ADVERTISEMENT

ಹಕ್ಕುಗಳ ಉಲ್ಲಂಘನೆ: ಒಬ್ರಯಾನ್, ಚಡ್ಡಾ ವಿರುದ್ಧದ ದೂರು ಹಕ್ಕು ಬಾಧ್ಯತಾ ಸಮಿತಿಗೆ

ಪಿಟಿಐ
Published 4 ಆಗಸ್ಟ್ 2023, 4:29 IST
Last Updated 4 ಆಗಸ್ಟ್ 2023, 4:29 IST
   

ನವದೆಹಲಿ: ಟಿಎಂಸಿ ಸಂಸದ ಡೆರೆಕ್ ಒಬ್ರಯಾನ್ ಹಾಗೂ ಆಮ್‌ ಆದ್ಮಿ ಪಕ್ಷದ ರಾಘವ ಚಡ್ಡಾ ಅವರು ಸದನದ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಎಂದು ಸಲ್ಲಿಕೆಯಾದ ದೂರುಗಳ ಪರಿಶೀಲನೆ ನಡೆಸಲು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್‌ ಅವರು ಸದನದ ಹಕ್ಕು ಬಾಧ್ಯತಾ ಸಮಿತಿಗೆ ವಹಿಸಿದ್ದಾರೆ.

ಡೆರೆಕ್ ಒಬ್ರಯಾನ್ ವಿರುದ್ಧ ಬಿಜೆಪಿ ಸಂಸದರಾದ ಲಕ್ಷ್ಮಿಕಾಂತ್‌ ಬಾಜಪೆಯಿ ಹಾಗೂ ಸುರೇಂದ್ರ ಸಿಂಗ್‌ ನಗರ್ ಮತ್ತು ರಾಘವ್ ಚಡ್ಡಾ ವಿರುದ್ಧ ಬಿಜೆಪಿಯ ಸುಶೀಲ್‌ ಕುಮಾರ್ ಮೋದಿ ಹಾಗೂ ದೀಪಕ್‌ ಪ್ರಕಾಶ್‌ ದೂರು ಸಲ್ಲಿಸಿದ್ದರು ಎಂದು ರಾಜ್ಯಸಭಾ ಸಚಿವಾಲಯ ಹೇಳಿದೆ.

ದೂರನ್ನು ಪರಿಗಣಿಸಿರುವ ರಾಜ್ಯಸಭಾ ಸಭಾಪತಿ ಧನಕರ್‌ ಅವರು, ರಾಜ್ಯಸಭೆಯ ಕಾರ್ಯವಿಧಾನ ಮತ್ತು ವ್ಯವಹಾರದ ನಡವಳಿಕೆಯ ನಿಯಮಗಳ ನಿಯಮ 203ರ ಅಡಿಯಲ್ಲಿ, ದೂರನ್ನು ಪರಿಶೀಲನೆ ನಡೆಸಿ, ತನಿಖೆ ಮಾಡಿ ವರದಿ ನೀಡುವಂತೆ ಹಕ್ಕುಬಾಧ್ಯತಾ ಸಮಿತಿಗೆ ವಹಿಸಿದ್ದಾರೆ.

ADVERTISEMENT

ಸಭಾಪತಿಗಳು ಕಡತದಿಂದ ತೆಗೆದು ಹಾಕಿದ್ದರೂ ಜುಲೈ 20ರಂದು ರಾಜ್ಯಸಭೆಯಲ್ಲಿ ಮಾಡಿದ ಭಾಷಣದ ವಿಡಿಯೊ ತುಣುಕನ್ನು ಡೆರೆಕ್ ಒಬ್ರಯಾನ್ ಅವರು ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿದ್ದಾರೆ ಎಂದು ರಾಜ್ಯಸಭೆಯಕಾರ್ಯವಿಧಾನ ಮತ್ತು ವ್ಯವಹಾರದ ನಡವಳಿಕೆಯ ನಿಯಮಗಳ ನಿಯಮ 188ರ ಅಡಿಯಲ್ಲಿ ದೂರು ನೀಡಲಾಗಿತ್ತು.

ಕಡತದಿಂದ ತೆಗೆದು ಹಾಕಲಾಗಿರುವ ಮಾಹಿತಿಯನ್ನು ಒಂದು ವಾರದಗಳಿಂದ ಸರಣಿ ಟ್ವೀಟ್‌ಗಳ ಮೂಲಕ ಅವರು ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ರಾಜ್ಯಸಭೆ ಹಾಗೂ ಸಭಾಪತಿಗಳ ಪೀಠಕ್ಕೆ ಅವಮಾನ ಆಗಿದೆ ಎಂದು ದೂರಿನಲ್ಲಿ ಹೇಳಲಾಗಿತ್ತು.

ಸಂಜಯ್‌ ಸಿಂಗ್‌ ಅವರ ಅಮಾನತು ಬಗ್ಗೆ ಮಾಧ್ಯಮಗಳಲ್ಲಿ ದಾರಿ ತಪ್ಪಿಸುವ ಹೇಳಿಕೆ ನೀಡಿದ್ದಕ್ಕೆ ಎಎಪಿ ಸಂಸದ ರಾಘವ ಚಡ್ಡಾ ಅವರ ವಿರುದ್ದ ದೂರು ಸಲ್ಲಿಸಲಾಗಿದೆ.

ಅಮಾನತ್ತಾದರೂ ಸಂಜಯ್ ಸಿಂಗ್ ಅವರು ಚೇಂಬರ್‌ನೊಳಗೆ ಕುಳಿತುಕೊಳ್ಳುವುದನ್ನು ಮುಂದುವರಿಸುತ್ತಾರೆ ಎಂದು ಟಿ.ವಿ ಸಂದರ್ಶನದಲ್ಲಿ ರಾಘವ ಚಡ್ಡಾ ಹೇಳಿದ್ದರು. ಇದು ರಾಜ್ಯಸಭೆ ಕಾರ್ಯವಿಧಾನ ಮತ್ತು ವ್ಯವಹಾರದ ನಡವಳಿಕೆಯ ನಿಯಮಗಳ ನಿಯಮ 256 ರ ಅಡಿಯಲ್ಲಿ ಒಳಗೊಂಡಿರುವ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಮತ್ತು ಅಧ್ಯಕ್ಷರ ಅಧಿಕಾರವನ್ನು ಉಲ್ಲಂಘಿಸುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಅಲ್ಲದೆ ರಾಘವ ಚಡ್ಡಾ ಅವರು ಟಿ.ವಿ ಸಂದರ್ಶನದಲ್ಲಿ ಸದನದ ಕಲಾಪಗಳನ್ನು ಸಂಪೂರ್ಣವಾಗಿ ತಪ್ಪಾಗಿ ನಿರೂಪಿಸಿದ್ದಾರೆ ಎಂದು ಇನ್ನೊಂದು ದೂರು ದಾಖಲಾಗಿದೆ. ಇದನ್ನು ಹಕ್ಕು ಬಾಧ್ಯತಾ ಸಮಿತಿಗೆ ವಹಿಸಲಾಗಿದೆ ಎಂದು ರಾಜ್ಯಸಭೆ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.