ಹರ್ಷವರ್ಧನ ಶೃಂಗ್ಲಾ, ಉಜ್ವಲ್ ನಿಕಮ್
ನವದೆಹಲಿ: ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶೃಂಗ್ಲಾ, ಹಿರಿಯ ವಕೀಲ ಉಜ್ವಲ್ ನಿಕಮ್, ಇತಿಹಾಸಕಾರ್ತಿ ಡಾ.ಮೀನಾಕ್ಷಿ ಜೈನ್ ಹಾಗೂ ಕೇರಳದ ಬಿಜೆಪಿ ನಾಯಕ ಸಿ.ಸದಾನಂದನ್ ಮಾಸ್ಟರ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ.
ಈ ಕುರಿತ ಅಧಿಸೂಚನೆಯನ್ನು ಗೃಹ ಸಚಿವಾಲಯ ಶನಿವಾರ ರಾತ್ರಿ ಪ್ರಕಟಿಸಿದೆ. ಇದರೊಂದಿಗೆ, ನಾಮನಿರ್ದೇಶನ ಕೋಟಾ ಅಡಿಯ ಎಲ್ಲ 12 ಸ್ಥಾನಗಳನ್ನು ಭರ್ತಿ ಮಾಡಿದಂತಾಗಿದೆ. ಜಮ್ಮು–ಕಾಶ್ಮೀರದಿಂದ ನಾಲ್ಕು ಹಾಗೂ ಹರಿಯಾಣದ ಒಂದು ಸ್ಥಾನ ಖಾಲಿ ಉಳಿದಿವೆ.
ಒಟ್ಟು 240 ಸದಸ್ಯ ಬಲದ ರಾಜ್ಯಸಭೆಯಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ ಈಗ 135 ಸಂಸದರ ಬೆಂಬಲ ಹೊಂದಿದಂತಾಗಿದೆ.
ಹೊಸದಾಗಿ ನಾಮನಿರ್ದೇಶನಗೊಂಡಿರುವ ಈ ಸಂಸದರ ಅಧಿಕಾರಾವಧಿ ಆರು ವರ್ಷ. ಸಂಸತ್ ಮುಂಗಾರು ಅಧಿವೇಶ ಆರಂಭಗೊಳ್ಳುವುದಕ್ಕೂ ಒಂದು ವಾರ ಮುಂಚೆ ಈ ಪ್ರಕ್ರಿಯೆ ನಡೆದಿದೆ. ಈ ಸಂಸದರು, ನಾಮನಿರ್ದೇಶನಗೊಂಡ ಆರು ತಿಂಗಳ ಒಳಗಾಗಿ ಯಾವುದಾದರೂ ಪಕ್ಷಕ್ಕೆ ಸೇರಬಹುದಾಗಿದೆ.
ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ನಾಲ್ವರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಿ, ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಶೃಂಗ್ಲಾ ಅವರು ಸಂಸತ್ ಕಾರ್ಯಕಲಾಪಗಳಿಗೆ ಮತ್ತಷ್ಟು ಮೆರುಗು ತರಲಿದ್ದರೆ, ನಿಕಮ್ ಅವರು ಸಾಂವಿಧಾನಿಕ ಮೌಲ್ಯಗಳನ್ನು ಬಲಪಡಿಸಲು ಶ್ರಮಿಸಿದವರು. ಸಾಮಾನ್ಯ ಪ್ರಜೆಗಳನ್ನು ಕೂಡ ಘನತೆಯಿಂದ ನೋಡಬೇಕು ಎಂಬುದನ್ನು ಖಾತ್ರಿಪಡಿಸುವುದಕ್ಕಾಗಿಯೂ ನಿಕಮ್ ಹೋರಾಡಿದ್ದಾರೆ’ ಎಂದು ಹೇಳಿದ್ದಾರೆ.
‘ಶಿಕ್ಷಣ, ಸಾಹಿತ್ಯ, ಇತಿಹಾಸ, ರಾಜಕೀಯವಿಜ್ಞಾನ ಕ್ಷೇತ್ರಕ್ಕೆ ಮೀನಾಕ್ಷಿ ಜೈನ್ ಅವರ ಕೊಡುಗೆ ಅನನ್ಯ. ಸದಾನಂದನ್ ಅವರು ಧೈರ್ಯ ಹಾಗೂ ಅನ್ಯಾಯಕ್ಕೆ ತಲೆಬಾಗುವುದಿಲ್ಲ ಎಂಬುದರ ಪ್ರತೀಕದಂತಿದ್ದಾರೆ. ರಾಷ್ಟ್ರದ ಪ್ರಗತಿಗಾಗಿ ಅವರು ಹೊಂದಿರುವ ಬದ್ಧತೆಯು ಹಿಂಸೆ ಮತ್ತು ಬೆದರಿಕೆಯಿಂದ ಕುಗ್ಗಿಲ್ಲ’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.