ADVERTISEMENT

Adani Row | ರಾಜ್ಯಸಭೆಯಲ್ಲಿ ಗದ್ದಲ: ಕಲಾಪ ಮಾ.13ಕ್ಕೆ ಮುಂದೂಡಿಕೆ

ಅದಾನಿ ಪ್ರಕರಣ ಜೆಪಿಸಿ ತನಿಖೆಗೆ ಒಪ್ಪಿಸುವಂತೆ ವಿರೋಧ ಪಕ್ಷಗಳ ಪಟ್ಟು

ಪಿಟಿಐ
Published 13 ಫೆಬ್ರುವರಿ 2023, 14:35 IST
Last Updated 13 ಫೆಬ್ರುವರಿ 2023, 14:35 IST
ವಿರೋಧ ಪಕ್ಷಗಳ ಸಂಸದರು ಸಭಾಪತಿ ಪೀಠದ ಮುಂಭಾಗಕ್ಕೆ ತೆರಳಿ ಪ್ರತಿಭಟನೆ ನಡೆಸಿದರು–ಪಿಟಿಐ ಚಿತ್ರ 
ವಿರೋಧ ಪಕ್ಷಗಳ ಸಂಸದರು ಸಭಾಪತಿ ಪೀಠದ ಮುಂಭಾಗಕ್ಕೆ ತೆರಳಿ ಪ್ರತಿಭಟನೆ ನಡೆಸಿದರು–ಪಿಟಿಐ ಚಿತ್ರ    

ನವದೆಹಲಿ: ಅದಾನಿ ಸಮೂಹದ ವಿರುದ್ಧದ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಒಪ್ಪಿಸಲೇಬೇಕೆಂದು ಪಟ್ಟು ಹಿಡಿದ ವಿರೋಧ ಪಕ್ಷಗಳ ಸಂಸದರು ಪದೇ ಪದೇ ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ರಾಜ್ಯಸಭೆ ಬಜೆಟ್‌ ಅಧಿವೇಶನವನ್ನು ಮಾರ್ಚ್‌ 13ಕ್ಕೆ ಮುಂದೂಡಲಾಯಿತು.

ಸೋಮವಾರ ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷಗಳ ಸಂಸದರು ಗದ್ದಲ ನಡೆಸಿದರು. ಅದಾನಿ ಸಮೂಹದ ವಿರುದ್ಧದ ಪ್ರಕರಣವನ್ನು ಜೆಪಿಸಿ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದರು. ಕಾಂಗ್ರೆಸ್‌ ಸಂಸದೆ ರಜನಿ ಪಾಟೀಲ್‌ ಮೇಲೆ ಹೇರಲಾಗಿರುವ ಅಮಾನತು ಆದೇಶ ರದ್ದುಪಡಿಸುವಂತೆಯೂ ಆಗ್ರಹಿಸಿದರು. ಹೀಗಾಗಿ ಸಭಾಪತಿ ಜಗದೀಪ್‌ ಧನಕರ್‌ ಅವರು ಕೆಲ ಕಾಲ ಕಲಾಪ ಮುಂದೂಡಿದರು.

ಮತ್ತೆ ಕಲಾಪ ಆರಂಭವಾದಾಗ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡುವಂತೆ ವಿರೋಧ ಪಕ್ಷಗಳ ಸಂಸದರು ಒತ್ತಾಯಿಸಿದರು. ಇದಕ್ಕೆ ಧನಕರ್‌ ಒಪ್ಪಿಗೆ ನೀಡಿದರು.

ADVERTISEMENT

ಖರ್ಗೆ ಅವರು ಮಾತನಾಡಲು ಆರಂಭಿಸಿದಾಗ ಆಡಳಿತಾರೂಢ ಪಕ್ಷದ ಕೆಲ ಸಂಸದರು ಘೋಷಣೆ ಕೂಗಿದರು. ಪ್ರತಿಯಾಗಿ ವಿರೋಧ ಪಕ್ಷಗಳ ಸಂಸದರೂ ಘೋಷಣೆ ಮೊಳಗಿಸಿದರು. ಕೆಲವರು ಸಭಾಪತಿ ಪೀಠದ ಮುಂಭಾಗಕ್ಕೆ ತೆರಳಿ ಪ್ರತಿಭಟನೆ ನಡೆಸಿದರು.

‘ಸದನದಲ್ಲಿ ಸಂಸದರು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಇಡೀ ಜಗತ್ತು ನೋಡುತ್ತಿದೆ. ನಾಗರಿಕರು ನಮ್ಮಿಂದ ಈ ಬಗೆಯ ವರ್ತನೆ ನಿರೀಕ್ಷಿಸುತ್ತಾರೆಯೇ’ ಎಂದು ಪ್ರಶ್ನಿಸಿದ ಧನಕರ್‌ ಅವರು ಎಲ್ಲರೂ ಸದನದ ಶಿಷ್ಟಾಚಾರ ಪಾಲಿಸಬೇಕು. ಪ್ರಶ್ನೋತ್ತರ ಅವಧಿ ಮುಂದುವರಿಸಲು ಸಹಕರಿಸಬೇಕು ಎಂದು ವಿರೋಧ ಪಕ್ಷಗಳ ಸಂಸದರಿಗೆ ಸೂಚಿಸಿದರು.

ಹೀಗಿದ್ದರೂ ಗದ್ದಲ ಮುಂದುವರಿದಾಗ ‘ಮಾರ್ಚ್‌ 13ಕ್ಕೆ ಕಲಾಪ ಮುಂದೂಡುತ್ತಿದ್ದೇನೆ’ ಎಂದು ಸಭಾಪತಿ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.