಕಾರಿ ಪದಾರ್ಥಗಳ ಬಳಕೆ ಸೇರಿದಂತೆ ಸರಣಿ ಸಾವಿಗೆ ಕಾರಣವಾಗಿರಬಹುದಾದ ಹಲವು ಸಾಧ್ಯತೆಗಳ ಬಗ್ಗೆ ತನಿಖೆ ನಡೆಯುತ್ತಿದೆ.

'ಮೊದಲ ಸಾವು ಸಂಭವಿಸಿದಾಗ ಮದುವೆ ಸಮಾರಂಭದಲ್ಲಿ ಹಾಜರಾಗಿದ್ದವರೂ ಸೇರಿದಂತೆ ನೂರಕ್ಕೂ ಹೆಚ್ಚು ಜನರನ್ನು ವಿಚಾರಿಸಿದ್ದೇವೆ. ಆದಾಗ್ಯೂ, ನಿಶ್ಚಿತವಾದ ಒಂದೇ ಒಂದು ಸುಳಿವು ದೊರೆತಿಲ್ಲ' ಎಂದು ತನಿಖಾ ತಂಡದಲ್ಲಿರುವ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಪ್ರಜಾವಾಣಿಗೆ ತಿಳಿಸಿದ್ದಾರೆ.

ರಹಸ್ಯ ಭೇದಿಸಲು ಎಸ್‌ಐಟಿ ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ ಎಂದಿರುವ ಅವರು, 'ನಮ್ಮಿಂದ ಸಾಧ್ಯವಾದಷ್ಟು ಅತ್ಯುತ್ತಮ ಪ್ರಯತ್ನ ಮುಂದುವರಿಸುತ್ತೇವೆ' ಎಂದು ಭರವಸೆ ನೀಡಿದ್ದಾರೆ.

ಒಂದರೆ ಹಿಂದೆ ಒಂದರಂತೆ ಸಂಭವಿಸಿದ ಸಾವುಗಳು, ಇಡೀ ಗ್ರಾಮದಲ್ಲಿ ಭಯ ಮತ್ತು ಅನಿಶ್ಚಿತ ವಾತಾವರಣ ಸೃಷ್ಟಿಸಿವೆ. ಊರಿನವರು ದುರಂತಕ್ಕೆ ಕಾರಣವೇನೆಂಬುದನ್ನು ತಿಳಿದುಕೊಳ್ಳಲು ಕಾತರರಾಗಿದ್ದಾರೆ. ಎಸ್‌ಐಟಿಯು, ಜನರನ್ನು ವಿಚಾರಣೆಗೆ ಒಳಪಡಿಸುವುದಷ್ಟೇ ಅಲ್ಲದೆ, ವಿಧಿವಿಜ್ಞಾನ ಮತ್ತು ವೈದ್ಯಕೀಯ ಪರೀಕ್ಷೆಗಳನ್ನೂ ನಡೆಸಿದೆ.

ರಕ್ತ, ಪ್ಲಾಸ್ಮಾ, ಆಹಾರ, ನೀರು ಮತ್ತು ಪರಿಸರ ಮಾದರಿ ಸೇರಿದಂತೆ ಇಲ್ಲಿಯವರೆಗೆ 12,500 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಪರೀಕ್ಷೆಗಾಗಿ ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳಿಗೆ ಕಳುಹಿಸಲಾಗಿದೆ. ಬ್ಯಾಕ್ಟೀರಿಯಾದಂತಹ ಸೂಕ್ಷ್ಮಾಣು ಜೀವಿಗಳ ಸೋಂಕು ಸರಣಿ ಸಾವಿಗೆ ಕಾರಣವಾಗಿಲ್ಲ ಎಂಬುದು ಪ್ರಾಥಮಿಕ ಹಂತದ ಪರೀಕ್ಷೆಗಳಿಂದ ಖಚಿತವಾಗಿದೆ.

ರಾಜೌರಿಯಿಂದ 60 ಕಿ.ಮೀ. ದೂರದಲ್ಲಿರುವ ಬಧಾಲ್‌ ಗ್ರಾಮದಲ್ಲಿ ಸದ್ಯ ಮೃತಪಟ್ಟಿರುವವರ ಪೈಕಿ ಮೊದಲ ವ್ಯಕ್ತಿಯಲ್ಲಿ ಕಳೆದ ವರ್ಷ ಡಿಸೆಂಬರ್ 5 ರಂದು ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಆ ಬಳಿಕ ಬೆನ್ನು ಬೆನ್ನಿಗೆ ಸಾವು ಸಂಭವಿಸಿವೆ. ಇದೀಗ ಈ ವಿಚಾರವು ರಾಷ್ಟ್ರೀಯ ಆರೋಗ್ಯ ಕಾಳಜಿಯಾಗಿ ಮಾರ್ಪಟ್ಟಿದೆ.

ನಿಗೂಢ ಕಾಯಿಲೆಯು ಗ್ರಾಮಸ್ಥರಿಗೆ ಹರಡುವುದನ್ನು ತಡೆಯುವ ಸಲುವಾಗಿ, ಇಡೀ ಪ್ರದೇಶವನ್ನು 'ನಿಯಂತ್ರಿತ ವಲಯ' ಎಂದು ಘೋಷಿಸಿರುವ ಅಧಿಕಾರಿಗಳು, ಹಲವು ನಿರ್ಬಂಧ ಕ್ರಮಗಳನ್ನು ಕೈಗೊಂಡಿದ್ದಾರೆ. 

ಆಹಾರ ಸರಪಳಿಯಲ್ಲಿನ ವಿಷದ ಅಂಶವು ದುರಂತಕ್ಕೆ ಕಾರಣವಾಗಿರಬಹುದು. ಆದರೆ, ಏಕಾಏಕಿಯಾಗಿ ಸಾಂಕ್ರಾಮಿಕ ಕಾಯಿಲೆ ಹರಡಿದೆ ಎಂಬುದನ್ನು ನಿರ್ಣಯಿಸಲು ಸೂಕ್ತ ಪುರಾವೆಗಳಿಲ್ಲ ಎಂಬುದಾಗಿ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಹಾಗೂ ರಾಜೌರಿಯ ಸರ್ಕಾರಿ ವೈದ್ಯಕೀಯ ಕಾಲೇಜಿನ ಸಮದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ. ಶುಜಾ ಖಾದ್ರಿ ಹೇಳಿದ್ದಾರೆ.

ತನಿಖೆ ಮುಂದುವರಿದಿದೆ. ಆದರೆ, ಕಾರಣವೇನೆಂಬುದನ್ನು ತಿಳಿಯಲು ಕಾಯುತ್ತಿರುವ ಬಧಾಲ್‌ ಗ್ರಾಮಸ್ಥರ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.